

ರಿಯಾಜ್ ನಾಯ್ಕೂ (35) ಕಳೆದ 8 ವರ್ಷಗಳಿಂದ ಭದ್ರತಾ ಪಡೆಗಳ ಕಣ್ಣು ತಪ್ಪಿಸಿಕೊಂಡು ಓಡಾಡುತ್ತಿದ್ದ. ಹಲವು ಬಾರಿ ಆತ ಅಲ್ಲಿ ಅಡಗಿದ್ದಾನೆ, ಇಲ್ಲಿ ಅಡಗಿದ್ದಾನೆ ಎಂಬ ಮಾಹಿತಿಗಳ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ್ದರೂ ಆತ ಸಿಕ್ಕಿರಲಿಲ್ಲ. ಅದೆಲ್ಲವೂ ಹಾದಿ ತಪ್ಪಿಸುವ ಮಾಹಿತಿಗಳಾಗಿದ್ದವು. ತನ್ನ ಹುಟ್ಟೂರಿನ ವಲಯದಲ್ಲಿ ನಾಯ್ಕೂ ಒಂದು ಡಜನ್ಗೂ ಹೆಚ್ಚು ಅಡಗುದಾಣಗಳನ್ನು ಹೊಂದಿದ್ದು, ಭದ್ರತಾ ಪಡೆಗಳಿಗೆ ಚಳ್ಳೆಹಣ್ಣು ತಿನ್ನಿಸುವಲ್ಲಿ ನಿಷ್ಣಾತನಾಗಿದ್ದ. ಆದರೆ ಆತ ಕೊನೆಗೂ ಬಲೆಗೆ ಬಿದ್ದು ಸುದೀರ್ಘ 36 ಗಂಟೆ ನಡೆದ
ಎನ್ಕೌಂಟರ್ನಲ್ಲಿ ಗುಂಡೇಟಿಗೆ ಬಲಿಯಾದ. ಆತ ಪುಲ್ವಾಮಾ ಜಿಲ್ಲೆಯ ಬೆಲ್ಘ್ಪೋರಾದ ಗ್ರಾಮವೊಂದರಲ್ಲಿ ಇರುವುದನ್ನು ಖಚಿತಪಡಿಸಿಕೊಂಡ ಸೇನೆ, ಪೊಲೀಸರು ಮತ್ತು ಅರೆಸೇನಾ ಪಡೆ ಅಧಿಕಾರಿಗಳು ಮಂಗಳವಾರದಿಂದಲೇ ಕಾರ್ಯಾಚರಣೆ ಆರಂಭಿಸಿದರು ಎಂದು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ವಿವರಿಸಿದ್ದಾರೆ.
‘‘ಮನೆಯೊಂದರಲ್ಲಿ ನಾಯ್ಕೂ ಅಡಗಿಕೊಂಡಿರುವುದು ಪಡೆಗಳಿಗೆ ಖಚಿತವಾಗಿತ್ತು. ನಾಯ್ಕೂ ನೇತೃತ್ವ ವಹಿಸಿದ್ದ ಹಿಜ್ಬುಲ್ ಮುಜಾಹಿದೀನ್ನ ಒಳಹೊಕ್ಕು ಮಾಹಿತಿ ಕಲೆ ಹಾಕುವಲ್ಲಿ ಪಡೆಗಳು ಯಶಸ್ವಿಯಾಗಿ ಕಳೆದ 15 ದಿನಗಳಿಂದ ಆತನನ್ನು ಬಲೆಗೆ ಬೀಳಿಸಲು ಹೊಂಚು ಹಾಕುತ್ತಿದ್ದವು. ಮೂರು ದಿನಗಳಿಂದಂತೂ ಪ್ರತಿ ನಿಮಿಷ, ಪ್ರತಿ ಸೆಕೆಂಡ್ ಆಧಾರದಲ್ಲಿ ಕೆಲಸ ಮಾಡಿ ಆತನನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾದೆವು.
ನಾಯ್ಕೂ ಕಾಶ್ಮೀರದಲ್ಲಿ ದೀರ್ಘಕಾಲ ಬದುಕುಳಿದ ಭಯೋತ್ಪಾದಕ ಕಮಾಂಡರ್ ಆಗಿದ್ದ. ಆದರೆ ಈ ಬಾರಿ ಭದ್ರತಾ ಪಡೆಗಳು ಮೇಲುಗೈ ಸಾಧಿಸಿದವು. ಮಂಗಳವಾರ ಹಗಲಲ್ಲಿ ಇಡೀ ದಿನ ನಡೆಸಿದ ಶೋಧದಿಂದ ನಾಯ್ಕೂ ಸಿಗದಿದ್ದಾಗ ಭದ್ರತಾ ಪಡೆಯೊಂದು ಹಿಂದೆ ಸರಿಯಿತು. ಆದರೆ ಪೊಲೀಸರು ಕೆಲಸ ಮುಂದುವರಿಸಿದರು. ಗ್ರೌಂಡ್ ಟೀಮ್ ನಾಯ್ಕೂ ಇರುವಿಕೆ ಬಗ್ಗೆ ಖಾತರಿಯಿತ್ತು. ಮನವೊಲಿಸಿದ ಮೇಲೆ ಭದ್ರತಾಪಡೆ ಸಿಬ್ಬಂದಿ ರಾತ್ರಿಯೇ ಮತ್ತೆ ಸೇರಿಕೊಂಡರು. ಅತ್ಯುಗ್ರ ಭಯೋತ್ಪಾದಕನನ್ನು ಪತ್ತೆ ಹಚ್ಚದೆ ಮರಳಬಾರದೆಂಬ ಖಡಕ್ ಯೋಜನೆಗೆ ಫಲ ದೊರಕಿತು. ನಾಯ್ಕೂ ಟ್ರಾ್ಯಪ್ ಆಗಿರುವ ಸುದ್ದಿ ಹರಡಿ ಪ್ರತಿಭಟನೆ ಭುಗಿಲೇಳುವ ಸಾಧ್ಯತೆ ಇದ್ದಿದ್ದರಿಂದ ಕಾಶ್ಮೀರದ ಕೆಲ ಭಾಗಗಳಲ್ಲಿ ಬುಧವಾರ ಮೊಬೈಲ್ ಇಂಟರ್ನೆಟ್ ಮತ್ತು ಸಂದೇಶ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಎಲ್ಲ ಖಾಸಗಿ ಮೊಬೈಲ್ ಜಾಲಗಳ ಸೇವೆ ರದ್ದು ಮಾಡಲಾಗಿತ್ತು. ಉಗ್ರ ಅಡಗಿದ್ದ ಮನೆಯಲ್ಲಿ ಸುರಂಗ ಇರಬಹುದು ಎಂಬ ಶಂಕೆ ಮೇಲೆ ಭದ್ರತಾ ಸಿಬ್ಬಂದಿ ಹೆಚ್ಚಿನ ನಿಗಾ ವಹಿಸಿದ್ದೆವು. ಆತ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸದೆ ಇಡೀ ರಾತ್ರಿ ಮನೆಯ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಅಡ್ಡಾಡುತ್ತಿದ್ದ. ಅಂಥ ಅತ್ಯುಗ್ರ ಭಯೋತ್ಪಾದಕನೊಂದಿಗೆ ನಡೆಸಬೇಕಾದ ಕಾಳಗದ ಸುಳಿವೇ ಅಲ್ಲಿರಲಿಲ್ಲ. ಬುಧವಾರ ಬೆಳಗ್ಗೆ ಒಂಬತ್ತು ಗಂಟೆ ವೇಳೆಗೆ ನಾಯ್ಕೂನ ಅಡಗುದಾಣದ ಮೇಲೆ ದಾಳಿ ಮಾಡಲಾಯಿತು. ಹಲವು ವರ್ಷಗಳಿಂದ ದೇಶದ ಭದ್ರತಾ ಪಡೆಗಳಿಗೆ ಬೇಕಾಗಿದ್ದ ಭಯೋತ್ಪಾದಕನ ಕತೆ ಅಲ್ಲಿಗೆ ಮುಗಿದಿತ್ತು.
ಹಂತಕನ ಹತ್ಯೆ: ಹಂತಕನ ಅಂತ್ಯವಾಗಿದೆ. ಅಪಾರ ಸಂಖ್ಯೆಯ ನಾಗರಿಕರು, ವಲಸೆ ಕಾರ್ವಿುಕರನ್ನು ಕೊಂದ, ಪೊಲೀಸರನ್ನು ಅಪಹರಿಸಿ ಕೊಲೆ ಮಾಡಿದ, ಶಾಂತಿ ಮತ್ತು ಸಮೃದ್ಧತೆಯನ್ನು ಕೊಂದು ಹಾಕಿದ ಮನುಷ್ಯ ಹತನಾದ’’ ಎಂದು ಸಿಂಗ್ ಭಾವಪರವಶರಾಗಿ ವಿವರಿಸಿದರು.
ಗಣಿತ ಶಿಕ್ಷಕ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಬುಧವಾರ ನಡೆದ ಎನ್ಕೌಂಟರ್ನಲ್ಲಿ ಹತನಾದ ಭಯೋತ್ಪಾದಕ, ಹಿಜ್ಬುಲ್ ಮುಜಾಹಿದೀನ್ನ ಕಮಾಂಡರ್ ರಿಯಾಜ್ ನಾಯ್ಕೂ ಖಾಸಗಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕನಾಗಿದ್ದ. ಜಿಲ್ಲೆಯ ಬೆಲ್ಘಪುರ ಪ್ರದೇಶದಲ್ಲಿ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಯ್ಕೂ ಹತನಾದ. ಆತ ಕಳೆದ ಎಂಟು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ.
ಸ್ವರ್ಗ ಸಿಗುವುದೆಂಬ ತಪ್ಪು ಕಲ್ಪನೆ: ರಂಜಾನ್ ತಿಂಗಳಲ್ಲಿ ಬಹುತೇಕ ಉಗ್ರ ಸಂಘಟನೆಗಳು ಕಾರ್ಯಾಚರಣೆ ಹೆಚ್ಚಿಸುತ್ತವೆ. ಆದರೆ ಕಳೆದ ವರ್ಷ ಭದ್ರತಾ ಪಡೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಭಯೋತ್ಪಾದಕರನ್ನು ನಿಷ್ಕಿ›ಯಗೊಳಿಸಿದ್ದರು ಎಂದು ಕೇಂದ್ರೀಯ ಅರೆಸೇನಾ ಪಡೆಗಳ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಂಜಾನ್ನ 17ನೇ ದಿನ, ಮೇ 11ರಂದು ಬದ್ರ್ ಯುದ್ಧದ ವಿಜಯದ ವಾರ್ಷಿಕೋತ್ಸವ ದಿನ. ಪ್ರಸಕ್ತ, ‘ದಿ ರೆಸಿಸ್ಟನ್ಸ್ ಫ್ರಂಟ್ (ಟಿಆರ್ಎಫ್)’ ಹೆಸರಿನ ಮರೆಯಲ್ಲಿ ಕೆಲಸ ಮಾಡುತ್ತಿರುವ ಜೈಷ್ ಮತ್ತು ಲಷ್ಕರ್ ಸಂಘಟನೆಗಳು ಹೆಚ್ಚು ದಾಳಿ ನಡೆಸುವ ನಿರೀಕ್ಷೆ ಇದೆ. ಈ ಅವಧಿಯಲ್ಲಿ ನಾಸ್ತಿಕರನ್ನು ಕೊಂದರೆ ತಾವು ‘ಜನ್ನತ್’ಗೆ (ಸ್ವರ್ಗ) ಹೋಗಬಹುದು ಎಂಬುದು ಅವರ ನಂಬಿಕೆಯಾಗಿದೆ. ಆದರೆ ಭಯೋತ್ಪಾದಕರ ದಾಳಿಗಳನ್ನು ವಿಫಲಗೊಳಿಸಲು ಭದ್ರತಾ ಪಡೆಗಳು ತಂತ್ರ ರೂಪಿಸಿವೆ. ಬೇಹುಗಾರಿಕೆ ದಳಗಳ ಮಾಹಿತಿಗಳ್ನು ಪಡೆಯಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ. ಈ ತಂತ್ರದ ಭಾಗವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ನಾಯ್ಕೂ ಸಹಿತ ನಾಲ್ವರು ಉಗ್ರರು ಹತರಾದರು.
68 ಭಯೋತ್ಪಾದಕರು ಹತ: ಸೇನೆ ಮತ್ತು ಭದ್ರತಾ ಪಡೆಗಳು ನಡೆಸಿದ ದಿಟ್ಟ ಕಾರ್ಯಾಚರಣೆಯ ಫಲವಾಗಿ 2020 ಜನವರಿಯಿಂದ ಮೇ 6ರವರೆಗೆ 68 ಭಯೋತ್ಪಾದಕರು ಹತರಾಗಿದ್ದಾರೆ. ಆ ಪೈಕಿ 22 ಮಂದಿ ಹಿಜ್ಬುಲ್ ಮುಜಾಹಿದೀನ್, ತಲಾ ಎಂಟು ಮಂದಿ ಲಷ್ಕರ್ ಮತ್ತು ಜೈಷ್, ತಲಾ ಮೂವರು ಅನ್ಸರ್ ಘಜ್ವತುಲ್ ಹಿಂದ್, ಇಸ್ಲಾಮಿಕ್ ಸ್ಟೇಟ್ ಜಮ್ಮು ಮತ್ತು ಕಾಶ್ಮೀರ್ ಸಂಘಟನೆಗಳಿಗೆ ಸೇರಿದವರು. 24 ಭಯೋತ್ಪಾದಕರು ಯಾವ ಸಂಘಟನೆಗಳಿಗೆ ಸೇರಿದವರೆಂದು ತಿಳಿದುಬಂದಿಲ್ಲ. 2019ರಲ್ಲಿ ಒಟ್ಟು 156 ಭಯೋತ್ಪಾದಕರು ಹತರಾದರು ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಗುರುವಾರ ತಿಳಿಸಿದ್ದಾರೆ. ಕಲ್ಲುತೂರಾಟ: ಭಾರತೀಯ ಸೇನೆಯಿಂದ ಹತ್ಯೆಗೀಡಾದ ಉಗ್ರ ರಿಯಾಜ್ ನಾಯ್ಕೂವಿನ ತವರೂರಾದ ಅವಂತಿಪೂರಾ ಪ್ರದೇಶದಲ್ಲಿ ಕಲ್ಲುತೂರಾಟ ನಡೆದಿದೆ. ಘಟನೆಯಲ್ಲಿ 16 ಜನರಿಗೆ ಗಾಯಗಳಾಗಿವೆ.
ಹಿಜ್ಬುಲ್ನ ಸಹಾಯಕ ಸೆರೆ: ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಗ್ರೌಂಡ್ ವರ್ಕರ್ (ಸ್ಥಳೀಯ ಸಹಾಯಕ) ಆಲಂನನ್ನು (22) ಭದ್ರತಾ ಪಡೆಗಳು ಬಂಧಿಸಿದ್ದು, ಆತನಿಂದ ಪಿಸ್ತೂಲ್ ಮತ್ತು ವೈರ್ಲೆಸ್ ಸೆಟ್ ವಶಪಡಿಸಿಕೊಳ್ಳಲಾಗಿದೆ. ಗುಂಡಾನಾ ಪ್ರದೇಶದ ಟಂಟಾನಾ ಗ್ರಾಮದಲ್ಲಿ ಬುಧವಾರ ಬಂಧನಕ್ಕೊಳಗಾದ 27 ವರ್ಷದ ಭಯೋತ್ಪಾದಕ ತನ್ವೀರ್ ಅಹ್ಮದ್ ನೀಡಿದ್ದ ಮಾಹಿತಿ ಮೇರೆಗೆ ಈತನನ್ನು ಬಂಧಿಸಲಾಗಿದೆ.
ಪ್ರತೀಕಾರ ಸಾಧ್ಯತೆ: ಕಾಶ್ಮೀರ ಕಣಿವೆಯ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ರಿಯಾಜ್ ನಾಯ್ಕೂ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಭಯೋತ್ಪಾದಕರು ಪ್ರಯತ್ನಿಸಬಹುದೆಂದು ಸೇನೆ ಅಭಿಪ್ರಾಯಪಟ್ಟಿದ್ದು ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಬದ್ರ್ ಸಮರದ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಅಂದರೆ ಮೇ 11ರಂದು ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿಗಳನ್ನು ತೀವ್ರಗೊಳಿಸಬಹುದೆಂಬ ಸುಳಿವಿನ ನಡುವೆಯೇ ಬುಧವಾರದ ಸೇನಾ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಕಮಾಂಡರ್ ರಿಯಾಜ್ನನ್ನು ಭದ್ರತಾ ಪಡೆಗಳು ಹೊಡೆದುರಳಿಸಿವೆ. 2016ರಲ್ಲಿ ಹತನಾದ ಬುಹ್ರಾನ್ ವಾನಿಯ ಉತ್ತರಾಧಿಕಾರಿಯಾಗಿದ್ದ ನಾಯ್ಕೂನ ಹತ್ಯೆಯಿಂದಾಗಿ ಉಗ್ರ ಸಂಘಟನೆಯಲ್ಲಿ ನಾಯಕತ್ವದ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆಯಿದೆ. ಆದರೂ ಹಿಜ್ಬುಲ್ನ ಕೆಳಹಂತದ ಇತರ ಕಮಾಂಡರ್ಗಳು ಅಥವಾ ಪಾಕಿಸ್ತಾನ ಮೂಲದ ಜೈಷ್- ಎ-ಮೊಹಮದ್ ಅಥವಾ ಲಷ್ಕರ್ ಎ ತೊಯ್ಬಾದಂಥ ಭಯೋತ್ಪಾದಕ ಸಂಘಟನೆಗಳು ನಾಯ್ಕೂ ಹತ್ಯೆಗೆ ಮುಯ್ಯಿ ತೀರಿಸಲು ಭಾರಿ ಪ್ರಮಾಣದ ದಾಳಿ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.