ರಾಜಸ್ಥಾನ ಸಿಎಂ ಅಶೋಕ್​ ಗಹ್ಲೋಟ್​ ಭೇಟಿಯಾದ ಬಿಜೆಪಿ ನಾಯಕಿ ವಸುಂಧರಾ ರಾಜೇ; ಫೋಟೋ ವೈರಲ್

Vasundhara Raje
Published on

ಜೈಪುರ: ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಪಕ್ಷಾಂತರ ಪರ್ವ ಕೂಡ ಜೋರಾಗಿ ನಡೆಯುತ್ತಿದೆ. ಆಡಳಿತರೂಢ ಕಾಂಗ್ರೆಸ್​ ಚುನಾವಣೆಯಲ್ಲಿ ಗೆದ್ದು ಎರಡನೇ ಅವಧಿಗೆ ಸರ್ಕಾರವನ್ನು ರಚಿಸುವ ಹುಮ್ಮಸ್ಸಿನಲ್ಲಿದೆ. ಇತ್ತ ಬಿಜೆಪಿ ಕಾಂಗ್ರೆಸ್​ನ ಒಳಜಗಳವನ್ನೇ ಲಾಭ ಮಾಡಿಕೊಂಡು ಚುನಾವಣೆ ಎದುರಿಸಲು ಸಿದ್ದವಾಗಿದೆ.

ಇದೀಗ ಪ್ರಮುಖ ಬೆಳವಣಿಗೆಯೊಂದರಲ್ಲಿ ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೇ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಜೈಪುರದಲ್ಲಿ ಕಾನ್ಸ್ಟಿಟ್ಯೂಶನ್ ಕ್ಲಬ್ ಉದ್ಘಾಟನೆಯಲ್ಲಿ ಈ ಇಬ್ಬರು ನಾಯಕರು ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಈ ಇಬ್ಬರು ನಾಯಕರು ಭೇಟಿ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಇವರ ಜೊತೆ ರಾಜಸ್ಥಾನ ವಿಧಾನಸಭೆಯ ಸ್ಪೀಕರ್ ಡಾ.ಸಿ.ಪಿ. ಜೋಶಿ, ವಿಪಕ್ಷ ನಾಯಕ ರಾಜೇಂದ್ರ ರಾಥೋಡ್​ ಉಪಸ್ಥಿತರಿದ್ದರು. ಆದರೆ, ವಸುಂಧರಾ ರಾಜೇ ಪ್ರತ್ಯೇಕವಾಗಿ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಪಕ್ಷಾಂತರಕ್ಕೆ ಪುಷ್ಠಿ ನೀಡಿದೆ.

ಇತ್ತೀಚಿನ ದಿನಗಳಲ್ಲಿ ತಮ್ಮನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ವಸುಂಧರಾ ರಾಜೇ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ಧಾರೆ. ರಾಜಸ್ಥಾನದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರಯಲ್ಲಿ ವಸುಂಧರಾ ರಾಜೇ ಕಾಣಿಸಿಕೊಳ್ಳದೆ ಅಂತರವನ್ನು ಕಾಯ್ದುಕೊಂಡಿದ್ದರು. ಸ್ವಕ್ಷೇತ್ರ ಜಲವಾರ್​ನಲ್ಲಿ ನಡೆದ ಕಾರ್ಯಕ್ರಮದಿಂದಲೂ ಭಾಗವಹಿಸದೆ ದೂರ ಉಳಿದಿದ್ದರು.

ಈಚೆಗೆ ಪ್ರಕಟವಾದ ಬಿಜೆಪಿ ಉಸ್ತುವಾರಿಗಳ ಪಟ್ಟಿಯಲ್ಲಿ ವಸುಂಧರಾ ರಾಜೇ ಹಾಗೂ ವಿಪಕ್ಷ ನಾಯಕ ರಾಜೇಂದ್ರ ರಾಥೋಡ್​ ಅವರ ಹೆಸರನ್ನು ಕೈಬಿಡಲಾಗಿತ್ತು. ಈ ಬೆಳವಣಿಗೆಯ ನಂತರ ಈ ಇಬ್ಬರು ನಾಯಕರು ಬಿಜೆಪಿಯಿಂದ ಅಂತರವನ್ನು ಕಾಯ್ದುಕೊಳ್ಳಲು ಶುರು ಮಾಡಿದ್ದರು. ಮುಂದಿನ ದಿನಗಳಲ್ಲಿ ಇವರ ನಡೆ ಬಿಜೆಪಿಗೆ ವರದಾನವಾಗಲಿದೆಯಾ ಅಥವಾ ಶಪವಾಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net