

ಹೈದರಾಬಾದ್: ಈ ವರ್ಷ ಟಾಲಿವುಡ್ ಅಂಗಳದಿಂದ ಸಾಲು ಸಾಲು ಸಿನಿಮಾಗಳು ಚಿತ್ರಮಂದಿರಗಳಿಗೆ ಲಗ್ಗೆಯಿಡಲು ಸಜ್ಜಾಗಿದ್ದು, ವಿಶೇಷವಾಗಿ ಸ್ಟಾರ್ ನಟರ ಚಿತ್ರಗಳೇ ಮುಂಚೂಣಿಯಲ್ಲಿವೆ. ತೆಲುಗು ನಟ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ 'ಪುಷ್ಪ 2', ಪ್ರಭಾಸ್ ಅವರ 'ಕಲ್ಕಿ 2898 ಎಡಿ' ಹೀಗೆ ಮುಂತಾದವರ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಲಿವೆ. ಸದ್ಯ ಈ ಮಧ್ಯೆ ಬಾಲಯ್ಯ ಮತ್ತು ಪವನ್ ಕಲ್ಯಾಣ್ ಸಿನಿಮಾಗಳು ಒಂದೇ ತಿಂಗಳಲ್ಲಿ ಬಿಡುಗಡೆಯಾಗಲಿದ್ದು, ಬಾಕ್ಸ್ ಆಫೀಸ್ನಲ್ಲಿ ಭಾರೀ ಪೈಪೋಟಿ ಸೃಷ್ಟಿಸಲಿದೆ.
'ಕಲ್ಕಿ 2898 ಎಡಿ', 'ಪುಷ್ಪ 2: ದಿ ರೂಲ್', ಜೂ. ಎನ್‌ಟಿಆರ್ ಅವರ 'ದೇವರ', ರಾಮ್ ಚರಣ್ ಅಭಿನಯದ 'ಗೇಮ್ ಚೇಂಜರ್', ಪವನ್ ಕಲ್ಯಾಣ್ ನಟನೆಯ 'ದೇ ಕಾಲ್ ಹಿಮ್ ಓಜಿ' ಮತ್ತು ಬಾಲಕೃಷ್ಣ ಅವರ 'ಎನ್‌ಬಿಕೆ 109' ಸೇರಿದಂತೆ ಬಹುನಿರೀಕ್ಷಿತ ಚಿತ್ರಗಳು ತೆರೆಗೆ ಬರಲು ದಿನಗಳನ್ನು ಎಣಿಸುತ್ತಿವೆ. ಈ ಚಿತ್ರಗಳ ಪೈಕಿ ಬಾಲಯ್ಯ ಮತ್ತು ಪವನ್ ಅವರ ಸಿನಿಮಾಗಳು ಡಿಸೆಂಬರ್ನಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ.
ಈ ಹಿಂದೆ ಸೆ.27ಕ್ಕೆ 'ಓಜಿ' ಚಿತ್ರವನ್ನು ರಿಲೀಸ್ ಮಾಡ್ತೇವೆ ಎಂದಿದ್ದ ಚಿತ್ರತಂಡ ಇದೀಗ ಡಿಸೆಂಬರ್ಗೆ ಮುಂದೂಡಿದೆ. 'ಎನ್‌ಬಿಕೆ 109' ಕೂಡ ಇದೇ ತಿಂಗಳಲ್ಲಿ ತೆರೆಕಾಣಲಿದೆ ಎಂಬ ಮಾಹಿತಿ ಇದೆ. ವದಂತಿಗಳ ಪ್ರಕಾರ, ಇವೆರೆಡು ಸಿನಿಮಾಗಳು ಒಂದೇ ತಿಂಗಳು ಬಿಡುಗಡೆಯಾದರೆ, ಖಂಡಿತ ಸಿನಿಪ್ರೇಕ್ಷಕರಿಗೆ ಭರಪೂರ ಮನರಂಜನೆಗೆ ಕಿಂಚಿತ್ತು ಕೊರೆತೆ ಇರುವುದಿಲ್ಲ. ಆದ್ರೆ, ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಭಾರೀ ಹೊಡೆತ ಬೀಳಬಹುದು ಎಂಬುದು ಸಿನಿ ಮೂಲಗಳ ಲೆಕ್ಕಾಚಾರ,(ಏಜೆನ್ಸೀಸ್).