

ಲಖನೌ: ದೇಶದಲ್ಲಿ ಹಿಂದೂಯೇತರ ಸಮುದಾಯಗಳ ಜೊತೆ ಹೆಚ್ಚು ಕೆಲಸ ಮಾಡಿದಾಗ ಮಾತ್ರ ಎಲ್ಲರನ್ನೂ ಒಳಗೊಂಡ ಸಂಘಟನೆಯಾಗುತ್ತದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
ಲಖನೌನಲ್ಲಿ ಆರ್ಎಸ್ಎಸ್ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ನಾವು ಹಿಂದೂ ಅಲ್ಲದೇ ಸಿಖ್, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಗಳಿಗೆ ಸೇರಿದ ಜನರೊಟ್ಟಿಗೆ ಹೆಚ್ಚು ಸಂಪರ್ಕ ಸಾಧಿಸುವ ಅಗತ್ಯವಿದೆ. ಮಸೀದಿ, ಗುರುದ್ವಾರ ಹಾಗೂ ಚರ್ಚ್ಗೆ ತೆರಳಿ ಅಲ್ಲಿನ ಜನರೊಂದಿಗೆ ಸಂಪರ್ಕ ಸಾಧಿಸಿ ಎಂದು ಕರೆ ನೀಡಿದ್ದಾರೆ.
ಸಂಘದ ಪದಾಧಿಕಾರಿಗಳು ಹಿಂದೂಗಳಲ್ಲದ ಸಮುದಾಯದ ಜೊತೆ ಹೆಚ್ಚು ಬೆರೆಯಬೇಕು ಆಗ ಮಾತ್ರ ಹಿಂದುತ್ವದ ಜ್ಯೋತಿ ಹೊತ್ತಿಸುವ ಬದಲು ಎಲ್ಲರನ್ನೂ ಒಳಗೊಂಡಿರುವ ಸಂಘಟನೆಯಾಗಿ ಕಾಣುವ ಪ್ರಯತ್ನವಾಗಲಿದೆ. ಇದಲ್ಲದೆ ದಲಿತ ಸಮುದಾಯದಲ್ಲಿ ಸಂಘಟನೆಯ ವ್ಯಾಪ್ತಿಯನ್ನು ಹೆಚ್ಚಿಸುವಂತೆ ಕಾರ್ಯಕರ್ತರಿಗೆ ಮೋಹನ್ ಭಾಗವತ್ ಸಭೆಯಲ್ಲಿ ಸೂಚನೆ ನೀಡಿದ್ದಾರೆ.
ದಲಿತರು ಇರುವ ಕಡೆಗೆ ತೆರಳಿ ಸಭೆಗಳನ್ನು ನಡೆಸಿ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವಂತೆ ಸೂಚಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಾರಂಭಿಸಿರುವ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ದಲಿತ ಸಮುದಾಯಕ್ಕೆ ಸಹಾಯ ಮಾಡುವಂತೆ ಮತ್ತು ದೇಶದ ವಿವಿಧ ಭಾಗಗಳಲ್ಲಿ ಮಹಿಳೆಯರಿಗಾಗು ವಿಶೇಷ ಸಮಾವೇಶಗಳನ್ನು ಏರ್ಪಡಿಸುವಂತೆ ಅವರು ತಮ್ಮ ಭಾಷಣದಲ್ಲಿ ಸೂಚಿಸಿದ್ಧಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಆರ್ಎಸ್ಎಸ್ ಮುಖಂಡರೊಬ್ಬರು ಪ್ರಧಾನಿ ನರೇಂದ್ರ ಮೋದಿ ಕೂಡ ಬಿಜೆಪಿ ಕಾರ್ಯಕರ್ತರಿಗೆ ಪಾಸ್ಮಾಂಡ ಮುಸ್ಲಿಮರ ನಡುವೆ ಕೆಲಸ ಮಾಡಲು ಕರೆ ನೀಡಿದ್ದಾರೆ. ಇದೀಗ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹಿಂದೂಗಳಲ್ಲದ ಮಂದಿಯ ಜೊತೆ ಹೆಚ್ಚು ತೊಡಗಿಸಿಕೊಳ್ಳಿ ಎಂದು ಸೂಚಿಸಿದ್ದಾರೆ. ಸಂಘ ಈಗಾಗಲೇ ಹಿಂದೂಗಳಲ್ಲದವರ ನಡುವೆ ಕೆಲಸ ಮಾಡುತ್ತಿದ್ದರೂ, ಆ ಗುಂಪಿನಲ್ಲಿ ಕೆಲಸಕ್ಕೆ ಆದ್ಯತೆ ನೀಡುವಂತೆ ಅದರ ಪದಾಧಿಕಾರಿಗಳನ್ನು ಕೇಳಿದ್ದು ಇದೇ ಮೊದಲು ಎಂದು ಹಿರಿಯ ಆರೆಸ್ಎಸ್ನ ಹಿರಿಯ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.