

ಬಂಕುರ: ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಿನ್ನೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ನ ಫೈನಲ್ ಪಂದ್ಯದಲ್ಲಿ ಭಾರತ ಸೋತು ವಿಶ್ವಕಪ್ ಕೈತಪ್ಪಿ ಹೋಗಿದೆ. ಇನ್ನು ಭಾರತವೇ ಗೆಲ್ಲುತ್ತದೆ ಎಂದು ಬೆಟ್ ಕಟ್ಟಿ ಯಾರ್ಯಾರು ಏನೇನು ಕಳೆದುಕೊಂಡಿದ್ದಾರೋ? ಆದರೆ ಇಲ್ಲೊಬ್ಬ ಯುವಕ ಭಾರತ ಸೋತ ಬೇಜಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪಶ್ಚಿಮಬಂಗಾಳದ ಬಂಕುರ ಜಿಲ್ಲೆಯ ರಾಹುಲ್ ಲೋಹರ್ ಎಂಬ 23 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡವ. ಈತ ಸ್ಥಳೀಯ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಬೆಲಿಯತೋರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಈ ಪ್ರಕರಣ ನಡೆದಿದೆ.
ನಿನ್ನೆ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಕೆಲಸಕ್ಕೆ ರಜೆ ಹಾಕಿದ್ದು, ಪಂದ್ಯದಲ್ಲಿ ಭಾರತ ಸೋತ ಬಳಿಕ ಈ ಸಾವಿಗೆ ಶರಣಾಗಿದ್ದಾನೆ. ಕ್ರಿಕೆಟ್ ಹೊರತಾಗಿ ಆತನಿಗೆ ಬೇರೆ ಯಾವುದೇ ಅಂಥ ಅಟ್ಯಾಚ್ಮೆಂಟ್ ಇರಲಿಲ್ಲ ಈತನ ಸಂಬಂಧಿ ಪೊಲೀಸರಿಗೆ ತಿಳಿಸಿದ್ದಾನೆ.
ಪೊಲೀಸರು ಇದನ್ನ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಇಂದು ಈತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಕ್ರಿಕೆಟ್ನಲ್ಲಿ ಭಾರತ ಸೋತಿದ್ದಕ್ಕೇ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದ್ದರೂ ಪೊಲೀಸರು ಬೇರೆ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.