ಪೊದೆಯಲ್ಲಿ ಯುವ ಜೋಡಿ, ಫೋಟೋ ವೈರಲ್​: ಅಷ್ಟಕ್ಕೂ ಅಲ್ಲಿ ಆಗಿದ್ದೇನು?

Amit Nir
Published on

ಬೆಂಗಳೂರು: 'ಲವ್ ಇನ್​ ದಿ ಟೈಮ್ ಆಫ್ ಕಾಲರಾ' ಎಂಬುದನ್ನು ಬಹಳಷ್ಟು ಮಂದಿ ಕೇಳಿರುತ್ತಾರೆ, ಓದಿರುತ್ತಾರೆ. 'ಲವ್ ಇನ್ ದಿ ಟೈಮ್ ಆಫ್ ಕೋವಿಡ್' ಕೂಡ ಹಲವರು ಕಂಡಿದ್ದಾರೆ, ಕೇಳಿದ್ದಾರೆ, ಓದಿದ್ದಾರೆ. ಆದರೆ ಇದನ್ನು 'ಲವ್​ ಇನ್ ದಿ ಟೈಮ್ ಆಫ್ ಟೆರರಿಸಂ' ಎನ್ನಬಹುದೇನೋ!?

ಹೌದು.. ಇಂಥ ವಿಶೇಷ ಹಾಗೂ ವಿಚಿತ್ರ ಎನ್ನುವಂಥ ಪ್ರೀತಿಯ ಅಭಿವ್ಯಕ್ತಿಯೊಂದು ಕಂಡುಬಂದಿದೆ. ಅದು ಎಲ್ಲಿ ಯಾವಾಗ ಏನು ಎಂಬುದಕ್ಕೆ ಉತ್ತರ ಇಸ್ರೇಲ್​ನಲ್ಲಿನ ಹಮಾಸ್ ಉಗ್ರರ ಭೀಕರ ದಾಳಿ. ಈ ಸಂದರ್ಭದಲ್ಲಿ ಪೊದೆಯೊಂದರಲ್ಲಿ ಜೋಡಿಯೊಂದು ಜೊತೆಯಾಗಿ ಮಲಗಿ ತೆಗೆದುಕೊಂಡಿರುವ ಫೋಟೋವೊಂದು ಈಗ ವೈರಲ್ ಆಗಲಾರಂಭಿಸಿದೆ.

ದ್ವೇಷದ ಭೀಕರತೆಯ ನಡುವೆಯೂ ಹೀಗೊಂದು ಪ್ರೀತಿಯ ಅಭಿವ್ಯಕ್ತಿಯ ಪ್ರತೀಕವಾಗಿರುವ ಈ ಫೋಟೋಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬಹಳಷ್ಟು ಮಂದಿ ಈ ಫೋಟೋವನ್ನು ಹಂಚಿಕೊಂಡಿದ್ದು, ಇಸ್ರೇಲ್​ನ ಪರಿಸ್ಥಿತಿಯನ್ನು ಕಲ್ಪಿಸಿಕೊಂಡು ಪ್ರಾರ್ಥನೆಗಳನ್ನೂ ಸಲ್ಲಿಸಿದ್ದಾರೆ.

ಮೂರು ದಿನಗಳಿಂದ ಇಸ್ರೇಲನ್ನು ಅಕ್ಷರಶಃ ನರಕ ಎಂಬಂತಾಗಿಸಿರುವ ಹಮಾಸ್ ಉಗ್ರರ ದಾಳಿಯ ಭೀಕರತೆಗೆ ನೂರಾರಲ್ಲ, ಸಾವಿರಾರು ಪ್ರಕರಣಗಳು ಸಾಕ್ಷಿಯಾಗಿವೆ. ಸಾರ್ವಜನಿಕರನ್ನೇ ಗುರಿಯಾಗಿಸಿ ದಾಳಿ ನಡೆಸಿದ್ದ ಈ ಉಗ್ರರು ಮನೆಗಳಿಗೆ ನುಗ್ಗಿ ಮಕ್ಕಳು-ವೃದ್ಧರು ಎಂಬುದನ್ನೂ ನೋಡದೆ ಕೊಂದಿದ್ದಾರೆ. ಹಲವರ ದೇಹಗಳನ್ನು ಗುಂಡಿನಿಂದ ಛಿದ್ರಗೊಳಿಸಿದ್ದರೆ, ಇನ್ನು ಕೆಲವರನ್ನು ಮನಸೋಇಚ್ಛೆ ಕೊಚ್ಚಿ ಕೊಂದಿದ್ದಾರೆ. ಮನೆಗಳಿಗೆ ನುಗ್ಗಿ ಅತ್ಯಾಚಾರವನ್ನೂ ಎಸಗಿದ್ದಾರೆ.

ಹಮಾಸ್ ಉಗ್ರರ ಈ ಭೀಕರ ದಾಳಿ, ದ್ವೇಷದ ರೋಷಾವೇಶದ ನಡುವೆಯೂ ಪ್ರಾಣಭಯದಲ್ಲಿ ಜೊತೆಗೇ ಇದ್ದ ಜೋಡಿಯೊಂದು ಪ್ರೀತಿಯನ್ನು ವ್ಯಕ್ತಪಡಿಸಿದ್ದ ಪರಿಗೆ ಈಗ ಭಾರಿ ಮೆಚ್ಚುಗೆ ವ್ಯಕ್ತವಾಗಲಾರಂಭಿಸಿದೆ. ಹಮಾಸ್ ಉಗ್ರರು ಇಸ್ರೇಲ್​ನಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳವೊಂದರ ಮೇಲೂ ದಾಳಿ ಮಾಡಿದ್ದು, ನೂರಾರು ಜನರನ್ನು ಮನಬಂದಂತೆ ಕೊಂದುಹಾಕಿದ್ದರು.

ಇದೇ ಸಂಗೀತ ಕಾರ್ಯಕ್ರಮದಲ್ಲಿದ್ದ ಅಮಿತ್​ ಮತ್ತು ನಿರ್ ಎಂಬ ಜೋಡಿ ಉಗ್ರರಿಂದ ಬಚಾವಾಗುವ ಸಲುವಾಗಿ ಅಲ್ಲೇ ಸಮೀಪದ ಪೊದೆಯೊಂದರಲ್ಲಿ ಅವಿತುಕೊಂಡಿದ್ದರು. ಅಲ್ಲಿ ಅವರಿಬ್ಬರು ಭಯದ ನಡುವೆಯೇ ಪ್ರೀತಿಯಿಂದ ಜೊತೆಗಿದ್ದ ಫೋಟೋ ತೆಗೆದುಕೊಂಡಿದ್ದರು. 'ಒಂದು ವೇಳೆ ನಾವು ಸತ್ತರೆ ಇದು ನಮ್ಮ ಪ್ರೀತಿಯ ನೆನಪಾಗಿ ಇರಲಿ' ಎಂದು ಅವರು ಈ ಫೋಟೋ ತೆಗೆದುಕೊಂಡಿದ್ದರು ಎನ್ನಲಾಗಿದೆ.

ಬಹಳಷ್ಟು ಮಂದಿ ಇವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು, 'ಅವರು ಬದುಕಿರಲಿ' ಎಂದು ಬಯಸಿದ್ದಾರೆ. ಇನ್ನು ಹಲವರು 'ಈ ಜೋಡಿ ಜೀವಂತ ಇರಲಿ' ಎಂದು ಹಾರೈಸಿದ್ದಾರೆ. ಹಲವಾರು ಮಂದಿ ಸೋಷಿಯಲ್ ಮೀಡಿಯಾದಲ್ಲಿ ಈ ಪೋಟೋ ಹಂಚಿಕೊಂಡಿದ್ದಾರೆ. ಮಾತ್ರವಲ್ಲ ಈ ಫೋಟೋ ಇಸ್ರೇಲ್ ವಿದೇಶಾಂಗ ಸಚಿವಾಲಯದ ಅಧಿಕೃತ ಎಕ್ಸ್ ಹ್ಯಾಂಡಲ್​ನಿಂದಲೂ ರಿಪೋಸ್ಟ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net