

ನವದೆಹಲಿ: 2011ರಲ್ಲಿ ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಪರ ಅದ್ಭುತ ಬ್ಯಾಟ್ ಮಾಡಿ, ಫೈನಲ್ನಲ್ಲಿ 97 ರನ್ ಕೊಡುಗೆ ನೀಡುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಕಾರಣರಾದ ಗೌತಮ್ ಗಂಭೀರ್ ಕಂಡರೆ ಕ್ರಿಕೆಟ್ ಅಭಿಮಾನಿಗಳಿಗೆ ಅದೇನೋ ಹೆಚ್ಚಿನ ಪ್ರೀತಿ, ಉತ್ಸಾಹ. ಅದರಲ್ಲೂ ವಿಶೇಷ ಎಂದರೆ 2008ರಲ್ಲಿ ಶುರುವಾದ ಐಪಿಎಲ್ ಆವೃತ್ತಿಯಲ್ಲಿ ಭಾಗಿಯಾದ ಗೌತಮ್, ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಕ್ಯಾಪ್ಟನ್ ಆಗಿ ಎರಡು ಬಾರಿ ಟ್ರೋಫಿಯನ್ನು ಎತ್ತಿಹಿಡಿದಿದ್ದರು. ಇದೀಗ ಮೆಂಟರ್ ಸ್ಥಾನದಲ್ಲಿದ್ದು, ಮೂರನೇ ಬಾರಿ ತಂಡಕ್ಕೆ ಕಪ್ ತಂದುಕೊಟ್ಟಿದ್ದಾರೆ.
ಇನ್ನೂ ತಮ್ಮ ಐಪಿಎಲ್ ವೃತ್ತಿಯಲ್ಲಿ ಪ್ರಸ್ತುತ ಕೆಕೆಆರ್ ಮೆಂಟರ್ ಆಗಿ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದಿರುವ ಗೌತಮ್ ಗಂಭೀರ್, ಐಪಿಎಲ್ 2024ರ ಫೈನಲ್ ಪಂದ್ಯದಲ್ಲಿ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ತಮ್ಮ ತಂಡ ನೀಡಿದ ಅಮೋಘ ಪ್ರದರ್ಶನವನ್ನು ಮೆಚ್ಚಿ, ಮೈದಾನದಲ್ಲಿ ಸಂಭ್ರಮಿಸಿದ್ದರು. ಮೆಂಟರ್ ಆಗಿ ಗೌತಿ ನೀಡಿದ ಅಪಾರ ಕೊಡುಗೆಯನ್ನು ಶ್ಲಾಘಿಸಿದ ಕೆಕೆಆರ್ ಮಾಲೀಕ ನಟ ಶಾರುಖ್ ಖಾನ್, ಗಂಭೀರ್ರನ್ನು ಗಟ್ಟಿಯಾಗಿ ಅಪ್ಪಿಕೊಂಡು, ಮುತ್ತಿಕ್ಕಿದರು. ಇನ್ನು ಇದರ ಬೆನ್ನಲ್ಲೇ ಗೌತಿಗೆ ಟೀಂ ಇಂಡಿಯಾದ ಹೆಡ್ ಕೋಚ್ ಸ್ಥಾನಕ್ಕೆ ದೊಡ್ಡ ಆಫರ್ ಕೂಡ ಒಲಿದು ಬಂದಿದೆ.
ಅಧಿಕೃತವಾಗಿ ಟೀಂ ಇಂಡಿಯಾದ ಹೆಡ್ ಕೋಚ್ ಸ್ಥಾನವನ್ನು ಇನ್ನೂ ಅಲಂಕರಿಸದ ಗಂಭೀರ್, ಕೆಕೆಆರ್ ಮೆಂಟರ್ ಆಗಿ ತಾವೇನು ಮಾಡಬೇಕು, ತಮ್ಮ ಕನಸು ಹಾಗೂ ಗುರಿ ಎರಡನ್ನೂ ಇದೀಗ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಷಯ ಕ್ರಿಕೆಟ್ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರ ಹುಬ್ಬೇರುವಂತೆ ಮಾಡಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಕ್ಯಾಪ್ಟನ್ ಆಗಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದ ಗೌತಿ, ಮೆಂಟರ್ ಆಗಿಯೂ ಕೂಡ ತಂಡಕ್ಕೆ ಅತ್ಯುತ್ತಮ ಕೆಲಸ ಮಾಡಿದ್ದಾರೆ.
ಸತತ ಗೆಲುವಿನ ಕೇಕೆ ಹಾಕಿರುವ ಕೆಕೆಆರ್ ತಂಡದ ಮೆಂಟರ್ ಸ್ಥಾನದಲ್ಲಿ ನಿಂತು ಮಾತನಾಡಿದ ಗಂಭೀರ್, "ಈ ಐಪಿಎಲ್ ಇತಿಹಾಸದಲ್ಲಿ ನಮ್ಮ ಕೊಲ್ಕತ್ತಾ ನೈಟ್ ರೈಡರ್ಸ್ ಟೀಮ್ನ ಅತ್ಯಂತ ಯಶಸ್ವಿ ತಂಡವನ್ನಾಗಿ ಮಾಡಬೇಕೆಂಬುದು ನನ್ನ ದೊಡ್ಡ ಕನಸು. ಇದು ಕೇವಲ ಪ್ರಾರಂಭವಷ್ಟೇ, ನಮ್ಮ ತಂಡಕ್ಕೆ ಇನ್ನೂ ಮೂರು ಟ್ರೋಫಿಗಳನ್ನು ಸೇರಿಸವುದೇ ನನ್ನ ಗುರಿ. ಎಂಐ (Mumbai Indians) ಮತ್ತು ಸಿಎಸ್ಕೆ (Chennai Super Kings) ತಂಡಗಳನ್ನು ಹಿಂದಿಕ್ಕಬೇಕು ಎಂದರೆ ನಾವಿನ್ನು ಎರಡು ಟ್ರೋಫಿ ಪಡೆಯಬೇಕು ಅಷ್ಟೇ" ಎಂದಿದ್ದಾರೆ,(ಏಜೆನ್ಸೀಸ್).