ಯುದ್ಧ ಎಂದ್ರೆ ಬಾಲಿವುಡ್​ ಸಿನಿಮಾ ಅನ್ಕೊಂಡ್ರಾ?; ಅದು ಅಷ್ಟು ರೋಮ್ಯಾಂಟಿಕ್ ಅಲ್ಲ: ಮಾಜಿ ಸೇನಾ ಮುಖ್ಯಸ್ಥ​ ನರವಾಣೆ ಕ್ಲಾಸ್​​! IND-PAK

dk - 2025-05-12T152914.029
Published on

IND-PAK: ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನತೆ ಹಿನ್ನೆಲೆ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾಜಿ ಸೇನಾ ಮುಖ್ಯಸ್ಥ ಜನರಲ್​ ಮನೋಜ್​ ನರವಾಣೆ ಕೆಲ ಗಂಭೀರ ಹೇಳಿಕೆಗಳನ್ನು ನೀಡಿದ್ದಾರೆ. ಅಲ್ಲದೆ, ಎರಡು ದೇಶಗಳ ನಡುವೆ ಕದನ ವಿರಾಮ ಒಪ್ಪಂದ ಬಗ್ಗೆ ಮಾತನಾಡುವವರಿಗೆ ಯುದ್ಧ ಎಂದ್ರೆ ಬಾಲಿವುಡ್​ ಸಿನಿಮಾ ಅನ್ಕೊಂಡಿದ್ದೀರಾ? ಯುದ್ಧದಿಂದಾಗಿ ಗಡಿ ಗ್ರಾಮಗಳ ಜನರ ಪರಿಸ್ಥಿತಿ ಹೇಗಿತ್ತು ಅಂತ ಯಾರಿಗಾದರೂ ತಿಳಿದಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಹೌದು, ಭಾರತ -ಪಾಕಿಸ್ತಾನ ನಡುವಿನ ಉದ್ವಿಗ್ನತೆ ಬಹುತೇಕ ತೀವ್ರವಾದ ಬಳಿಕ ಕದನ ವಿರಾಮದ ಮಾತುಗಳು ಕೇಳಿಬಂದಿವೆ. ಅಲ್ಲದೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕದನ ವಿರಾಮದ ಬಗ್ಗೆ ಟ್ವೀಟ್​ ಮಾಡಿದ್ದರು. ಇದರಿಂದ ಬಹತೇಕರು ಕದನ ವಿರಾಮವೇಕೆ? ಪಾಕಿಗಳನ್ನು ಬಗ್ಗು-ಬಡೆಯಿರಿ, ನಮ್ಮ ಸೇನಾ ಮೇಲೆ ವಿಶ್ವಾಸವಿದೆ ಎನ್ನುತ್ತಿದ್ದಾರೆ. ಇದೀಗ ಇದರ ನಡುವೆ ನರವಾಣೆ, ಯುದ್ಧ ಎಂದ್ರೆ ಸುಮ್ಮನೆ ಅಲ್ಲ, ಯುದ್ಧದ ಬಗ್ಗೆ ತಿಳಿದಿಯೇ ಅದರಿಂದ ಎನೆಲ್ಲಾ ನಷ್ಟವಾಗುತ್ತದೆ ಗೊತ್ತೆ! ಅರ್ಥಿಕ ಪರಿಸ್ಥಿತಿ ಹದಗೇಡುತ್ತದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಯುದ್ಧ ಅಷ್ಟು ರೋಮ್ಯಾಂಟಿಕ್ ಅಲ್ಲ

'ಎಲ್ಲರೂ ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದ ಬಗ್ಗೆ ಮಾತನಾಡುತ್ತಿದ್ದಾರೆ. ನಿಜವಾಗಿಯೂ ಯುದ್ಧ ಎಂದರೇನು ಎಂದು ನಿಮಗೆ ತಿಳಿದಿದೆಯೇ? ಯುದ್ಧ ಬಾಲಿವುಡ್ ಸಿನಿಮಾ ಅಂತ ನೀವು ಭಾವಿಸುತ್ತೀರಾ? ಯುದ್ಧ ಅಷ್ಟು ರೋಮ್ಯಾಂಟಿಕ್ ಅಲ್ಲ. ನಾನು ಯುದ್ಧಕ್ಕೆ ಹೋಗಲು ಸಿದ್ಧನಾಗಿದ್ದರೂ ಸಹ, ನಾನು ರಾಜತಾಂತ್ರಿಕತೆಯನ್ನು ಮೊದಲ ಆಯ್ಕೆಯಾಗಿ ಪರಿಗಣಿಸುತ್ತೇನೆ. ಯುದ್ಧ ನಮ್ಮ ಕೊನೆಯ ಅಸ್ತ್ರವಾಗಿರಬೇಕು. ಅದಕ್ಕಾಗಿಯೇ ಪ್ರಧಾನಿ ಮೋದಿ ಇದು ಯುದ್ಧಗಳ ಯುಗವಲ್ಲ ಎಂದು ಹೇಳಿದರು. ಮೂರ್ಖರು ಯುದ್ಧಕ್ಕೆ ಹೋಗಲು ಒತ್ತಾಯಿಸುವ ಪರಿಸ್ಥಿತಿ ಎದುರಾದರೂ, ನಾವು ಅದನ್ನು ತಪ್ಪಿಸಲು ಒಲವು ತೋರಬೇಕು ಎಂದಿದ್ದಾರೆ.

ಯುದ್ಧವು ದುಬಾರಿ ವ್ಯವಹಾರವಾಗಿದೆ

ಈಗ ಅನೇಕರು ಪೂರ್ಣ ಪ್ರಮಾಣದ ಯುದ್ಧಕ್ಕೆ ಏಕೆ ಹೋಗುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಸೇನೆಯಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಯಾಗಿ, ಚರ್ಚೆಯ ಮೂಲಕ ಸಮಸ್ಯೆ ಬಗೆಹರಿಯಬೇಕೆಂದು ನಾನು ಬಯಸುತ್ತೇನೆ. ಯುದ್ಧದಿಂದಾಗಿ ಗಡಿ ಗ್ರಾಮಗಳ ಜನರ ಪರಿಸ್ಥಿತಿ ಭೀಕರವಾಗಿದೆ. ರಾತ್ರಿ ವೇಳೆ ಚಿಕ್ಕ ಮಕ್ಕಳು ಕೂಡ ಭಯಭೀತರಾಗಿ ಆಶ್ರಯ ತಾಣಗಳಿಗೆ ಓಡಬೇಕಾದ ಸಂದರ್ಭಗಳಿವೆ. ನಮಗೆ ಉಳಿದವರಿಗೆ ಇದ್ಯಾವುದೂ ತಿಳಿದಿಲ್ಲ. ಅಂತಹ ಸಂದರ್ಭಗಳಲ್ಲಿ, ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚು. ಕೆಲವೊಮ್ಮೆ ಮಕ್ಕಳು ಸಹ ದಾಳಿಗಳಿಂದ ಗಂಭೀರವಾಗಿ ಗಾಯಗೊಳ್ಳುತ್ತಾರೆ. ಯುದ್ಧದ ಪರಿಣಾಮ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ದೀರ್ಘಾವಧಿಯ ಆರ್ಥಿಕ ಹೊರೆಯನ್ನು ಹೊರಬೇಕಾಗುತ್ತದೆ. "ಯುದ್ಧವು ದುಬಾರಿ ವ್ಯವಹಾರವಾಗಿದೆ" ಎಂದು ಅವರು ಟೀಕಿಸಿದರು.

ಏತನ್ಮಧ್ಯೆ, ಮನೋಜ್ ನರವಾಣೆ ಈ ಹಿಂದೆ ಆಪರೇಷನ್ ಸಿಂಧೂರ್ ಬಗ್ಗೆ ಪ್ರಮುಖ ಹೇಳಿಕೆಗಳನ್ನು ನೀಡಿದ್ದರು ಎಂದು ತಿಳಿದುಬಂದಿದೆ. ಆಪರೇಷನ್ ಸಿಂಧೂರ್ ಸಿನಿಮಾ ಇನ್ನೂ ಮುಗಿದಿಲ್ಲ..(ಆಭಿ ಪಿಚ್ಕರ್​ ಬಾಕಿ ಹೈ) ಅದು ಇನ್ನೂ ಮುಂದುವರೆದಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದು ಅವರ ಹೇಳಿಕೆಗಳ ಬಗ್ಗೆ ಬಿಸಿ ಚರ್ಚೆಗೆ ಕಾರಣವಾಗಿತ್ತು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net