

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಒಟ್ಟು 13 ಆರೋಪಿಗಳು ಇದೀಗ ಬೆಂಗಳೂರು ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಪವಿತ್ರಾಗೆ ಅಶ್ಲೀಲ ಸಂದೇಶ ಮತ್ತು ಫೋಟೋ ಕಳಿಸಿದ ಎಂಬ ಕಾರಣಕ್ಕೆ ಶೆಡ್ನಲ್ಲಿ ದರ್ಶನ್ ಮತ್ತು ಬಂಧಿತ ಆರೋಪಿಗಳು, ಚಿತ್ರಹಿಂಸೆ ಕೊಟ್ಟು ಹತ್ಯೆಗೈದಿದ್ದಾರೆ ಎಂದು ಪೊಲೀಸರ ವರದಿಯಲ್ಲಿ ತಿಳಿದುಬಂದಿದೆ. ಸದ್ಯ ನಟನ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ಭರದಿಂದ ಸಾಗುತ್ತಿದೆ.
ಒಂದೆಡೆ ದರ್ಶನ್ ಕೊಲೆ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿ ಜೈಲುಪಾಲಾದರೆ, ಮತ್ತೊಂದೆಡೆ ಅವರನ್ನು ಕನ್ನಡ ಚಿತ್ರರಂಗದಿಂದ ಸಂಪೂರ್ಣವಾಗಿ ನಿಷೇಧಿಸಬೇಕು. ಯಾವುದೇ ಚಿತ್ರಗಳನ್ನು ಮಾಡಲು ಅನುಮತಿ ಕೂಡ ಕೊಡಬಾರದು ಎಂಬ ಕೂಗುಗಳು ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿವೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಪ್ರಕರಣದಲ್ಲಿ ಅಂತಿಮ ವರದಿ ಏನು ಬರಲಿದೆ ಎಂದು ನೋಡಿಕೊಂಡು ನಾವು ನಿರ್ಣಯಿಸುತ್ತೇವೆ ಎಂದು ತಿಳಿಸಿದೆ.
ಅತ್ತ ಬಾಕ್ಸ್ ಆಫೀಸ್ ಸುಲ್ತಾನನಾಗಿದ್ದ ದರ್ಶನ್ ಸದ್ಯ ಜೈಲುಪಾಲಾಗುತ್ತಿದ್ದಂತೆ ಇತ್ತ ಕನ್ನಡ ಚಿತ್ರರಂಗದಲ್ಲಿ ಮಂಕು ಕವಿದಂತಾಗಿದೆ. ಸದ್ಯ ಬ್ಯಾನ್ ವಿಷಯದಲ್ಲಿಯೂ ಸಿಲುಕಿರುವ ದರ್ಶನ್ ಮುಂದಿನ ದಿನಗಳಲ್ಲಿ ಈ ಪ್ರಕರಣದಿಂದ ಹೊರಬಂದು ಸಿನಿಮಾ ಮಾಡಿದರೆ, ಆಶ್ಚರ್ಯ ಪಡುವ ಮಾತಿಲ್ಲ. ಆದರೆ, ಹಿಂದಿನಂತೆ ಪ್ರೇಕ್ಷಕರು ಚಿತ್ರಕ್ಕೆ ಬೆಂಬಲ ಕೊಟ್ಟರೆ, ಚಿತ್ರರಂಗದವರು ಸಾಥ್ ನೀಡಿದರೆ ಮಾತ್ರ ಚಿತ್ರಗಳಿಗೆ ಗೆಲುವು ಸಿಗುವ ಸಾಧ್ಯತೆಯಿದೆ.
ಪ್ರಸ್ತುತ ದರ್ಶನ್ ಅಭಿನಯದ 'ಡೆವಿಲ್' ಸಿನಿಮಾ ಇದೇ ಡಿಸೆಂಬರ್ 27ಕ್ಕೆ ರಿಲೀಸ್ ಆಗಲು ಸಜ್ಜಾಗಿತ್ತು. ಆದರೆ, ಈ ಘಟನೆಯಿಂದ ಇದೀಗ ಚಿತ್ರ ಅರ್ಧಕ್ಕೆ ಸ್ಥಗಿತಗೊಂಡಿದೆ. ಚಿತ್ರತಂಡದ ಮುಂದಿನ ನಡೆಯೇನು ಎಂಬುದು ಪ್ರಶ್ನಾರ್ಥಕ. ನಿರ್ದೇಶಕ ಪ್ರೇಮ್ ಜತೆಗೆ ದರ್ಶನ್ರ ಮತ್ತೊಂದು ಚಿತ್ರ ಘೋಷಣೆಯಾಗಿತ್ತು. ಇದರೊಟ್ಟಿಗೆ ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿಬರಲಿರುವ 'ವೀರ ಲಕ್ಷಣ ಸಿಂಧೂರ' ಸಿನಿಮಾ ಕೂಡ ಸೆಟ್ಟೇರುವ ಹಂತದಲ್ಲಿತ್ತು. ಸದ್ಯ ಈ ಎಲ್ಲಾ ಸಿನಿಮಾಗಳ ಕಥೆ ಮುಂದೇನಾಗಲಿದೆ ಎಂಬುದೇ ಸದ್ಯ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.