

ನವದೆಹಲಿ: ನಿಜಕ್ಕೂ ಇದು ಅಂದರ್ ಕಿ ಬಾತ್ ಹೈ. ಅರ್ಥಾತ್ ಇದು ಒಳಉಡುಪಿನ ವಿಷಯ. ಅಷ್ಟಕ್ಕೂ ಇದು ಅಂತಿಂಥ ಒಳಉಡುಪಲ್ಲ. ಏಕೆಂದರೆ ಈ ಅಂಡರ್ವೇರ್ ಒಂದೇ ಒಂದು ಇದ್ದರೂ ಸಾಕು, ವಾರಗಟ್ಟಲೆ ಅದೊಂದರಲ್ಲೇ ಕಾಲ ಕಳೆದು ಬಿಡಬಹುದು. ಮಾತ್ರವಲ್ಲ, ಇದನ್ನು ತೊಳೆಯಬೇಕಾದ ಅಗತ್ಯವೂ ಇಲ್ಲ.
ಹೌದು.. ಇಂಥದ್ದೊಂದು ಒಳಉಡುಪನ್ನು ಕಂಪನಿಯೊಂದು ಉತ್ಪಾದಿಸುತ್ತಿದೆ. 'ದ ವರ್ಲ್ಡ್ಸ್ ಕ್ಲೀನೆಸ್ಟ್ ಅಂಡರ್ವೇರ್' ಎಂಬ ಟ್ಯಾಗ್ಲೈನ್ನೊಂದಿಗೆ ಇಂಥದ್ದೊಂದು ಒಳಉಡುಪನ್ನು ಹರ್ಕ್ಲಿಯಾನ್ (HercLéon) ಎಂಬ ಕಂಪನಿ ಉತ್ಪಾದಿಸುತ್ತಿದೆ. ಈ ಒಳಉಡುಪನ್ನು ದಿನಗಟ್ಟಲೆ ಅಥವಾ ವಾರಗಟ್ಟಲೆ ಮಾತ್ರವಲ್ಲ ತಿಂಗಳುಗಟ್ಟಲೆ ಬಳಸಿದರೂ ವಾಸನೆ ಬರುವುದಿಲ್ಲ, ಸ್ವಚ್ಛವಾಗಿಯೇ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಕ್ರಿಬಿ (Kribi) ಎಂದು ಕಂಪನಿ ನಾಮಕರಣ ಮಾಡಿರುವ ಈ ಒಳಉಡುಪನ್ನು ಹರ್ಕ್ಫೈಬರ್ ಎಂಬ ವಸ್ತುವಿನಿಂದ ತಯಾರಿಸಲಾಗುತ್ತಿದೆ. ಹರ್ಕ್ಫೈಬರ್ ಬಂಬೂ, ಯೂಕಲಿಪ್ಟಸ್, ಬೀಚ್ವುಡ್ ಮತ್ತು ತಾಮ್ರದ ಹದವಾದ ಮಿಶ್ರಣ. ಇದರಲ್ಲಿನ ಅಂಶಗಳು ಬ್ಯಾಕ್ಟೀರಿಯಾಗಳನ್ನು ನಿರಂತರವಾಗಿ ಸಾಯಿಸುತ್ತವೆ. ಹೀಗಾಗಿ ಈ ಅಂಡರ್ವೇರ್ಅನ್ನು ಒಗೆಯದೇ ಒಂದಕ್ಕಿಂತ ಹೆಚ್ಚು ದಿನ ಬಳಸಬಹುದು. ಆದರೆ ದಿನಕ್ಕೊಮ್ಮೆ ಒಂದೆರಡು ಗಂಟೆಗಳ ಕಾಲ ಗಾಳಿಯಾಡಲು ಬಿಟ್ಟರೆ ಉತ್ತಮ ಎಂದು ಕಂಪನಿ ಹೇಳಿಕೊಂಡಿದೆ. ಈ ಕಂಪನಿ ಇದೇ ಥರದಲ್ಲಿ ತೊಳೆಯುವ ಅಗತ್ಯವಿರದ ಸಾಕ್ಸ್, ಟಿ-ಶರ್ಟ್, ಬೆಡ್ಶೀಟ್ಗಳನ್ನು ತಯಾರಿಸುತ್ತಿದೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ