

ಬೆಂಗಳೂರು: ನಟ ದರ್ಶನ್-ರೇಣುಕಾಸ್ವಾಮಿ - ಪಾರದರ್ಶಕ ವಿಚಾರಣೆ ಎಂದು ಪ್ರಾರಂಭಿಸಿದ ಕನ್ನಡ ಚಿತ್ರನಟ ಉಪೇಂದ್ರ, ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ದರ್ಶನ್ ಬಂಧನ ರೇಣುಕಸ್ವಾಮಿ ಕೊಲೆ ಪ್ರಕರಣ ಮತ್ತು ಅದರ ವಿಚಾರಣೆ ಇಡೀ ಕರ್ನಾಟಕ ಮಾತ್ರವಲ್ಲ ಇಡೀ ಭಾರತವೇ ಬೆರಗಾಗಿ ನೋಡುತ್ತಿದೆ ಎಂದಿದ್ದಾರೆ.
ಈ ಹೈಪ್ರೊಫೈಲ್ ಕೇಸ್ನ ವಿಚಾರಣೆಯಲ್ಲಿ ನಿಶ್ಪಕ್ಷಪಾತವಾದ ನಿರ್ಣಯ ಮತ್ತು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ರೇಣುಕಸ್ವಾಮಿ ಕುಟುಂಬದಲ್ಲಿ, ಜನರಲ್ಲಿ, ಟಿವಿ ಮಾಧ್ಯಮಗಳಲ್ಲಿ ಮತ್ತು ದರ್ಶನ್ ಅಭಿಮಾನಿಗಳಲ್ಲಿ ಏನೇನೋ ಆತಂಕ, ಅನುಮಾನಗಳು ಕಾಡುತ್ತಿದೆ.
ಊಹಾಪೋಹಗಳು ಹುಟ್ಟಿಕೊಳ್ಳುತ್ತಿದೆ. ಏಕೆಂದರೆ, ಯಾವುದೇ ಕೇಸ್ ಆದರೂ ಆ ಕೇಸ್ನ ವಿಚಾರಣೆಯ ವೀಡಿಯೋ ದಾಖಲೆಗಳನ್ನು ಮತ್ತು ಸಾಕ್ಷಿಗಳ ಎಲ್ಲಾ ವಿವರಗಳನ್ನು ಆಗಾಗ ಪೋಲೀಸರು ಸಂಬಂಧಪಟ್ಟ ವ್ಯಕ್ತಿಗಳ ಕುಟುಂಬದವರ ಜೊತೆ ಹಂಚಿಕೊಳ್ಳಬೇಕು ಮತ್ತು ಅದು ಕಾನೂನಾಗಬೇಕು. ( ಹಿಂದೆಲ್ಲಾ ಪೊಲೀಸರು ವಿಚಾರಣೆಯ ವಿವರ ಬರೆದು ದಾಖಲಿಸುತ್ತಿದ್ದರು ಈಗ ತಂತ್ರಜ್ಞಾನ ಇಷ್ಟೊಂದು ಮುಂದುವರೆದಿದ್ದು ಎಲ್ಲವನ್ನೂ ವೀಡಿಯೋ ರೆಕಾರ್ಡ್ ಮತ್ತು ಲೈವ್ ಸ್ಟ್ರೀಮಿಂಗ್ ಮಾಡಬಹುದು )( ಕಾನೂನು ಸುಧಾರಣೆಗಳು #CriminalJustice Reforms ) ಎಂದು ಹೇಳಿದ್ದಾರೆ.
"ಅದೇ ರೀತಿ ಒಬ್ಬ ಸಾರ್ವಜನಿಕ ವ್ಯಕ್ತಿಯ ಬಗ್ಗೆ ಕೇಸ್ ಆಗಿದ್ದರೆ, ಆ ಕೇಸ್ನ ವಿಚಾರಣೆಯ ವಿಡಿಯೋ ದಾಖಲೆಗಳನ್ನು ಮತ್ತು ಸಾಕ್ಷಿಗಳ ಎಲ್ಲಾ ವಿವರಗಳನ್ನು ಪೋಲೀಸರು ಆಗಾಗ ಸಾರ್ವಜನಿಕವಾಗಿ ತೆರೆದಿಡಬೇಕು. ಒಬ್ಬ ಸಾರ್ವಜನಿಕ ವ್ಯಕ್ತಿಯ ವಿಚಾರಣೆ ಸಾರ್ವಜನಿಕವಾಗಿ ಸಂಪೂರ್ಣ ಪಾರದರ್ಶಕತೆಯಿಂದ ಆಗಬೇಕು. ಸಾಕ್ಷಿ ನಾಶ, ಪ್ರಭಾವಿಗಳ ಹಸ್ತಕ್ಷೇಪ, ಭ್ರಷ್ಟಾಚಾರ ಇವಕ್ಕೆಲ್ಲಾ ತೆರೆ ಎಳೆದಂತಾಗುತ್ತದೆ" ಎಂದಿದ್ದಾರೆ.
"ಈ ರೀತಿ ಮಾಡಿದಾಗ ರೇಣುಕಸ್ವಾಮಿ ಕುಟುಂಬಕ್ಕೆ, ಜನರಿಗೆ, ಟಿವಿ ಮಾಧ್ಯಮಗಳಿಗೆ ಮತ್ತು ದರ್ಶನ್ ಅಭಿಮಾನಿಗಳಿಗೆ ಮನಸಿನಲ್ಲಿ ಗೊಂದಲಗಳಿಲ್ಲದೆ ಪೊಲೀಸ್ ಮತ್ತು ಮಾಧ್ಯಮಗಳ ಬಗ್ಗೆ ಇನ್ನೂ ಗೌರವ ಹೆಚ್ಚಾಗುತ್ತದೆ ಮತ್ತು ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಬರುತ್ತದೆ" ಎಂದು ತಮ್ಮ ಎಕ್ಸ್ (ಈ ಹಿಂದಿನ ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ.