

ದೆಹಲಿ: ಎಲ್ಲಿಯೇ ಆಗಲಿ ರಾತ್ರಿ ಸಮಯದಲ್ಲಿ ಸಂಚರಿಸುವುದೆಂದರೆ ಸ್ವಲ್ಪ ಭಯ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಕಡೆ ರಾತ್ರಿಯಲ್ಲೂ ನಿರಾಂತಕವಾಗಿ ಸಂಚಾರ ಮಾಡಬಹುದಂತೆ. ಅದರಲ್ಲೂ ರಾತ್ರಿಯ ವೇಳೆ ನಡೆದಾಡಲು ಇದು ಜಗತ್ತಿನಲ್ಲೇ ಅತ್ಯಂತ ಸುರಕ್ಷಿತ ದೇಶವಂತೆ.
ಹೌದು.. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ರಾತ್ರಿ ಹೊತ್ತಲ್ಲಿ ಸಂಚರಿಸಲು ಜಗತ್ತಿನ ಅತಿ ಸುರಕ್ಷಿತ ರಾಷ್ಟ್ರ ಎಂಬ ಹೆಗ್ಗಳಿಕೆ ಇದೀಗ ಪಾತ್ರವಾಗಿದೆ. ಅಂತಾರಾಷ್ಟ್ರೀಯ ಸಮೀಕ್ಷೆ 'ದ ಗ್ಯಾಲಪ್ ಗ್ಲೋಬಲ್ ಲಾ ಆ್ಯಂಡ್ ಆರ್ಡರ್ 2021' ವರದಿ ಪ್ರಕಾರ ಯುಎಇ ಈ ಮನ್ನಣೆಗೆ ಭಾಜನವಾಗಿದೆ.
'ದ ಗ್ಯಾಲಪ್ ಗ್ಲೋಬಲ್ ಲಾ ಆ್ಯಂಡ್ ಆರ್ಡರ್ 2021' ಸಮೀಕ್ಷೆಯಲ್ಲಿ 95 ಅಂಕಗಳ ಮೂಲಕ ಈ ವಿಷಯದಲ್ಲಿ ಯುಎಇ ಟಾಪ್-1 ಸ್ಥಾನದಲ್ಲಿದ್ದರೆ, 93 ಅಂಕಗಳ ಮೂಲಕ ನಾರ್ವೆ ಎರಡನೇ ಸ್ಥಾನದಲ್ಲಿದೆ. ಟಾಪ್-5ರ ನಂತರದ ಮೂರು ಸ್ಥಾನಗಳಲ್ಲಿ ಚೀನಾ, ಸ್ಲೊವೆನಿಯಾ ಮತ್ತು ತೈವಾನ್ಗಳಿವೆ. ಇನ್ನು ಕಾನೂನು ಮತ್ತು ಸುವ್ಯವಸ್ಥೆ ವಿಚಾರದಲ್ಲೂ ಯುಎಇ ಮುಂಚೂಣಿಯಲ್ಲಿದ್ದು, ಇದರಲ್ಲಿ ಯುಎಇ ಎರಡನೇ ಸ್ಥಾನದಲ್ಲಿದ್ದರೆ, ನಾರ್ವೆ ಮೊದಲ ಸ್ಥಾನದಲ್ಲಿದೆ.
ಯುಎಇ ಇವೆರಡು ಮನ್ನಣೆಗೆ ಪಾತ್ರವಾದ ಹಿನ್ನೆಲೆಯಲ್ಲಿ ಯುಎಇ ಉಪಾಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ರಶಿದ್ ಟ್ವೀಟ್ ಮಾಡಿ ಹೆಮ್ಮೆ ಪಟ್ಟಿದ್ದಾರೆ. 'ಹಗಲು ಇಲ್ಲವೇ ರಾತ್ರಿಯಲ್ಲಿ ಮಹಿಳೆ ಒಬ್ಬಂಟಿಯಾಗಿ ಯಾವುದೇ ಭಯವಿಲ್ಲದೆ ಓಡಾಡುತ್ತಿದ್ದಾಳೆ ಎಂದರೆ ಅವಳು ಎಮಿರೇಟ್ಸ್ನಲ್ಲಿದ್ದಾಳೆ' ಎಂದು ತಿಳಿದುಕೊಳ್ಳಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
'ಮಹಿಳೆಯೊಬ್ಬಳು ರಾತ್ರಿಯಲ್ಲಿ ಮುಕ್ತವಾಗಿ ರಸ್ತೆಯಲ್ಲಿ ಸಂಚರಿಸುವ ದಿನ ಯಾವಾಗ ಬರುತ್ತದೋ ಆವಾಗ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳಬಹುದು' ಎಂಬುದಾಗಿ ಮಹಾತ್ಮ ಗಾಂಧಿ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.