ಥ್ರೆಡ್ಸ್​ ಆ್ಯಪ್​ ನಾಗಾಲೋಟಕ್ಕೆ ಬೆಚ್ಚಿಬಿದ್ರಾ ಎಲನ್​ ಮಸ್ಕ್​? ಮೆಟಾ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ

Threads vs Twitter
Published on

ಸ್ಯಾನ್​ಫ್ರಾನ್ಸಿಸ್ಕೋ: ಮೆಟಾ ಕಂಪನಿ ಒಡೆತನದ ಥ್ರೆಡ್ಸ್​ ಆ್ಯಪ್​ ನಿನ್ನೆಯಷ್ಟೇ ಬಿಡುಗಡೆಯಾಗಿ, ಮೊದಲ ದಿನವೇ ಭಾರೀ ಜನಮನ್ನಣೆ ಗಳಿಸಿದೆ. ಇದರ ಬೆನ್ನಲ್ಲೇ ಮೆಟಾ ವಿರುದ್ಧ ಟ್ವಿಟರ್ ಕಂಪನಿ​ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದೆ ಎಂದು ನ್ಯೂಯಾರ್ಕ್​ ಮೂಲಕ ಸೆಮಾಫಾರ್​ ಗುರುವಾರ ವರದಿ ಮಾಡಿದೆ.

ಟ್ವಿಟರ್​ ಕಂಪನಿ ಪರ ವಕೀಲ ಅಲೆಕ್ಸ್​ ಸ್ಪೈರೋ, ಮೆಟಾ ಕಂಪನಿಯ ಸಿಇಒ ಮಾರ್ಕ್​ ಜೂಕರ್​ಬರ್ಗ್​ ಅವರಿಗೆ ಪತ್ರವನ್ನು ಕಳಿಸಿದ್ದಾರೆ. ಒಂದೇ ದಿನದಲ್ಲಿ ಥ್ರೆಡ್ಸ್​ ಆ್ಯಪ್​ ಗಳಿಸಿದ ಜನಪ್ರಿಯತೆ ಕಂಡು ಟ್ವಿಟರ್​ ಮಾಲೀಕ ಎಲನ್​ ಮಸ್ಕ್​ ವಿಚಲಿತಗೊಂಡಿರುವಂತೆ ಕಾಣುತ್ತದೆ.

ಟ್ವಿಟರ್​ ತನ್ನ ಬೌದ್ಧಿಕ ಆಸ್ತಿಯ ಹಕ್ಕನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಉದ್ದೇಶಿಸಿದೆ ಮತ್ತು ಟ್ವಿಟರ್​ನ ಯಾವುದೇ ವ್ಯಾಪಾರ ರಹಸ್ಯ ಅಥವಾ ಇತರ ಅತ್ಯಂತ ಗೌಪ್ಯ ಮಾಹಿತಿ ಬಳಸುವುದನ್ನು ನಿಲ್ಲಿಸಲು ಮೆಟಾ ಈ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಪತ್ರದಲ್ಲಿ ಸ್ಪೈರೋ ಬರೆದಿದ್ದಾರೆ ಎಂದು ವರದಿಯಾಗಿದೆ.

ಬಿಡುಗಡೆಯಾದ ಒಂದೇ ತಾಸಿನಲ್ಲಿ 1 ಕೋಟಿ ಜನರು ಲಾಗಿನ್

ಮೆಟಾ ಸಿಇಒ ಮಾರ್ಕ್ ಜುಕರ್​ಬರ್ಗ್ ಅವರ ಹೊಸ ಸಾಮಾಜಿಕ ಜಾಲತಾಣ ‘ಥ್ರೆಡ್ಸ್’ ಗುರುವಾರ ಚಾಲನೆಗೊಂಡಿದೆ. ಆರಂಭವಾದ ಏಳು ತಾಸಿನಲ್ಲೇ ಒಂದು ಕೋಟಿ ಜನರು ಲಾಗ್​ಇನ್ ಆಗಿದ್ದಾರೆ. ಈ ಮೂಲಕ ಟೆಸ್ಲಾ ಸಿಇಒ ಎಲನ್ ಮಸ್ಕ್ ಅವರ ಟ್ವಿಟರ್​ಗೆ ಸವಾಲು ಹಾಕಿದೆ. ಚಾಲನೆಯಾದ ಮೊದಲೆರಡು ತಾಸಿನಲ್ಲೇ 20 ಲಕ್ಷ ಜನರು ಥ್ರೆಡ್ಸ್​ಗೆ ಸೈನ್ ಇನ್ ಆದರು. ನಾಲ್ಕು ತಾಸಿನಲ್ಲಿ ಈ ಸಂಖ್ಯೆ 50 ಲಕ್ಷಕ್ಕೆ ಏರಿತು. ಮತ್ತೆ ಮೂರು ತಾಸು ಕಳೆಯುವಷ್ಟರಲ್ಲಿ ಒಂದು ಕೋಟಿಗೆ ತಲುಪಿತು ಎಂದು ಜೂಕರ್​ಬರ್ಗ್ ಸಂತಸ ವ್ಯಕ್ತಪಡಿಸಿದ್ದಾರೆ.

ಥ್ರೆಡ್ಸ್ ಬಳಕೆದಾರ ಸಂಖ್ಯೆ ಏರುತ್ತಿರುವುದರಿಂದ ಇದು ಟ್ವಿಟರ್ ಅನ್ನು ಮೀರಿ ಬೆಳೆಯುವುದೇ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಥ್ರೆಡ್ಸ್​ನಲ್ಲೇ ಇನ್​ಸ್ಟಾಗ್ರಾಮ್ ಲಿಂಕ್ ಸಿಗುತ್ತಿರುವುದು ಅನುಕೂಲಕರವಾಗಿದೆ ಎಂದು ಹಲವರು ಹೇಳಿದ್ದರೆ, ಟ್ವಿಟರ್ ಸುದ್ದಿ ಅಥವಾ ಮಾಹಿತಿ ಆಧಾರಿತ ವೇದಿಕೆಯಾದರೆ, ಇನ್​ಸ್ಟಾಗ್ರಾಂ ವಿಡಿಯೋಗೆ ಹೆಚ್ಚು ಒತ್ತು ನೀಡುವ ಜಾಲತಾಣವಾಗಿದೆ. ಹೀಗಾಗಿ ಇವೆರಡಕ್ಕೂ ಬದಲಿ ಆಗುವುದಕ್ಕೆ ಹೊಸ ವೇದಿಕೆಗೆ ಕಷ್ಟವಾಗಬಹುದು ಎಂದು ಮತ್ತೆ ಕೆಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್ ನಾಲ್ಕನೇ ಒಂದು ಭಾಗದಷ್ಟು ಬಳಕೆದಾರರು ಥ್ರೆಡ್ಸ್​ಗೆ ಬಂದರೂ ಸಾಕು ಅದು ಟ್ವಿಟರ್​ಗೆ ಪ್ರತಿ ಸ್ಪರ್ಧಿ ಆಗುತ್ತದೆ ಎಂಬುದು ಮೆಟಾ ಅಭಿಪ್ರಾಯ ಆಗಿದೆ. ಇನ್​ಸ್ಟಾಗ್ರಾಮ್​ನಲ್ಲಿನ ಉತ್ತಮಾಂಶಗಳನ್ನು ತೆಗೆದುಕೊಳ್ಳುವುದು ಮತ್ತು ಹೊಸ ಅನುಭವನ್ನು ಹಂಚಿಕೊಳ್ಳುವುದು, ಸ್ನೇಹಭಾವದ ಚರ್ಚೆ ನಡೆಯುವಂತೆ ಮಾಡುವುದು ಹೊಸ ಜಾಲತಾಣದ ಉದ್ದೇಶ ಎಂದು ತಿಳಿಸಿದೆ.

ಬಳಕೆ ಹೇಗೆ?

ಐಎಸ್​ಒ ಬಳಕೆದಾರರಿಗೆ ಆಪ್ ಸ್ಟೋರ್ ಮತ್ತು ಆಂಡ್ರಾಯ್್ಡ ಬಳಕೆದಾರರಿಗೆ ಪ್ಲೇ ಸ್ಟೋರ್​ನಲ್ಲಿ ಥ್ರೆಡ್ಸ್ ಆಪ್ ಲಭ್ಯವಿದೆ. ಡೌನ್​ಲೋಡ್ ಮಾಡಿಕೊಂಡು ಬಳಸಬಹುದು. ಚಿತ್ರ, ವಿಡಿಯೋ,ಗ್ರಾಫಿಕ್ಸ್​ಗಳನ್ನು ಸೇರಿ 500 ಪದಗಳವರೆಗೆ ಮತ್ತು ಐದು ನಿಮಿಷದ ವಿಡಿಯೋ ಸಂದೇಶ ಕಳುಹಿಸಬಹುದು. ಒಮ್ಮೆ ಇದರಲ್ಲಿ ಖಾತೆ ತೆರೆದರೆ ಅದನ್ನು ನಿಷ್ಕ್ರಿಯವಾಗಿ ಇಡಬಹುದೆ ಹೊರತು ಡಿಲೀಟ್ ಮಾಡಲು ಆಗುವುದಿಲ್ಲ.

ಟ್ವಿಟರ್​ಗೆ ಅವಕಾಶ ಇತ್ತು

ನೂರು ಕೋಟಿ ಜನರನ್ನು ಒಳಗೊಂಡ ಸಾರ್ವಜನಿಕ ಸಂಭಾಷಣೆಯ ಅಪ್ಲಿಕೇಷನ್ ಆಗಬೇಕು ಎಂಬುದು ನಮ್ಮ ಆಶಯ. ಇದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಟ್ವಿಟರ್​ಗೆ ಇದನ್ನು ಸಾಧಿಸುವ ಅವಕಾಶ ಇತ್ತು. ಆದರೆ, ಮಾಡಿಲ್ಲ. ನಾವು ಇದನ್ನು ಮಾಡುತ್ತೇವೆ ಎಂದು ಮೆಟಾ ಸಿಇಒ ಮಾರ್ಕ್ ಜೂಕರ್​ಬರ್ಗ್ ಹೇಳಿದ್ದಾರೆ.

ಕಾಪಿ ಆಂಡ್ ಪೇಸ್ಟ್ 

ಥ್ರೆಡ್ಸ್ ಬಗ್ಗೆ ಪ್ರತಿಕ್ರಿಯಿಸಿರುವ ಟ್ವಿಟರ್ ಮಾಲೀಕ ಎಲನ್ ಮಸ್ಕ್, ನಗುತ್ತಿರುವ ಇಮೋಜಿ ಹಾಕಿದ್ದಾರೆ ಮತ್ತು ಥ್ರೆಡ್ಸ್ ಅನ್ನು ಕಾಪಿ ಆಂಡ್ ಪೇಸ್ಟ್ ಬಳಸಿ ವಿನ್ಯಾಸ ಮಾಡಲಾಗಿದೆ ಎಂದು ಹಂಗಿಸಿದ್ದಾರೆ. ನೋವನ್ನು ನುಂಗಿಕೊಂಡು ಇನ್​ಸ್ಟಾಗ್ರಾಮ್ ಹುಸಿ ಸಂತೋಷದಲ್ಲಿ ಪಾಲ್ಗೊಳ್ಳುವುದಕ್ಕಿಂತ ಟ್ವಿಟರ್​ನಲ್ಲಿ ಅಪರಿಚಿತರಿಂದ ಆಕ್ರಮಣಕೊಳಗಾದರೂ ಅದು ಅತ್ಯಂತ ಯೋಗ್ಯವಾಗುತ್ತದೆ ಎಂದು ಟಿಪ್ಪಣಿಯನ್ನು ಮಸ್ಕ್ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net