ಜೀವನದಲ್ಲಿ ಇಂಥಾ ದುರಂತ ನಡೆಯುತ್ತೆ ಅಂತ ಕನಸಲ್ಲೂ ಎಣಿಸಿರಲಿಲ್ಲ ಈ ದಂಪತಿ! ಈ ಸಾವು ನ್ಯಾಯವೇ?

Couple
Published on

ಹೈದರಾಬಾದ್​: ಮೇಲಿನ ಫೋಟೋದಲ್ಲಿರುವ ಇಬ್ಬರಿಗೂ ಮೂವತ್ತು ವರ್ಷವೂ ಆಗಿಲ್ಲ. ಎರಡು ವರ್ಷಗಳ ಹಿಂದಷ್ಟೇ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಮತ್ತು ತಮ್ಮ ನೂರು ವರ್ಷಗಳ ಭವಿಷ್ಯದ ಬಗ್ಗೆ ಅನೇಕ ಕನಸುಗಳನ್ನು ಸಹ ಹೊಂದಿದ್ದರು. ಯಾವುದೇ ಸಂದರ್ಭಗಳು ಬಂದರೂ ಶಾಶ್ವತವಾಗಿ ಒಟ್ಟಿಗೆ ಇರಲು ಬಯಸಿದ್ದರು. ಕಷ್ಟ-ಸುಖಗಳಲ್ಲಿ ಒಬ್ಬರಿಗೊಬ್ಬರು ನೆರವಾಗುವುದು ಹಾಗೂ ಜೀವನ ಪರ್ಯಂತ ಪ್ರೀತಿಯಿಂದ ಬದುಕಬೇಕೆಂದು ಬಯಸಿದ್ದರು.

ಆದರೆ, ವಿಧಿಯಾಟ ಬೇರೇನೆ ಇತ್ತು. ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಕುಟುಂಬಸ್ಥರ ಬಳಿಗೆ ತೆರಳಿ, ಖುಷಿಯಿಂದ ಕಾಲ ಕಳೆದು ಮನೆಗೆ ವಾಪಸಾಗುತ್ತಿದ್ದವರು ದುರಂತ ಸಾವಿಗೀಡಾಗಿದ್ದಾರೆ. ಇಬ್ಬರ ಸಾವಿನಿಂದ ಎರಡೂ ಕುಟುಂಬಗಳಲ್ಲಿ ಅಪಾರ ದುಃಖ ತುಂಬಿಕೊಂಡಿದೆ. ತಮ್ಮ ಜೀವನ ಹೀಗೆ ಕೊನೆಯಾಗುತ್ತದೆ ಎಂದು ಈ ಜೋಡಿ ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಅಷ್ಟಕ್ಕೂ ದಂಪತಿಗೆ ಏನಾಯಿತು ಎಂಬುದನ್ನು ನಾವೀಗ ತಿಳಿಯೋಣ.

ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ಮುನಗಾಲ ಮಂಡಲದ ಮುಕುಂದಪುರಂ ಉಪನಗರದ ಪೆಟ್ರೋಲ್ ಬಂಕ್‌ ಬಳಿ ಸೋಮವಾರ (ಏಪ್ರಿಲ್ 22) ಭೀಕರ ರಸ್ತೆ ಅಪಘಾತ ಸಂಭವಿಸಿತು. ನಿಂತಿದ್ದ ಕಂಟೈನರ್ ಲಾರಿಗೆ ಕಾರೊಂದು ಡಿಕ್ಕಿ ಹೊಡೆಯಿತು. ಈ ವೇಳೆ ಸ್ಥಳದಲ್ಲೇ ಪತಿ-ಪತ್ನಿ ದುರಂತ ಸಾವಿಗೀಡಾದರು.

ಅಪಘಾತದಲ್ಲಿ ಮೃತಪಟ್ಟ ದಂಪತಿಯನ್ನು ಖಮ್ಮಮ್​ ಜಿಲ್ಲೆಯ ವೈರಾ ಮಂಡಲದ ಸೋಮವಾರಂ ಗ್ರಾಮದ ಸಾಮಿನೇನಿ ನವೀನ್‌ ರಾಜ್​ (29) ಮತ್ತು ಆಂಧ್ರ ಪ್ರದೇಶದ ಎನ್‌ಟಿಆರ್ ಜಿಲ್ಲೆಯ ವಿಸ್ಸನ್ನಪೇಟೆ ನಿವಾಸಿ ಭಾರ್ಗವಿ (27) ಎಂದು ಗುರುತಿಸಲಾಗಿದೆ. ಇಬ್ಬರು ಎರಡು ವರ್ಷಗಳ ಹಿಂದಷ್ಟೇ ವಿವಾಹವಾದರು. ಇಬ್ಬರೂ ಉತ್ತಮ ಕೆಲಸದಲ್ಲಿದ್ದರು. ನವೀನ್ ರಾಜ್​ ವಿಜಯವಾಡದ ಗುಡವಳ್ಳಿಯ ಖಾಸಗಿ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರೆ, ಭಾರ್ಗವಿ ಸಾಫ್ಟ್‌ವೇರ್ ಉದ್ಯೋಗಿ. ಈ ದಂಪತಿ ಇನ್ನೂ ಮಕ್ಕಳಾಗಿರಲಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net