

ಬೆಂಗಳೂರು: ಭಾರತದ ವರ್ಕ್ ಕಲ್ಚರ್ ಬದಲಾಗಬೇಕು, ಯುವಜನತೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಇನ್ಫೊಸಿಸ್ನ ನಾರಾಯಣಮೂರ್ತಿ ಅವರು ನೀಡಿದ್ದ ಹೇಳಿಕೆ ಕಳೆದ ಕೆಲವು ದಿನಗಳಿಂದ ಭಾರಿ ಸಂಚಲನ ಮೂಡಿಸಿತ್ತು. ಮಾತ್ರವಲ್ಲ, ಇದಕ್ಕೆ ಪರ-ವಿರೋಧ ಅಭಿಪ್ರಾಯಗಳು ಕೂಡ ವ್ಯಕ್ತವಾಗಿವೆ.
ನಾರಾಯಣಮೂರ್ತಿ ಅವರ ಹೇಳಿಕೆಗೆ ಹೃದ್ರೋಗ ತಜ್ಞರೊಬ್ಬರು ಪ್ರತಿಕ್ರಿಯೆ ನೀಡಿದ್ದು, ಅದು ಇನ್ನೊಂದು ಸಂಗತಿಯ ಕುರಿತು ಚಿಂತಿಸುವಂತೆ ಮಾಡಿದೆ. ಬೆಂಗಳೂರಿನ ಸಕ್ರಾ ವರ್ಲ್ಡ್ ಹಾಸ್ಪಿಟಲ್ನ ಹೃದ್ರೋಗ ತಜ್ಞ ಡಾ.ದೀಪಕ್ ಕೃಷ್ಣಮೂರ್ತಿ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ನಾರಾಯಣಮೂರ್ತಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದಿನಕ್ಕೆ 24 ಗಂಟೆಗಳಿದ್ದು, ವಾರದ ರಜೆಯನ್ನು ಹೊರತು ಪಡಿಸಿದರೆ ವಾರಕ್ಕೆ 70 ಗಂಟೆಗಳಂತೆ ಕೆಲಸ ಮಾಡಲು ಆರು ದಿನಗಳಲ್ಲಿ ನಿತ್ಯ 12 ಗಂಟೆ ಕೆಲಸ ಮಾಡಬೇಕು. ಇನ್ನುಳಿದ 12 ಗಂಟೆಗಳಲ್ಲಿ 8 ಗಂಟೆ ನಿದ್ರೆಗೆ ಹೋದರೆ 4 ಗಂಟೆ ಉಳಿಯುತ್ತದೆ. ಬೆಂಗಳೂರಿನಂಥ ನಗರದಲ್ಲಿ 2 ಗಂಟೆ ರಸ್ತೆಗಳಲ್ಲೇ ಕಳೆದುಹೋಗುತ್ತದೆ. ಇನ್ನುಳಿದ 2 ಗಂಟೆಗಳಲ್ಲಿ ಬ್ರಷ್, ಸ್ನಾನ, ತಿಂಡಿ-ಊಟ ಮುಗಿಸಬೇಕು ಎಂಬುದಾಗಿ ಅವರು ಲೆಕ್ಕಾಚಾರ ನೀಡಿದ್ದಾರೆ.
ಇಷ್ಟಾದ ಮೇಲೆ ಜನರೊಂದಿಗೆ ಬೆರೆಯಲು, ಮನೆಯವರೊಂದಿಗೆ ಮಾತನಾಡಲು, ವ್ಯಾಯಾಮಕ್ಕೆ, ಮನರಂಜನೆಗೆ ಸಮಯ ಎಲ್ಲಿ ಎಂಬುದಾಗಿ ಪ್ರಶ್ನಿಸಿರುವ ಅವರು, ಕೆಲವು ಕಂಪನಿಗಳು ಕೆಲಸದ ಅವಧಿ ಮುಗಿದ ಬಳಿಕವೂ ಇ-ಮೇಲ್, ಕಾಲ್ಗಳಿಗೆ ಉತ್ತರಿಸಬೇಕು ಎಂದು ಬಯಸುತ್ತವೆ ಎಂಬ ಸಂಗತಿ ಮೇಲೂ ಬೆಳಕು ಚೆಲ್ಲಿದ್ದಾರೆ.
ವಾರಕ್ಕೆ 70 ಗಂಟೆಗಳಂತೆ ಕೆಲಸ ಮಾಡುವ ಕುರಿತಾಗಿ ಲೆಕ್ಕಾಚಾರ ನೀಡಿ, ಅದರ ಸಾಧ್ಯತೆ-ಸಮಸ್ಯೆಗಳ ಕುರಿತು ಪ್ರಸ್ತಾಪಿಸಿರುವ ಡಾ.ದೀಪಕ್ ಕೃಷ್ಣಮೂರ್ತಿ, ಯುವಕರು ಏಕೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂಬುದರ ಬಗ್ಗೆ ಇನ್ನೂ ಅಚ್ಚರಿ ಪಡುತ್ತಿದ್ದೀರಾ? ಎಂಬ ಪ್ರಶ್ನೆಯನ್ನೂ ಜನರ ಮುಂದಿಟ್ಟಿದ್ದಾರೆ.