

ನವದೆಹಲಿ: ಟೀಂ ಇಂಡಿಯಾದ ಮಾಜಿ ಆಟಗಾರ, ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಜಾಗತಿಕ ಮಟ್ಟದಲ್ಲಿ ವಿರಾಟ್ ಹೆಸರು ಅಚ್ಚಳಿಯದಂತೆ ಉಳಿದಿದೆ. ಅಷ್ಟರ ಮಟ್ಟಿಗೆ ಪ್ರಸಿದ್ಧಿ ಹೊಂದಿರುವ ಏಕೈಕ ಆಟಗಾರ ಎಂದರೆ ಅದು 'ರನ್ ಮಷಿನ್' ಮಾತ್ರ. ಕ್ರಿಕೆಟ್ ಇತಿಹಾಸದಲ್ಲಿ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಬಿಟ್ಟರೆ, ವಿರಾಟ್ಗೆ ಮಾತ್ರ ಅಪಾರ ಜನಮನ್ನಣೆ ದೊರಕಿರುವುದು. ಇತ್ತೀಚೆಗಷ್ಟೇ ಯಶಸ್ವಿಯಾಗಿ ಮುಕ್ತಾಯಗೊಂಡ ಐಪಿಎಲ್ 17ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಸ್ಪೋಟಕ ಬ್ಯಾಟಿಂಗ್ ಕೊಡುಗೆ ನೀಡಿದ್ದ ಕೊಹ್ಲಿ ಅವರ ಅಭಿಮಾನಿಗಳಿಂದ ತನಗೆ ಕೊಲೆ ಬೆದರಿಕೆ ಇದೆ ಎಂದು ನ್ಯೂಜಿಲೆಂಡ್ನ ಮಾಜಿ ಹಿರಿಯ ಕ್ರಿಕೆಟಿಗ ಸೈಮನ್ ಡೌಲ್ ಹೇಳಿದ್ದಾರೆ.
ಟಿ20 ಕ್ರಿಕೆಟ್ ಲೀಗ್ನಲ್ಲಿ ವಿರಾಟ್ ಕೊಹ್ಲಿ ಅವರ ಸ್ಟ್ರೈಕ್ ರೇಟ್ ಅನ್ನು ಪ್ರಶ್ನಿಸಿದ್ದ ಸೈಮನ್ ಡೌಲ್ಗೆ ಇದೀಗ ವ್ಯಾಪಕ ವಿರೋಧಗಳು ವ್ಯಕ್ತವಾಗಿದ್ದು, ಕೊಹ್ಲಿ ಅಭಿಮಾನಿಗಳಿಂದ ಕೊಲೆ ಬೆದರಿಕೆ ಕರೆಗಳು ಕೇಳಿಬಂದಿವೆ. "ವಿರಾಟ್ ಬಗ್ಗೆ ಹಲವಾರು ಒಳ್ಳೆಯ ವಿಷಯಗಳನ್ನು ಕೂಡ ಮಾತನಾಡಿದ್ದೇನೆ. ಆದ್ರೆ, ಇದೊಂದು ವಿಚಾರಕ್ಕೆ ಇಷ್ಟೊಂದು ಟೀಕೆ, ಖಂಡನೆ ಎಂದರೆ ಹೇಗೆ? ಇಷ್ಟು ವಿಚಾರಗಳ ಮಧ್ಯೆ ಒಂದೇ ಒಂದು ವಿಷಯಕ್ಕೆ ವಿರಾಟ್ ಅಭಿಮಾನಿಗಳು ಕಿಡಿಕಾರುತ್ತಿರುವುದು ಎಷ್ಟು ಸರಿ?" ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆಯೇ ವಿರಾಟ್ ಅವರ ಸ್ಟ್ರೈಕ್ರೇಟ್ ಬಗ್ಗೆ ಮಾಜಿ ಕ್ರಿಕೆಟಿಗರು ಕಿಡಿಕಾರಿದ್ದರು. ಇದೇ ವಿಷಯದ ಬಗ್ಗೆ ಡೌಲ್ ಮಾತನಾಡಿದ್ದೇ ತಡ ಇದೀಗ ಕೊಹ್ಲಿ ಅಭಿಮಾನಿಗಳು ಕೆಂಡಾಮಂಡಲಗೊಂಡಿದ್ದು, ಕೊಲೆ ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ. "ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್ ಒಬ್ಬ ಅತ್ಯುತ್ತಮ ಆಟಗಾರ ಎಂಬುದರಲ್ಲಿ ಕಿಂಚಿತ್ತು ಅನುಮಾನವೇ ಬೇಡ. ಕೆಲವು ವಿಷಯಗಳನ್ನು ಗಮದಲ್ಲಿಟ್ಟುಕೊಂಡೇ ನಾನು ಅವರ ಸ್ಟ್ರೈಕ್ ರೇಟ್ ಬಗ್ಗೆ ಪ್ರಸ್ತಾಪ ಮಾಡಿದೆ ಅಷ್ಟೇ. ಇಷ್ಟಕ್ಕೆ ಡೆತ್ ಥ್ರೆಟ್ ಕರೆಗಳು ಬರುತ್ತಿರುವುದು ತೀವ್ರ ಬೇಸರ ಮೂಡಿಸಿದೆ" ಎಂದಿದ್ದಾರೆ,(ಏಜೆನ್ಸೀಸ್).