ಡಬಲ್​​ ಮೀನಿಂಗ್ ಪ್ರಶ್ನೆಗಳನ್ನು ಕೇಳಿ ವಿಡಿಯೋ ಅಪ್​ಲೋಡ್: ಯುವತಿ ಆತ್ಮಹತ್ಯೆಗೆ ಯತ್ನ, ಯೂಟ್ಯೂಬರ್ಸ್​ ಅರೆಸ್ಟ್​​​

VJ Shwetha
Published on

ಚೆನ್ನೈ: ಯೂಟ್ಯೂಬ್​ನಲ್ಲಿ ಸಬ್​ಸ್ಕ್ರೈಬ್​ ಸಂಖ್ಯೆ ಹೆಚ್ಚಿಸಿಕೊಳ್ಳಲು ಮತ್ತು ಹಣ ಗಳಿಕೆ ಮಾಡಲು ಕೆಲವರು ಅಶ್ಲೀಲ ಕಂಟೆಂಟ್​ಗಳ ಮೊರೆ ಹೋಗುತ್ತಿದ್ದಾರೆ. ಜನರ ಬಳಿ ಅಶ್ಲೀಲ ಪ್ರಶ್ನೆಗಳನ್ನು ಕೇಳುವ ಮೂಲಕ ಮುಜುಗರ ಉಂಟು ಮಾಡುತ್ತಿದ್ದಾರೆ. ಅಲ್ಲದೆ, ವಿಡಿಯೋ ಪ್ರಸಾರ ಮಾಡುವುದಿಲ್ಲ ಎಂದು ನಂಬಿಸಿ, ಲೈಂಗಿಕತೆ ಸೇರಿದಂತೆ ಮುಂತಾದ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಯುವ ಜನಾಂಗದ ಅಭಿಪ್ರಾಯಗಳಗಳನ್ನು ರೆಕಾರ್ಡ್​ ಮಾಡಿ ಅನುಮತಿ ಇಲ್ಲದೆ ಪೋಸ್ಟ್​ ಮಾಡುವ ಮೂಲಕ ಚಿತ್ರಹಿಂಸೆ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ಯುವತಿಯೊಬ್ಬಳು ಇದೇ ರೀತಿಯ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಇದೀಗ ಯೂಟ್ಯೂಬರ್​ಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಬಂಧಿತರನ್ನು ವಿಡಿಯೋ ಜಾಕಿ ಆರ್. ಶ್ವೇತಾ (23), ವಿಡಿಯೋ ಜಾಕಿ ಎಸ್ ಯೋಗರಾಜ್ (21) ಮತ್ತು ಮ್ಯಾನೇಜರ್ ರಾಮ ವೀರಪ್ಪನ್ (21) ಎಂದು ಗುರುತಿಸಲಾಗಿದೆ. ಆರೋಪಿಗಳು 'ವೀರಾ ಟಾಕ್ಸ್ ಡಬಲ್ ಎಕ್ಸ್' ಹೆಸರಿನ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ. ಈ ಚಾನೆಲ್ ಮೂಲಕ ರಸ್ತೆಯಲ್ಲಿ ಹೋಗುವ ಯುವಕ-ಯುವತಿಯರು ಹಾಗೂ ಅಪ್ರಾಪ್ತರನ್ನು ಸಂದರ್ಶಿಸಿ, ಹಾಸ್ಯಾಸ್ಪದ ಪ್ರಶ್ನೆಗಳನ್ನು ಕೇಳುತ್ತಾರೆ. ಕೆಲವೊಮ್ಮೆ ಅಶ್ಲೀಲ ಪ್ರಶ್ನೆಗಳನ್ನು ಕೇಳುವ ಮೂಲಕ ಮುಜುಗರ ಉಂಟು ಮಾಡುತ್ತಾರೆ.

ಇದೇ ರೀತಿ ಇತ್ತೀಚೆಗೆ ಯುವತಿಯೊಬ್ಬಳ ಸಂದರ್ಶನವನ್ನು ಮಾಡಲಾಗಿತ್ತು. ವಿಡಿಯೋವನ್ನು ಅಪ್​ಲೋಡ್​ ಮಾಡುವುದಿಲ್ಲ. ಇದನ್ನು ಗೌಪ್ಯವಾಗಿ ಇಡುತ್ತೇವೆ ಎಂದು ನಂಬಿಸಿ, ಡಬಲ್​ ಮೀನಿಂಗ್​ ಪ್ರಶ್ನೆಗಳನ್ನು ಕೇಳಿ, ಯುವತಿಯಿಂದ ಅಭಿಪ್ರಾಯಗಳನ್ನು ಪಡೆದು, ಆಕೆಯ ಅನುಮತಿ ಇಲ್ಲದೆ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇಂಜಿನಿಯರಿಂಗ್ ಓದುತ್ತಿರುವ ಸಂತ್ರಸ್ತ ಯುವತಿ ವಿಡಿಯೋದಿಂದ ಸಾಕಷ್ಟು ಅವಮಾನ ಅನುಭವಿಸಿದ್ದಳು. ಇದನ್ನು ಸಹಿಸಲಾರದೇ ಬಿಸ್ಕೆಟ್​ನಲ್ಲಿ ಇಲಿ ಪಾಷಾಣ ಬೆರೆಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದನ್ನು ಗಮನಿಸಿದ ಕೂಡಲೇ ಕಿಲ್ಪಾಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಸದ್ಯ ಯುವತಿಯ ಆರೋಗ್ಯ ಸ್ಥಿರವಾಗಿದೆ.

ಯುವತಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ‘ವೀರಾ ಟ್ಯಾಕ್ಸ್ ಡಬಲ್ ಎಕ್ಸ್’ ಯೂಟ್ಯೂಬ್ ಚಾನೆಲ್ ನಿರ್ವಾಹಕರನ್ನು ಬಂಧಿಸಲಾಗಿದೆ. ಈ ಚಾನೆಲ್​ನಲ್ಲಿ ಅಶ್ಲೀಲ ವಿಡಿಯೋಗಳು ಇರುವುದರಿಂದ ವಾಹಿನಿಯನ್ನು ಸೀಜ್ ಬ್ಲಾಕ್​ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net