

ಮಲಪ್ಪುರಂ (ಕೇರಳ): ಕೆಲ ದಿನಗಳ ಹಿಂದೆ ದೆಹಲಿ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ತಬ್ಲಿಘಿಗಳ ಸಭೆ ಭಾರಿ ಸುದ್ದಿ ಮಾಡಿತ್ತು. ಕರೊನಾ ಸೋಂಕು ತೀವ್ರವಾಗಿ ಹರಡುವಲ್ಲಿ, ಕೆಲವು ತಬ್ಲಿಘಿಗಳ ಪಾಲೂ ಇದೇ ಎಂಬ ಬಗ್ಗೆ ಭಾರಿ ಚರ್ಚೆಯೂ ನಡೆದಿತ್ತು. ಇಲ್ಲಿ ಹೇಳಹೊರಟಿರುವ ಸುದ್ದಿ ಕೂಡ ಅದರ ಮುಂದುವರೆದಿರುವ ಭಾಗ.
ಎರಡು ಹೆಂಡಂದಿರ ಗಂಡನಾಗಿರುವ ಈ ವ್ಯಕ್ತಿ ಒಬ್ಬಳ ಮನೆಯಿಂದ ಇನ್ನೊಬ್ಬಳ ಮನೆಗೆ ಅಲೆದಾಡಿ, ಊರೂರು ಸುತ್ತಿ ಎರಡು ಬಾರಿ ಕ್ವಾರಂಟೈನ್ ಅನುಭವಿಸಿ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಇದು.
ಅಂದು ನಡೆದ ಸಭೆಗೆ ಹೋಗಿದ್ದ ಕೇರಳದ ಮಲಪ್ಪುರಂನ ನೀಲಾಂಬೂರ್ ನಿವಾಸಿಗೆ ಇಬ್ಬರು ಹೆಂಡತಿಯರು. ಸಭೆ ಮುಗಿಸಿ ಒಬ್ಬಳು ಹೆಂಡತಿ ಇರುವಲ್ಲಿ ಅಂದರೆ ಕಯಾಮಕುಲಮ್ನ ಕಾವಲೂರಿಗೆ ಬಂದ. ಅಷ್ಟರಲ್ಲಿಯೇ ಈ ಸಭೆಯ ದೇಶಾದ್ಯಂತ ಭಾರಿ ಚರ್ಚೆ ಶುರುವಾಗಿತ್ತು.
ಈತ ಬಂದ ಸುದ್ದಿ ತಿಳಿಯುತ್ತಲೇ, ಹೆಂಡತಿಯ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದರಿಂದಲೋ ಏನೋ, ಈತನನ್ನು ಪೊಲೀಸರು ಕರೆದೊಯ್ದು 14 ದಿನಗಳ ಕ್ವಾರಂಟೈನ್ಗೆ ಕಳುಹಿಸಿದರು. ಕ್ವಾರಂಟೈನ್ನಲ್ಲಿ ಕಟ್ಟುನಿಟ್ಟು ನಿಯಮ ಇದ್ದುದರಿಂದ ಅಲ್ಲಿಂದ ಅಲ್ಲಾಡಲು ಆಗಲಿಲ್ಲ ಈತನಿಗೆ.
ಕ್ವಾರಂಟೈನ್ ಮುಗಿಯುತ್ತಲೇ, ಲಾಕ್ಡೌನ್ ನಿಯಮ ಉಲ್ಲಂಘಿಸಿದ ಈತ ಎಲ್ಲಾ ಪೊಲೀಸರ ಕಣ್ಣುತಪ್ಪಿಸಿ ಏಪ್ರಿಲ್ 20 ರಂದು ಚೋಕ್ಕಾಡ್ನಲ್ಲಿರುವ ತಮ್ಮ ಎರಡನೇ ಹೆಂಡತಿಯ ಮನೆಗೆ ಹೋದ. ಅವನ ಗ್ರಹಚಾರ ಸರಿಯಿರಲಿಲ್ಲ. ಹೆಂಡತಿಯ ಮನೆಯವರಿಂದ ವಿಷಯ ಅಕ್ಕಪಕ್ಕದ ಮನೆಯವರಿಗೆ ತಿಳಿಯಿತು. ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಮನೆಗೆ ಬಂದ ಆರೋಗ್ಯ ಅಧಿಕಾರಿಗಳು ಆತನನ್ನು ಕರೆದುಕೊಂಡು ಪುನಃ 14 ದಿನ ಕ್ವಾರಂಟೈನ್ನಲ್ಲಿ ಇಟ್ಟರು.
ಆದರೆ ಅಲ್ಲಿಂದ ಪರಾರಿಯಾದ ಈ ಆಸಾಮಿ, ಪುನಃ ತನ್ನ ಮೊದಲ ಹೆಂಡತಿಯ ಮನೆಗೆ ಬಂದ. ಪೊಲೀಸರ ಕಣ್ಣುತಪ್ಪಿಸಿ ಸರಕಿನ ಗಾಡಿಯಲ್ಲಿ ಕುಳಿತು ಬಂದ. ಇಷ್ಟು ದಿನ ಎಲ್ಲಿಗೆ ಹೋಗಿದ್ದಿ ಎಂದು ಹೆಂಡತಿ ಪ್ರಶ್ನಿಸಿದಾಗ ಈ ತಬ್ಲಿಘಿ ತಬ್ಬಿಬ್ಬಾದ. ಇನ್ನೊಂದು ಹೆಂಡತಿ ಇರುವ ವಿಷಯ ಮೊದಲಾಕೆಗೆ ಗೊತ್ತಿರಲಿಲ್ಲ. ಆದರೆ ಗಂಡನ ಹಾವಭಾವ ಕಂಡು ಹಾಗೂ ಆತ ಗಲಿಬಿಲಿಯಾದದ್ದನ್ನು ಕಂಡ ಈ ಹೆಂಡತಿಗೆ ವಿಷಯ ತಿಳಿಯದೇ ಇರುತ್ತದೆಯೆ?
ಸರಿ. ಕ್ಯಾತೆ ತೆಗೆದಳು ಈ ಹೆಂಡತಿ. ಇಬ್ಬರ ನಡುವೆ ಜಟಾಪಟಿ ಜೋರಾಯಿತು. ಹೆಂಡತಿಯ ಬಾಯಿ ಜೋರಾದಾಗ ಈ ಭೂಪ ಸುಮ್ಮನೆ ಇರದೇ ಅವಳ ವಿರುದ್ಧ ಪೊಲೀಸರಿಗೆ ದೂರು ಕೊಡಲು ಹೋದ!
ಅಲ್ಲಿಯವರೆಗೆ ಪೊಲೀಸರಿಂದ ಕಣ್ಣುತಪ್ಪಿಸಿಕೊಂಡು ಓಡಾಡುತ್ತಿದ್ದವ ತಾನೇ ಹೋಗಿ ಪೊಲೀಸರ ಬಲೆಗೆ ಬಿದ್ದ. ಪೊಲೀಸರು ವಿಚಾರಣೆ ಮಾಡಿದಾಗ ಲಾಕ್ಡೌನ್ ನಿಯಮ ಉಲ್ಲಂಘಿಸಿರುವ ವಿಷಯ ತಿಳಿಯಿತು. ಆದ್ದರಿಂದ ಅವನ ವಿರುದ್ಧ ಲಾಕ್ಡೌನ್ ನಿಯಮ ಉಲ್ಲಂಘನೆ ದೂರು ದಾಖಲಿಸಿಕೊಳ್ಳಲಾಗಿದೆ. ಮಾತ್ರವಲ್ಲದೇ ಇದೀಗ ಆತನನ್ನು ಪುನಃ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಸದ್ಯ ಪೊಲೀಸರು ಇವನ ಮೇಲೆ ಕಣ್ಣಿಟ್ಟಿದ್ದಾರೆ. (ಏಜೆನ್ಸೀಸ್)