ಕರೊನಾ ಕಾರ್​ ಬಂದೇ ಬಿಡ್ತು- ಬಾಲಿವುಡ್​ಗೆ ಎಂಟ್ರಿ ಕೊಟ್ಟಾಯ್ತು. ನಿಮಗೂ ಬೇಕಾ?

car, corona2
Published on

ಮುಂಬೈ: ಕರೊನಾ, ಲಾಕ್​ಡೌನ್​ ಎಲ್ಲವೂ ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ಭಾರಿ ಹೊಡೆತವನ್ನೇ ಕೊಟ್ಟಿದೆ. ಲಾಕ್​ಡೌನ್​ ಸಮಯದಲ್ಲಿ ಅನೇಕ ಮಂದಿ ಮನೆಯೊಳಕ್ಕೆ ಏನು ಮಾಡಬೇಕು ಎಂದು ತಿಳಿಯದೇ ಖಿನ್ನತೆಗೆ ಜಾರಿದ್ದರೆ ಇನ್ನು ಕೆಲವರು ಸಿಕ್ಕ ಸಮಯವನ್ನೇ ಸದುಪಯೋಗಪಡಿಸಿಕೊಂಡು ತಮ್ಮ ಬಹುವರ್ಷಗಳ ಕನಸುಗಳನ್ನು ಈಡೇರಿಸಿಕೊಂಡಿದ್ದಾರೆ.

ಇರುವ ಪರಿಸ್ಥಿತಿಯನ್ನೇ ಉಪಯೋಗಿಸಿಕೊಳ್ಳುವುದರಲ್ಲಿಯೇ ಇರುವುದು ಟ್ಯಾಲೆಂಟ್​. ಅಂಥದ್ದೇ ಒಂದು ಸಕತ್​ ಒಳ್ಳೆಯ ತಲೆ ಓಡಿಸಿದೆ ಕಾರುಗಳ ವಿನ್ಯಾಸವನ್ನು ತ್ವರಿತವಾಗಿ ಬದಲಿಸುವುದರಲ್ಲಿ ಪ್ರಖ್ಯಾತಿ ಪಡೆದಿರುವ ಡಿಸಿ2 ಡಿಸೈನ್‌ ಕಂಪನಿ, ಅಂಬಾಸಿಡರ್‌ ಕಾರನ್ನು ವಿದ್ಯುತ್‌ ಚಾಲಿತ ಮಾಡುವ ಮೂಲಕ ಹೊಸದೊಂದು ಟ್ರೆಂಡ್​ ಸೃಷ್ಟಿಸಿದ್ದು ಇದೇ ಕಂಪನಿ. ಇದೀಗ ಹೊಸತೊಂದು ಆವಿಷ್ಕಾರ ಮಾಡಿದೆ. ಅದೇ ಕರೊನಾ ಕಾರ್​!

ಹೌದು. ಈ ಕರೊನಾ ಯುಗದಲ್ಲಿ ಏನಿದ್ದರೂ ಸಾಮಾಜಿಕ ಅಂತರ, ಸ್ಯಾನಿಟೈಸರ್​ ಇದರದ್ದೇ ಮಾತು. ಇದನ್ನೇ ಬಳಸಿಕೊಂಡು ಹೊಸತೇನಾದರೂ ಪ್ರಯೋಗ ಮಾಡಬಹುದಾ ಎಂಬ ಯೋಚನೆ ಬಂದದ್ದೇ ತಡ, ಕಾರಿನ ಒಳಾಂಗಣದಲ್ಲಿ ಕೆಲವೊಂದು ಕರೊನಾ ತಡೆ ಸುರಕ್ಷತೆಯನ್ನು ಒದಗಿಸಲು ಮುಂದಾಗಿದೆ.

ಹಾಗಿದ್ದರೆ ಈ ಕರೊನಾ ಕಾರ್​ ವಿಶೇಷತೆ ಏನಪ್ಪಾ ಎಂದರೆ, ಇದರೊಳಗೆ ಸೋಷಿಯಲ್​ ಡಿಸ್​ಟೆನ್ಸ್​ ರೂಪಿಸಲಾಗುವುದು. ಅಂದರೆ ವಾಹನ ಚಾಲಕ ಹಾಗೂ ಪ್ರಯಾಣಿಕರ ನಡುವೆ ಕನಿಷ್ಠ 6.2 ಅಡಿ ಅಂತರವಿರುವಂತೆ ಸೀಟನ್ನು ಅಡ್ಜ್​ಸ್ಟ್​ ಮಾಡಲಾಗುವುದು. ಅಷ್ಟೇ ಅಲ್ಲ, ಚಾಲಕ ಮತ್ತು ಪ್ರಯಾಣಿಕರ ನಡುವೆ ಅಂತರ ಕಾಯ್ದುಕೊಳ್ಳಲು ಚರ್ಮ ಮತ್ತು ಗಾಜಿನ ಪರದೆಯನ್ನೂ ಅಳವಡಿಸಲಾಗುವುದು.

ಸ್ಯಾನಿಟೈಜರ್​ ಕೂಡ ಇದರಲ್ಲಿ ಇರಲಿದ್ದು, ಅಗತ್ಯ ಇದ್ದಾಗ ಸ್ಯಾನಿಟೈಸರ್​ ಸಿಂಪಡನೆ ಮಾಡುತ್ತದೆ. ಕಾರಿನ ಎರಡೂ ಬದಿಗಳಲ್ಲಿ, ಹಾಗೆಯೇ ಮೇಲ್ಭಾಗದಲ್ಲಿ ಯಾಂತ್ರೀಕೃತ ಕ್ರಿಮಿನಾಶಕ ವ್ಯವಸ್ಥೆಯಿದೆ. ಪ್ರತೀ 20 ನಿಮಿಷಕ್ಕೊಮ್ಮೆ ಅದು ಸಿಂಪಡಣೆಯಾಗುತ್ತಲೇ ಇರುತ್ತದೆ. ಕಾರಿನ ಒಳಗೆ ಶುಚಿ ಇಲ್ಲವೇನೋ ಎಂಬ ಸಂದೇಹವೇ ಬೇಡ ಎಂದಿರುವ ಕಂಪನಿ, ಸ್ವಚ್ಛತೆಗೋಸ್ಕರ ಹೀಗೆ ಮಾಡಲಾಗಿದೆ ಎಂದಿದೆ.

ಈ ನೂತನ ವಿನ್ಯಾಸವನ್ನು ಈಗಾಗಲೇ ಎಸ್‌ಯುವಿ ಮತ್ತು ಎಂಪಿವಿಗಳಾದ ಟೊಯೋಟಾ ಇನ್ನೋವಾ ಕ್ರಿಸ್ಟಾ, ಟೊಯೋಟಾ ಫಾರ್ಚೂನರ್, ಮರ್ಸಿಡಿಸ್ ವಿ ಕ್ಲಾಸ್, ಕಿಯಾ ಕಾರ್ನಿವಲ್, ಮಹೀಂದ್ರಾ ಕಾರುಗಳಲ್ಲಿ ಪ್ರಯತ್ನಿಸಲಾಗಿದೆ. ಐಷಾರಾಮಿ ಕಾರುಗಳಾದ ಆಡಿ ಎ 8 ಮತ್ತು ಕ್ಯೂ 7, ಮರ್ಸಿಡಿಸ್ ಜಿಎಲ್ಎಸ್, ಮೇಬ್ಯಾಕ್, ಬಿಎಂಡಬ್ಲ್ಯು ಎಕ್ಸ್ 7 ಮತ್ತು 7 ಸೆರೀಸ್ ಇಡಬ್ಲ್ಯೂಬಿ, ವೋಲ್ವೋ ಎಕ್ಸ್‌ಸಿ 90, ಜಾಗ್ವಾರ್ ಎಕ್ಸ್‌ಜೆಎಲ್, ರೇಂಜ್ ರೋವರ್ ವೋಗ್ ಮತ್ತು ಸ್ಪೋರ್ಟ್, ರೋಲ್ಸ್ ರಾಯ್ಸ್ ಇಡಬ್ಲ್ಯೂಬಿಗಳಲ್ಲೂ ಅಳವಡಿಸಿಕೊಳ್ಳಲು ಅವಕಾಶವಿದೆ ಎಂದು ಅದು ತಿಳಿಸಿದೆ.

ಬಾಲಿವುಡ್‌ನ ಸೆಲೆಬ್ರಿಟಿಗಳ ಒಡೆತನದ ಕಾರುಗಳಿಗೆ ಮೇಕ್ ಓವರ್ ನೀಡಲು ಡಿಸಿ 2 ಡಿಸೈನ್ ಸಿದ್ಧತೆ ನಡೆಸಿದೆ. ಈಗಾಗಲೇ ಮಾಧುರಿ ದೀಕ್ಷಿತ್, ಸಲ್ಮಾನ್ ಖಾನ್, ಹೃತಿಕ್​ ರೋಷನ್​ ಸೇರಿದಂತೆ ಅನೇಕ ಮಂದಿ ತಮ್ಮ ಕಾರುಗಳಿಗೆ ಈ ಸೌಲಭ್ಯ ಪಡೆಯಲು ಮುಂದೆ ಬಂದಿದ್ದು, ಅವರ ಕಾರುಗಳ ಬದಲಾವಣೆಗೆ ಸಿದ್ಧತೆ ನಡೆದಿದೆ. ಜನರು ಕೂಡ ತಮ್ಮ ಕಾರುಗಳಲ್ಲಿ ಮಾರ್ಪಾಟು ಮಾಡಿಕೊಳ್ಳಬಹುದಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net