ಹೆತ್ತ ತಾಯಿಗೆ ಬೇಡವಾದ ನವಜಾತ ಹೆಣ್ಣು ಶಿಶು! ವೈದ್ಯೆಯಿಂದ ಮಗು ಮಾರಾಟ

Untitled-design-2024-06-17T102512.302
Published on

ಹಾವೇರಿ: ತನಗೆ ಹೆಣ್ಣು ಶಿಶು ಬೇಡ ಎಂದು ನವಜಾತ ಹೆಣ್ಣು ಮಗುವನ್ನು ಹೆತ್ತ ತಾಯಿ ತಿರಸ್ಕರಿಸಿದ್ದಾಳೆ. ಹೆರಿಗೆ ಮಾಡಿದ ವೈದ್ಯೆಯೇ ಅದನ್ನು ಮಾರಾಟ ಮಾಡಿರುವ ಪ್ರಕರಣ ಹೊರಬಿದ್ದ ಬೆನ್ನಲ್ಲೇ ಇದೀಗ ಕೇಸ್​ಗೆ ಸಂಬಂಧಿಸಿದಂತೆ ತಾಯಿ ಸೇರಿ ನಾಲ್ವರ ವಿರುದ್ಧ ಜಿಲ್ಲೆಯ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರ ಗ್ರಾಮದ ಕುಸುಮಾ ಬಸವರಾಜ (30 )ಮಗು ಮಾರಾಟ ಮಾಡಿದ ಹೆತ್ತ ತಾಯಿ. ಬ್ಯಾಡಗಿ ಪಟ್ಟಣದ ಇಸ್ಲಾಂಪುರ ಓಣಿಯ ವೈದ್ಯೆ ಜೈತುನಬಿ ಎಂ. ಸೌದಾಗರ ಹೆರಿಗೆ ಮಾಡಿಸಿದ ವೈದ್ಯೆ. ದಾವಣಗೆರೆ ತಾಲೂಕಿನ ದೊಡ್ಡಬಾತಿ ಗ್ರಾಮದ ಮಂಜುಳಾ ದಾಸಪ್ಪನವರ ಹಾಗೂ ರಾಜಪ್ಪ ದಾಸಪ್ಪನವರ ಮಗುವನ್ನು ತೆಗೆದುಕೊಂಡಿದ್ದ ದಂಪತಿ ಎಂದು ವರದಿಯಾಗಿದೆ.

ಸದ್ಯ ಇವರ ವಿರುದ್ಧ ದಾವಣಗೆರೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕವಿತಾ ಟಿ.ಎಸ್. ದೂರು ದಾಖಲಿಸಿದ್ದಾರೆ. ಕುಸುಮಾ ಗರ್ಭಿಣಿಯಿದ್ದಾಗ ವೈದ್ಯೆ ಜೈತುನಬಿ ಬಳಿ ತೋರಿಸಿಕೊಂಡಿದ್ದರು. ಆಕೆಗೆ ಇದೇ ವರ್ಷದ ಜನವರಿ 4ರಂದು ಬ್ಯಾಡಗಿ ಪಟ್ಟಣದಲ್ಲಿ ಹೆರಿಗೆಯಾಗಿದ್ದು, ಹೆಣ್ಣು ಮಗು ಜನಿಸಿದೆ. ಆದರೆ, ನನಗೆ ಹೆಣ್ಣು ಮಗು ಬೇಡ ಎಂದ ಕುಸುಮಾ ಮಗುವನ್ನು ತಿರಸ್ಕರಿಸಿದ್ದಳು. ಆಗ ವೈದ್ಯೆ ಜೈತುನಬಿ ‘ನಿನಗೆ ಮಗು ಬೇಡವಾದರೆ, ಬೇರೆಯವರಿಗೆ ಕೊಡುತ್ತೇನೆ’ ಎಂದು ಹೇಳಿ ದಾವಣಗೆರೆಯ ಮಂಜುಳಾ ಹಾಗೂ ರಾಜಪ್ಪ ದಂಪತಿಯನ್ನು ಕರೆದು ಮಗುವನ್ನು ಕೊಟ್ಟಿದ್ದಾರೆ.

ದಂಪತಿಯು ಮಗುವನ್ನು ಸಾಕುತ್ತಿರುವ ಕುರಿತು ಅಕ್ಕಪಕ್ಕದ ಜನತೆ ದಾವಣಗೆರೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಸ್ಥಳಕ್ಕೆ ಬಂದ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆದರೆ, ಮಗುವನ್ನು ಕುಸುಮಾ ತಿರಸ್ಕರಿಸಿದ ಬಳಿಕ ಜೈತುನಬಿ ಹಣಕ್ಕೆ ಮಾರಾಟ ಮಾಡಿದ್ದಾರೆಯೇ ಅಥವಾ ಸಾಕಲು ಕೊಟ್ಟಿದ್ದಾರೆಯೇ? ಜೈತುನಬಿ ವೈದ್ಯೆ ಹೌದೋ, ಅಲ್ಲವೋ ಎಂಬುದು ಸದ್ಯ ಪೊಲೀಸರ ತನಿಖೆಯಿಂದ ಬಯಲಿಗೆ ಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net