ರಾಜಸ್ಥಾನ ರಾಯಲ್ಸ್ ಗೆಲುವಿನ ಓಟ: ಜುರೆಲ್ ಸೆಲ್ಯೂಟ್ ಸಂಭ್ರಮ

2 Min Read
ರಾಜಸ್ಥಾನ ರಾಯಲ್ಸ್ ಗೆಲುವಿನ ಓಟ: ಜುರೆಲ್ ಸೆಲ್ಯೂಟ್ ಸಂಭ್ರಮ

ಲಖನೌ: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ನಿರ್ವಹಣೆ ತೋರಿದ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್-17ರಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ. ನಾಯಕ ಸಂಜು ಸ್ಯಾಮ್ಸನ್ (71* ರನ್,33 ಎಸೆತ, 7 ಬೌಂಡರಿ, 4 ಸಿಕ್ಸರ್) ಬಿರುಸಿನಾಟ ಹಾಗೂ ಧ್ರುವ ಜುರೆಲ್ (52* ರನ್, 34 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕದ ನೆರವನಿಂದ ರಾಜಸ್ಥಾನ ರಾಯಲ್ಸ್ ತನ್ನ 9ನೇ ಲೀಗ್ ಪಂದ್ಯದಲ್ಲಿ ಆತಿಥೇಯ ಲಖನೌ ಸೂಪರ್‌ಜೈಂಟ್ಸ್ ಎದುರು 7 ವಿಕೆಟ್‌ಗಳಿಂದ ಸುಲಭ ಗೆಲುವು ದಾಖಲಿಸಿದೆ. ಟೂರ್ನಿಯಲ್ಲಿ 8ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿರುವ ಸಂಜು ಸ್ಯಾಮ್ಸನ್ ಪಡೆ ಪ್ಲೇಆ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿದೆ.

ಏಕನಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಲಖನೌ ಆರಂಭಿಕ ಆಘಾತದ ನಡುವೆಯೂ, ನಾಯಕ ಕೆಎಲ್ ರಾಹುಲ್ (76 ರನ್, 48 ಎಸೆತ, 8 ಬೌಂಡರಿ, 2 ಸಿಕ್ಸರ್) -ದೀಪಕ್ ಹೂಡಾ (50 ರನ್, 31 ಎಸೆತ, 7 ಬೌಂಡರಿ) ಜತೆಯಾಟದ ಬಲದಿಂದ 5 ವಿಕೆಟ್‌ಗೆ 196 ರನ್‌ಗಳ ಪೈಪೋಟಿಯುತ ಮೊತ್ತ ಪೇರಿಸಿತು. ಪ್ರತಿಯಾಗಿ ಜೋಸ್ ಬಟ್ಲರ್ (34) ಹಾಗೂ ಯಶಸ್ವಿ ಜೈಸ್ವಾಲ್ (24) ಒದಗಿಸಿದ ಉತ್ತಮ ಆರಂಭದ ನೆರವಿನಿಂದ ರಾಜಸ್ಥಾನ ರಾಯಲ್ಸ್, 19 ಓವರ್‌ಗಳಲ್ಲಿ 3 ವಿಕೆಟ್‌ಗೆ 199 ರನ್‌ಗಳಿಸಿ ಜಯದ ಓಟ ಮುಂದುವರಿಸಿದೆ.

ಸ್ಯಾಮ್ಸನ್-ಜುರೆಲ್ ಗೆಲುವಿನಾಟ: ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ರಾಜಸ್ಥಾನಕ್ಕೆ ಉತ್ತಮ ಆರಂಭ ಒದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 35 ಎಸೆತದಲ್ಲಿ 60 ರನ್ ಕಸಿದರು. 3 ಎಸೆತಗಳ ಅಂತರದಲ್ಲಿ ಆರಂಭಿಕರಿಬ್ಬರ ವಿಕೆಟ್ ಪಡೆದ ಲಖನೌ ಕಂಬ್ಯಾಕ್ ಮಾಡಿತು. ಇಂಪ್ಯಾಕ್ಟ್ ಪ್ಲೇಯರ್ ರಿಯಾನ್ ಪರಾಗ್ (14) ಹಾಗೂ ನಾಯಕ ಸಂಜು ಸ್ಯಾಮ್ಸನ್ 3ನೇ ವಿಕೆಟ್‌ಗೆ 15 ಎಸೆತಗಳಲ್ಲಿ 18 ರನ್‌ಗಳಿಸಿದರು. ಪರಾಗ್ ನಿರ್ಗಮನದ ಬಳಿಕ ಜತೆಯಾದ ಜುರೆಲ್ ಹಾಗೂ ಸ್ಯಾಮ್ಸನ್ ಲಖನೌ ಬೌಲರ್‌ಗಳಿಗೆ ಸವಾಲೊಡ್ಡಿದರು. ಇವರಿಬ್ಬರ ಜತೆಯಾಟಕ್ಕೆ ಲಖನೌ ಬೌಲರ್‌ಗಳು ಲಯ ತಪ್ಪಿದರು. ಸ್ಯಾಮ್ಸನ್ 28 ಎಸೆತಗಳಲ್ಲಿ ಟೂರ್ನಿಯ 4ನೇ ಅರ್ಧಶತಕ ಸಿಡಿಸಿದರೆ, ಜುರೆಲ್ 31 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕದೊಂದಿಗೆ ನಾಯಕನಿಗೆ ಸಮರ್ಥ ಬೆಂಬಲ ನೀಡಿದರು. ಸ್ಯಾಮ್ಸನ್-ಜುರೆಲ್ ಮುರಿಯದ 4ನೇ ವಿಕೆಟ್‌ಗೆ 62 ಎಸೆತಗಳಲ್ಲಿ 121 ರನ್ ಕಸಿದರು. 4 ರನ್ ಬೇಕಿದ್ದಾಗ ಸಿಕ್ಸರ್ ಸಿಡಿಸುವ ಮೂಲಕ ಸ್ಯಾಮ್ಸನ್ ಗೆಲುವು ಸಾರಿದರು.

See also  ಕಂಬಳ ಮತ್ತು ಜಲ್ಲಿಕಟ್ಟುಗೆ ಸುಪ್ರೀಂ ಕೋರ್ಟ್​ ಹಸಿರು ನಿಶಾನೆ

ಜುರೆಲ್ ಸೆಲ್ಯೂಟ್ ಸಂಭ್ರಮ: ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಯೋಧನ ಪುತ್ರನಾಗಿರುವ ಧ್ರುವ ಜುರೆಲ್ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ ಬಳಿಕ ಸೆಲ್ಯೂಟ್ ಮಾಡುವ ಮೂಲಕ, ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ತನ್ನ ತಂದೆ ನೇಮ್ ಚಾಂದ್‌ಗೆ ಗೌರವ ಸಲ್ಲಿಸಿದರು. ಮೂಲಃತ ಉತ್ತರ ಪ್ರದೇಶದ ಆಗ್ರಾದವರಾದ ಜುರೆಲ್, ಭಾರತ ಟೆಸ್ಟ್ ತಂಡದ ಪರವಾಗಿ ಅರ್ಧಶತಕ ಸಿಡಿಸಿದ ಬಳಿಕವೂ ಇದೇ ರೀತಿ ಸಂಭ್ರಮಿಸಿದ್ದರು.

Share This Article