

ಟರ್ಕಿ: ಅಮ್ಮಾ... ಈ ಹೆಸರಿನಲ್ಲಿಯೇ ಅದೇನೋ ಸೆಳೆತವಿದೆ. ಮನುಷ್ಯರಷ್ಟೇ ಅಲ್ಲ, ಪ್ರತಿಯೊಂದು ಜೀವಿಯಲ್ಲಿಯೂ ಅಮ್ಮ-ಮಕ್ಕಳ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.
ತಾಯಿ ಬೆಕ್ಕೊಂದು ಅನಾರೋಗ್ಯಪೀಡಿತವಾಗಿರುವ ತನ್ನ ಮರಿಯನ್ನು ಎತ್ತಿಕೊಂಡು ಸೀದಾ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ಗೆ ನುಗ್ಗಿದೆ. ಸಿಸಿಟಿವಿಯಲ್ಲಿ ದಾಖಲಾಗಿರುವ ಈ ದೃಶ್ಯವೀಗ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ಕರ್ನಾಟಕದ ಹೆಂಗಸರ ಮೇಲೆ ಕರೊನಾ ಮುನಿಸು!
ಇದು ನಡೆದದ್ದು ಟರ್ಕಿಯಲ್ಲಿ. ಇಲ್ಲಿಯ ಇಸ್ಟಾನ್ಬುಲ್ ಎಂಬ ಆಸ್ಪತ್ರೆಯಲ್ಲಿ ಕಳೆದ ವಾರ ಏಕಾಏಕಿಯಾಗಿ ಬೆಕ್ಕೊಂದು ಓಡಿ ಬಂದಿದೆ. ಅದರ ಬಾಯಲ್ಲಿ ಮರಿಯಿತ್ತು. ಬೆಕ್ಕು ಮರಿ ಹಾಕಿದಾಗ ಅದನ್ನು ಸುರಕ್ಷಿತವಾಗಿ ಇಡಲು ಜಾಗ ಹುಡುಕುತ್ತಲೇ ಇರುತ್ತದೆ. ಈ ಕಾರಣಕ್ಕೆ ಮರಿ ಹಾಕಿದ ಸಮಯದಲ್ಲಿ ಅದರ ಓಡಾಟ ಸಾಮಾನ್ಯವೇ.
ಇದೇ ರೀತಿ ಅಪ್ಪಿತಪ್ಪಿ ಏನಾದರೂ ಈ ಬೆಕ್ಕು ಆಸ್ಪತ್ರೆಗೆ ನುಗ್ಗಿಬಿಟ್ಟಿತ್ತಾ ಎಂದು ಅಲ್ಲಿಯ ವೈದ್ಯರೂ ಅರೆ ಕ್ಷಣ ಅಂದುಕೊಂಡರಂತೆ. ಆದರೆ ಆ ಬೆಕ್ಕಿನ ಧಾವಂತ, ಅದರ ಕಣ್ಣಿನಲ್ಲಿ ಇರುವ ನೋವನ್ನು ಅಲ್ಲಿಯ ಮಹಿಳಾ ಸಿಬ್ಬಂದಿಯೊಬ್ಬರು ನೋಡಿದ್ದಾರೆ. ಅವರಿಗೆ ಅರೆ ಕ್ಷಣದಲ್ಲಿಯೇ ಬೆಕ್ಕು ಮರಿಯ ಸಂಕಟದಲ್ಲಿದೆ ಎಂದು ತಿಳಿದಿದೆ.
ಆ ಕಡೆ, ಈ ಕಡೆ ನೋಡದ ಬೆಕ್ಕು ಅಚ್ಚರಿ ಎಂಬಂತೆ ಸೀದಾ ಎಮರ್ಜೆನ್ಸಿ ವಾರ್ಡ್ನತ್ತ ಓಡಿದೆ. ಅಷ್ಟೊತ್ತಿಗಾಗಲೇ ಆ ಮಹಿಳಾ ಸಿಬ್ಬಂದಿ ಆಸ್ಪತ್ರೆಯ ವೈದ್ಯರಿಗೆ ವಿಷಯ ತಿಳಿಸಿದ್ದರು. ಆ ಬೆಕ್ಕನ್ನು ನೋಡಿದ ವೈದ್ಯರಿಗೂ ಈ ಅಮ್ಮನ ನೋವು ತಿಳಿಯಲು ಹೆಚ್ಚು ಹೊತ್ತು ಬೇಕಾಗಿಲ್ಲವಂತೆ.
ಆ ಬೆಕ್ಕು ಕೂಡ ವೈದ್ಯರತ್ತ ದನನೀಯ ದೃಷ್ಟಿ ಬೀರಿತು. ನಂತರ ಮರಿಯನ್ನು ಕರೆದುಕೊಂಡು ಹೋದ ವೈದ್ಯರು, ನಂತರ ತಂದು ಬೆಕ್ಕಿನತ್ತ ಬಿಟ್ಟಿದ್ದಾರೆ. ಮರಿಗೆ ಏನಾಗಿತ್ತು, ಅದಕ್ಕೆ ಚಿಕಿತ್ಸೆ ಕೊಟ್ಟರೇ ಇತ್ಯಾದಿಗಳ ಬಗ್ಗೆ ಮಾಹಿತಿ ಇಲ್ಲ.
ಆದರೆ ಈ ಬೆಕ್ಕಿನ ಬಗ್ಗೆ ಮಾತ್ರ ಅಲ್ಲಿಯ ವೈದ್ಯರೊಬ್ಬರು ಫೋಟೋ ಸಹಿತ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ನಾವು ಒಂದು ವಿಶೇಷ ಚಿಕಿತ್ಸೆಯಲ್ಲಿ ತೊಡಗಿದ್ದೆವು. ಅದು ಬೆಕ್ಕಿನ ಮರಿಯದ್ದು. ಅದಕ್ಕಾಗಿ ನಾವು ಇಂದು ಎಮರ್ಜೆನ್ಸಿ ವಾರ್ಡ್ಗೆ ಹೋಗಿದ್ದೆವು' ಎಂದು ಅವರು ಬರೆದುಕೊಂಡಿದ್ದಾರೆ. ಇದೀಗ ಭಾರಿ ವೈರಲ್ ಆಗಿದೆ.