

ಬೆಂಗಳೂರು: ಬೇಗ ಮಲಗಿ ಬೇಗ ಏಳುವುದು ಒಳ್ಳೆಯದು ಎಂಬ ಮಾತಿದೆ. ಹಾಗೆಯೇ ಉತ್ತಮ ಸ್ವಾಸ್ಥ್ಯಕ್ಕೆ ಉತ್ತಮ ನಿದ್ರೆ ಕೂಡ ಅಗತ್ಯ ಎನ್ನುವ ಮಾತೂ ಇದೆ. ಹಾಗಾದರೆ ಒಳ್ಳೆಯ ನಿದ್ರೆಯನ್ನು ಹೊಂದಲು ಏನು ಮಾಡಬೇಕು ಎಂಬ ಕುತೂಹಲ ಸಹಜ. ಅದಕ್ಕಾಗಿ ಕೆಲವು ಉಪಾಯಗಳೂ ಇವೆ.
ಮಲಗಿದ ಮೇಲೆ ಒಳ್ಳೆಯ ನಿದ್ರೆ ಬಂದರೆ ಬೆಳಗ್ಗೆ ಎದ್ದ ಮೇಲೆ ಒಳ್ಳೆಯ ಉಲ್ಲಾಸ-ಉತ್ಸಾಹವೂ ಇರುತ್ತದೆ. ಅಂಥ ಒಳ್ಳೆಯ ನಿದ್ರೆಯನ್ನು ಮಲಗುವ ಮುನ್ನ ಹೇಗಿರುತ್ತೇವೆ ಎಂಬ ಸಂಗತಿಗಳೂ ನಿರ್ಧರಿಸುತ್ತವೆ ಎಂಬುದು ಕೂಡ ಅಷ್ಟೇ ಸತ್ಯ. ಹೀಗಾಗಿ ಮಲಗುವ ಮುನ್ನ ಏನೇನು ಎಚ್ಚರಿಕೆ ವಹಿಸಬೇಕು ಎಂಬ ಕುರಿತು ಕೆಲವು ಸಂಗತಿಗಳು ಇಲ್ಲಿವೆ.
- ನಿದ್ರೆಯ ದೊಡ್ಡ ಶತ್ರು ಎಂದರೆ ಮೊಬೈಲ್ಫೋನ್. ದಿನವಿಡೀ ಬಿಟ್ಟೂ ಬಿಡದಂತೆ ಜೊತೆಗಿರುವ ಮೊಬೈಲ್ಫೋನನ್ನು ಹಲವರು ಮಲಗುವಾಗಲೂ ಜೊತೆಗಿರಿಸಿಕೊಳ್ಳುತ್ತಾರೆ. ಅದನ್ನು ಮೈಚೆಲ್ಲುವ ಮುನ್ನವೇ ಬದಿಗಿರಿಸಿ.
ಮೊಬೈಲ್ಫೋನ್, ಲ್ಯಾಪ್ಟಾಪ್, ಡೆಸ್ಕ್ಟಾಪ್ ಮುಂತಾದ ಗ್ಯಾಜೆಟ್ಗಳನ್ನು ಮಲಗಲಿಕ್ಕೆ ಕನಿಷ್ಠ ಒಂದು ಗಂಟೆಯ ಮುಂಚೆಯೇ ದೂರ ಇರಿಸಿ. ಏಕೆಂದರೆ ಇದರಿಂದ ಹೊರಹೊಮ್ಮುವ ನೀಲಿಬೆಳಕು ನಿದ್ರೆಗೆ ಪೂರಕವಾದ ಮೆಲಟೊನಿನ್ ಹಾರ್ಮೋನ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ವಿಡಿಯೋ ಗೇಮ್ಸ್ನಿಂದಲೂ ದೂರವಿರಿ.
- ಮಲಗಲಿಕ್ಕೆ ಇನ್ನೇನು ಕೆಲವೇ ಗಂಟೆಗಳಿವೆ ಎನ್ನುವಾಗ ಅತಿಯಾದ ಶ್ರಮ ಇರುವ ಚಟುವಟಿಕೆಗಳನ್ನು ಮಾಡಬಾರದು. ಕಚೇರಿಗೆ ಸಂಬಂಧಿತ ಒತ್ತಡದ ಕೆಲಸ, ಅತಿಯಾದ ವ್ಯಾಯಾಮಗಳನ್ನು ಮಾಡಬೇಡಿ. ಇವು ಮನಸು ಶಾಂತವಾಗಲು ತಡೆಯೊಡ್ಡುತ್ತವೆ.
- ಮಲಗಲುವ ಮುನ್ನ ಕಾಫಿ-ಟೀ ಮುಂತಾದ ಪೇಯಗಳನ್ನು ಸೇವಿಸಬಾರದು. ಮಲಗಲಿಕ್ಕೆ ಕೆಲವು ಗಂಟೆಗಳು ಇದೆ ಎನ್ನುವಾಗ ಕಾಫಿ-ಟೀ, ಎನರ್ಜಿ ಡ್ರಿಂಕ್ ಸೇವಿಸಬಾರದು. ಧೂಮಪಾನದ ಅಭ್ಯಾಸವಿದ್ದರೆ ಅದನ್ನು ಸಂಜೆಯ ನಂತರ ಮಾಡಬಾರದು.
- ಬೆಳಗ್ಗೆ ಹಾಗೂ ಮಧ್ಯಾಹ್ನ ಚೆನ್ನಾಗಿ ತಿಂಡಿ-ಊಟ ಸೇವಿಸಿ. ಆದರೆ ರಾತ್ರಿಯ ಊಟವಂತೂ ಲೈಟಾಗಿರಲಿ. ಭರ್ಜರಿ ಭೋಜನ ರಾತ್ರಿಯ ವೇಳೆ ಒಳ್ಳೆಯದಲ್ಲ. ಇದು ಜೀರ್ಣ ವ್ಯವಸ್ಥೆ ಮೇಲೆ ಭಾರಿ ಒತ್ತಡ ಉಂಟು ಮಾಡುತ್ತದೆ ಹಾಗೂ ಒಳ್ಳೆಯ ನಿದ್ರೆಗೆ ಅಡ್ಡಿ ಆಗುತ್ತದೆ.
- ರಾತ್ರಿ ಸ್ವಲ್ಪ ಮದ್ಯ ಸೇವನೆ ಮಾಡುವುದು ಒಳ್ಳೆಯ ನಿದ್ರೆಗೆ ಪೂರಕ ಎಂದು ಹೇಳಲಾಗುತ್ತದೆ. ಅದು ಆರಂಭದಲ್ಲಿ ನಿಜ ಅನಿಸಿದರೂ ಕೊನೆಕೊನೆಗೆ ಅದು ನಿದ್ರೆಯನ್ನು ಬಾಧಿಸುತ್ತದೆ, ನಿದ್ರೆಯ ಗುಣಮಟ್ಟವನ್ನು ತಗ್ಗಿಸುತ್ತದೆ. ಅದಾಗ್ಯೂ ಅಭ್ಯಾಸವಿದ್ದವರು ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಒಳಿತು.
- ಮಲಗುವ ಮುನ್ನ ಸ್ವಲ್ಪ ನೀರು ಕುಡಿಯುವ ಅಭ್ಯಾಸ ಹಲವರಿಗೆ ಇರುತ್ತದೆ, ಅದೇನೂ ಕೆಟ್ಟದ್ದಲ್ಲ. ಆದರೆ ಮಲಗುವ ಮೊದಲು ನೀರು-ಜ್ಯೂಸ್ ಮುಂತಾದ ದ್ರವಪದಾರ್ಥಗಳನ್ನು ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ. ಇದು ಮೂತ್ರವಿಸರ್ಜನೆಗಾಗಿ ಮಧ್ಯೆ ಎಚ್ಚರಗೊಳ್ಳುವಂತೆ ಮಾಡುವುದಲ್ಲದೆ ನಂತರ ಮತ್ತೆ ನಿದ್ರೆ ಬರುವಲ್ಲಿ ತೊಂದರೆ ಎದುರಿಸುವಂತೆ ಮಾಡುತ್ತದೆ.
- ಒತ್ತಡ ಉಂಟು ಮಾಡುವಂಥ ಇಲ್ಲವೇ ಅತಿಯಾದ ಭಾವಸಂಘರ್ಷ ಮೂಡಿಸುವಂಥ ಅನಗತ್ಯ ಚರ್ಚೆ ಇಲ್ಲವೇ ವಾದಗಳಲ್ಲಿ ಮಲಗುವ ಮುನ್ನ ಭಾಗಿಯಾಗಬೇಡಿ. ಇದು ಮನಸಿನ ಪ್ರಶಾಂತತೆಯನ್ನು ಹಾಳುಗೆಡವಿ ನಿದ್ರೆಗೂ ತೊಂದರೆ ಮಾಡುತ್ತದೆ.