ಯುಗಪುರುಷ ಸ್ವಾಮೀ ಚಿನ್ಮಯಾನಂದ: ಇಂದು ಜನ್ಮದಿನ

Swamy Chinmayananda 7 MAY 20
Published on

ಸ್ವಾಮಿ ಕೃತಾತ್ಮಾನಂದ ಚಿನ್ಮಯ ಮಿಷನ್, ಹುಬ್ಬಳ್ಳಿ

ವಿಶ್ವವಿಖ್ಯಾತವಾದುದು ನಮ್ಮ ಸನಾತನಧರ್ಮ. ಉಪನಿಷತ್ತುಗಳು, ಭಗವದ್ಗೀತೆ ಹಾಗೂ ಬ್ರಹ್ಮಸೂತ್ರಗಳೆಂಬ ಪ್ರಸ್ಥಾನತ್ರಯಗಳು ನಮ್ಮ ಸನಾತನಧರ್ಮದ ಅಡಿಗಲ್ಲುಗಳು. ಈ ಆರ್ಷೆಯವಿದ್ಯೆ ರಾಜರ್ಷಿಗಳ ಪರಂಪರೆಯಲ್ಲಿ ನಮ್ಮ ದೇಶದಲ್ಲಿ ಹರಿದುಬಂದಿತ್ತು. ಒಂದು ಕಾಲದಲ್ಲಿ ಇಡೀ ದೇಶವೇ ಈ ಬ್ರಹ್ಮವಿದ್ಯೆಯಲ್ಲಿ ತುಂಬಿ ಮೆರೆಯುತ್ತಿತ್ತಂತೆ. ಆದುದರಿಂದ ನಮ್ಮ ದೇಶಕ್ಕೆ ಭಾರತವೆಂಬ ಹೆಸರು ಅನ್ವರ್ಥನಾಮವಾಗಿ ಬಂದಿದೆ ಎಂಬ ಪ್ರತೀತಿಯೂ ಇದೆ. ಹೀಗೆ ಭಾರತೀಯ ಸಂಸ್ಕೃತಿ ಅತ್ಯಂತ ಪುರಾತನವಾದುದು ಹಾಗೂ ಸನಾತನವಾದುದು.

ಕಾಲಾನುಗತಿಯಲ್ಲಿ ಯಾವುದೇ ಧರ್ಮವು ಶಿಥಿಲಗೊಳ್ಳುತ್ತದೆ. ನಮ್ಮ ಸನಾತನಧರ್ಮದ ವೈಶಿಷ್ಟ್ಯೆಂದರೆ ಅದು ಶಿಥಿಲಗೊಳ್ಳುತ್ತ ಬಂದಂತೆ ಯಾರೋ ಒಬ್ಬ ಮಹಾತ್ಮನು ಯುಗಪುರುಷನಂತೆ ಆವಿರ್ಭವಿಸಿ ಬಂದು ತನ್ನ ಇಡೀ ಜೀವನವನ್ನು ಧರ್ಮದ ಪುನರುತ್ಥಾನಕ್ಕಾಗಿ ಮೀಸಲಿಟ್ಟು ದೇಶಾದ್ಯಂತ ಧರ್ಮಜಾಗೃತಿ ಮಾಡಿ ಹೋಗುತ್ತಾನೆ. ಶ್ರೀ ವೇದವ್ಯಾಸ ಮಹರ್ಷಿಗಳಿಂದ ಆರಂಭಿಸಿ ಇಂದಿನ ತನಕದ ಮಹಿಮಾನ್ವಿತರಾದ ಮಹಾತ್ಮರೆಲ್ಲ ಈ ರೀತಿ ಯುಗಪುರುಷರು.

ಪೂಜ್ಯ ಸ್ವಾಮೀ ಚಿನ್ಮಯಾನಂದರು ಇಂತಹ ಯುಗಪುರುಷರಲ್ಲೊಬ್ಬರು. ಆಚಾರ್ಯತ್ರಯರ ನಂತರ ಹಾಗೂ ಶ್ರೀ ರಾಮಕೃಷ್ಣ ಪರಮಹಂಸ ಮತ್ತು ಸ್ವಾಮೀ ವಿವೇಕಾನಂದರ ನಂತರ ಇಡೀ ದೇಶಾದ್ಯಂತ - ಅಷ್ಟೇ ಏಕೆ - ವಿಶ್ವಾದ್ಯಂತ ಗೀತೋಪನಿಷತ್ತುಗಳ ಅವಿಚ್ಛಿನ್ನ ಧಾರೆಯನ್ನು ಹರಿಸುತ್ತ ಸನಾತನಧರ್ಮ ಧ್ವಜವನ್ನು ಎತ್ತಿ ಹಿಡಿದಿರುವ ಕೀರ್ತಿ ಇವರದು.

1916ನೇ ಇಸವಿ ಶ್ರೀರಾಮನವಮಿಯಂದು ಕೇರಳದ ತ್ರಿಚೂರಿನಲ್ಲಿ ಆವಿರ್ಭವಿಸಿದ ಈ ‘ಕಿಡಿ’ (ಬಾಲಕೃಷ್ಣ ಮೆನನ್) ಹಿಮಾಲಯ ಮಹಾರಣ್ಯ ಶ್ರೇಣಿಯಲ್ಲಿ ಉದ್ದೀಪನಗೊಂಡು ಇಂದಿಗೆ ಇಡೀ ರಾಷ್ಟ್ರಕ್ಕೆ ದಾರಿದೀಪವಾಗಿದೆ - ಭೂಮಾಕಾರವಾಗಿ ಪ್ರಜ್ವಲಿಸುತ್ತಿದೆ. ಇವರ ವಿದ್ಯಾಗುರು ಶ್ರೀ ತಪೋವನ ಮಹಾರಾಜರು ಘನಗಂಭೀರವಾದ ಹಿಮಾಚಲವಾದರೆ ಇವರು ‘ಹರ ಹರ ಹರ’ ಎಂದು ಭೋರ್ಗರೆಯುತ್ತ ನಿರರ್ಗಳವಾಗಿ ಹರಿಯುತ್ತಿರುವ ಪುಣ್ಯನದಿ ಗಂಗೆ. ಗುರುಗಳು ತಪೋಜೀವಿಯಾಗಿ ಬಾಳಿದ್ದರೆ ಇವರು ಕರ್ಮಯೋಗಿಯಾಗಿ ನಿರಂತರ ನವೀನವಾದ ಉತ್ಸಾಹ, ಉಲ್ಲಾಸದಿಂದ ಇಡೀ ವಿಶ್ವಾದ್ಯಂತ ಜ್ಞಾನಗಂಗೆ ಹರಿಸುತ್ತಿದ್ದರು.

ಸನಾತನ ಧರ್ಮದ ಪುನರುತ್ಥಾನವೇ ಅವರ ಜೀವನದ ಮುಖ್ಯ ಧ್ಯೇಯ. ದೇಶಾದ್ಯಂತದ ಜನತೆಗೆ ಭಾರತೀಯ ದಿವ್ಯಸಂಸ್ಕೃತಿಯ ಪರಿಚಯವನ್ನು ಮಾಡಿಸುವುದೇ ಇವರ ಜೀವನದ ಉಸಿರು. ಧರ್ಮಕ್ಕೂ ನಿತ್ಯಜೀವನಕ್ಕೂ ಏನೇ ಸಂಬಂಧವಿಲ್ಲ ಎಂದು ನಂಬಿರುವ ನಮ್ಮ ಜನರ ಮೌಢ್ಯತೆಯನ್ನು ದೂರೀಕರಿಸಿ ಗೀತೋಪನಿಷತ್ತುಗಳಲ್ಲಿ ಅಡಗಿರುವ ತತ್ತ್ವಗಳು ನಿತ್ಯ ಜೀವನಕ್ಕೆ ಪ್ರತಿಯೊಬ್ಬ ವ್ಯಕ್ತಿಗೂ ಅತ್ಯಂತ ಉಪಯುಕ್ತವಾದುವು ಎಂಬುದನ್ನು ಸ್ಪುಟಗೊಳಿಸಿದ ಮಹಾತ್ಮರಿವರು. ದೇಶದ ಜನತೆಯಲ್ಲಿ ಧಾರ್ವಿುಕ ಪ್ರವೃತ್ತಿ ಪರಸ್ಪರ ಪ್ರೇಮಭಾವ, ರಾಷ್ಟ್ರ ಐಕ್ಯತೆ, ಕಾರ್ಯೋತ್ಸಾಹ ಮತ್ತು ಧೈರ್ಯ ಸ್ಥೈರ್ಯವನ್ನು ತುಂಬಿ ಅವರನ್ನು ದೀರ್ಘ ನಿದ್ದೆಯಿಂದ ಬಡಿದೆಬ್ಬಿಸಿದ್ದಾರೆ. ಕರ್ಮ, ಜ್ಞಾನ, ಭಕ್ತಿ ಮತ್ತು ಸೇವಾಪರತೆಯನ್ನು ಉಚ್ಚಕಂಠದಿಂದ ಸಾರುವ ಅವರ ಅಮೋಘವಾಣಿ ಜನತೆಯನ್ನು ಹೊಡೆದೆಬ್ಬಿಸುತ್ತಿದೆ. ಅವರ ದಿವ್ಯವಾಣಿ ಇಡೀ ಜಗತ್ತನ್ನು ಜಾಗೃತಗೊಳಿಸಿದೆ. ವಿಶ್ವಾದ್ಯಂತದ ಜನರೆಲ್ಲರನ್ನು ಹಿಂದೂಧರ್ಮದ ಕಡೆಗೆ ಆಕರ್ಷಿಸಿದೆ.

ಚಿನ್ಮಯರು ಮಹಾ ಐಂದ್ರಜಾಲಿಕನಂತೆ ಮೃಣ್ಮಯರೂಪಿಗಳಾದ ಮಿಲಿಯಗಟ್ಟಲೆ ಜನರನ್ನು ಗೀತಾಮೃತಸೇಚನದಿಂದ ತನ್ಮಯಗೊಳಿಸಿ ಚಿನ್ಮಯತೆಯ ಕಡೆಗೆ ಒಯ್ಯುತ್ತಿದ್ದಾರೆ. ಚಿನ್ಮಯರ ವಾಕ್ಝರಿಯ ಶಕ್ತಿಯೇ ಬೇರೆ, ಅದರ ಭೀಮಬಲವೇ ಬೇರೆ. ಅವರ ಗೀತಾಜ್ಞಾನಯಜ್ಞದಲ್ಲಿ ಶ್ರದ್ಧೆಯಿಂದ ಪಾಲುಗೊಂಡ ಶ್ರೋತೃಗಳ ಅನುಭವ ಅಲೌಕಿಕವಾದುದು, ಅದ್ಭುತವಾದುದು. ಶ್ರೋತೃಗಳನ್ನು ಮೋಹಿಸುವ ಅಪಾರ ಶಕ್ತಿ ಅವರಲ್ಲಿದೆ. ಅವರ ದಿವ್ಯವಾಣಿ ಎಲ್ಲರನ್ನು ತಲ್ಲೀನಗೊಳಿಸುತ್ತದೆ. ಒದ್ದೆ ಮುದ್ದೆಯನ್ನಾಗಿ ಮಾಡಿ ಎತ್ತಿ ಬಿಸಾಡುತ್ತದೆ, ಉಸಿರು ಕಟ್ಟಿಸುತ್ತದೆ. ವಿದ್ಯುತ್ ಝುರಿಯ ರಭಸಕ್ಕೆ ಶ್ರೋತೃಗಳ ಮನಸ್ಸಿನ ಆಳದಲ್ಲಿರುವ ಚಿಂತೆ, ದುಃಖ, ಅಶಾಂತಿ ಮತ್ತು ತಳಮಳಗಳೆಲ್ಲ ಕೊಚ್ಚಿಕೊಂಡು ಹೋಗುತ್ತವೆ. ಅವರ ಜ್ಞಾನಗಂಗಾಧಾರೆಯಲ್ಲಿ ಜನರು ಶ್ರದ್ಧೆಯಿಂದ ಮಿಂದು ಪುನೀತರಾಗಿ ಚೇತನೋಜ್ವಲರಾಗಿ ಜ್ಞಾನಪೀಯೂಷಪಾನದಿಂದ ಅಪಾರ ಶಕ್ತಿಯನ್ನು ಪಡೆದು ಹೊರಬರುತ್ತಾರೆ.

ಲೋಕಸಂಗ್ರಹದಲ್ಲೆ ತಮ್ಮ ಜೀವನದ ಸಾರ್ಥಕತೆಯನ್ನು ಕಂಡುಕೊಂಡಿರುವ ಧೀರೋದಾತ್ತ ವ್ಯಕ್ತಿತ್ವ ಇವರದು. ಈ ಕಾರ್ಯಸಾಧನೆಗಾಗಿ ‘ಚಿನ್ಮಯ ಮಿಷನ್’ ಎಂಬ ಸಂಸ್ಥೆಯನ್ನು ಆರಂಭಿಸಿ ಈ ಮೂಲಕ ಮಾನವ ಜನಾಂಗಕ್ಕೆ ಬಹುಮುಖ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಯಾವುದೇ ಸಂಸ್ಥೆಯನ್ನು ಆರಂಭಿಸುವ ಕೆಲಸ ಎಷ್ಟು ಕಷ್ಟವೋ ಅದಕ್ಕಿಂತ ಅದನ್ನು ವ್ಯವಸ್ಥಿತವಾದ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದಾರೆ. ಸಂಸ್ಥೆಯ ಕಾರ್ಯ ಚಟುವಟಿಕೆಗಳಲ್ಲಿ ಹಲವಾರು ಸಮಸ್ಯೆಗಳು ಉದ್ಭವಿಸುತ್ತವೆ. ಒಂದು ಚಿಕ್ಕ ಮನೆಯನ್ನು ಸರಿಯಾಗಿ ನಡೆಸಿಕೊಂಡು ಹೋಗಲು ಅದೆಷ್ಟು ಕಷ್ಟವಿದೆ? ಇಡೀ ವಿಶ್ವವೇ ಇವರ ಮನೆ. ವಿಶ್ವಾದ್ಯಂತ ಇಂದಿಗೆ ಮಿಷನ್ನಿನ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೂ ಇವೆಲ್ಲವುಗಳ ಮಧ್ಯೆ ನಿರ್ಲಿಪ್ತನಾಗಿರುವ ಸ್ಥಿತಪ್ರಜ್ಞರು ಅವರು.

ಹೊರಗೆ ಲೋಕಾಸಕ್ತಿ ಒಳಗೆ ಸಕಲ ವಿರಕ್ತಿ

ಹೊರಗೆ ಕಾರ್ಯಧ್ಯಾನ ಒಳಗುದಾಸೀನ

ಹೊರಗೆ ಸಂಸ್ಕೃತಿಭಾರ ಒಳಗದರ ತಾತ್ಸಾರ

ವರಯೋಗ ಮಾರ್ಗವಿದು - ಮಂಕುತಿಮ್ಮ ||

ಇದು ಡಿ.ವಿ.ಜಿ.ಯವರು ಚಿತ್ರಿಸಿರುವ ಸ್ಥಿತಪ್ರಜ್ಞನ ಚಿತ್ರಣ. ಮೇಲಿನ ಶ್ಲೋಕ ಪೂಜ್ಯ ಸ್ವಾಮೀಜಿಯವರಿಗೆ ಸಂಪೂರ್ಣವಾಗಿ ಸರಿ ಹೋಲುತ್ತದೆ. ಪ್ರತಿಯೊಂದು ಕ್ಷಣವೂ ಅವರು ಕ್ರಿಯಾತ್ಮಕವಾಗಿ ಒಂದಲ್ಲ ಒಂದು ರೀತಿಯ ಕೆಲಸದಲ್ಲಿ ತೊಡಗಿರುತ್ತಾರೆ. ಆದರೆ ಯಾವುದೇ ರೀತಿಯ ಕರ್ಮಲೇಪವಿಲ್ಲ. ಹೊರಗಿಂದ ನೋಡುವವರಿಗೆ ಅವರು ಸಾಕಷ್ಟು ಸಂಸಾರವನ್ನು ಕಟ್ಟಿಕೊಂಡ ಹಾಗೆ ಕಾಣುತ್ತದೆ. ಆದರೆ ಯಾವುದೇ ರೀತಿಯ ಸಂಸಾರದ ಭಾರ ಅವರ ಮನಸ್ಸಿನಲ್ಲಿ ಲವಲೇಶವೂ ಇಲ್ಲ. ಅವರು ಎಲ್ಲ ಸಂದರ್ಭದಲ್ಲೂ ‘ನಿತ್ಯ ಸಂನ್ಯಾಸಿ’! ಇದರ ಅರ್ಥ, ಏನೇನೂ ಕೆಲಸ ಮಾಡದೇ ಸುಮ್ಮನಿರುತ್ತಾರೆಂದಲ್ಲ, ಹೊರಗೆ ಕಾರ್ಯಧ್ಯಾನ ಅರ್ಥಾತ್ ಸಂಸ್ಥೆಯ ಪ್ರತಿಯೊಂದು ಚಟುವಟಿಕೆಯ ಬಗ್ಗೆಯೂ ಕೇಳುತ್ತಿರುತ್ತಾರೆ. ಆಸಕ್ತಿ ವಹಿಸಿ ಮಾರ್ಗದರ್ಶನ ನೀಡುತ್ತಿರುತ್ತಾರೆ. ಕಾರ್ಯಕರ್ತರಿಗೆ ವ್ಯವಸ್ಥಿತವಾದ ರೀತಿಯಲ್ಲಿ ಅವರು ಕೆಲಸ ಮಾಡದಿದ್ದರೆ ಆವಾಗ ದೂರ್ವಾಸಮಹರ್ಷಿಯ ಅಪರಾವತಾರವೇ ಆಗುವುದೂ ಉಂಟು. ಆದರೆ ಯಾವುದೇ ಘಟನೆಯನ್ನು ಮನಸ್ಸಿಗೆ ಹಚ್ಚಿಕೊಂಡು ಅದರ ಬಗ್ಗೆ ಕೊರಗುತ್ತ ಕೂರುವ ದೌರ್ಬಲ್ಯ ಅವರಲ್ಲಿಲ್ಲ. ಹೊರಗಿನ ಕೆಲಸಗಳಲ್ಲಿ ಕಾರ್ಯಾಸಕ್ತಿ, ಕಾರ್ಯತತ್ಪರತೆ, ಮೇಲ್ವಿಚಾರಣೆ, ಮಾರ್ಗದರ್ಶನ ಮತ್ತು ಕಾರ್ಯಸಿದ್ಧಿಗೆ ಬೇಕಾದ ಹಠ ಇವೆಲ್ಲ ಇದ್ದರೂ ಅಂತಃಕರಣದಲ್ಲಿ ಸದಾ ಸರ್ವದಾ ಉದಾಸೀನ.

ಭಗವದ್ಗೀತೆಯಲ್ಲಿ ಎರಡು, ಐದು, ಹನ್ನೆರಡು ಮತ್ತು ಹದಿನಾಲ್ಕನೇ ಅಧ್ಯಾಯಗಳಲ್ಲಿ ವಿವರಿಸಿರುವ ಜೀವನ್ಮುಕ್ತನ ಲಕ್ಷಣಗಳೆಲ್ಲ ಇವರಲ್ಲಿ ಎದ್ದು ಕಾಣುತ್ತವೆ. ಶರೀರದಲ್ಲಿ, ಮೊಣಕಾಲು ನೋವು, ಮಧುಮೇಹ ಬಾಧೆ - ಎರಡು ಸಾರಿ ಹೃದಯಾಘಾತದಿಂದ ತತ್ತರಿಸಿದ ಎದೆಗುಂಡಿಗೆ - ಇವೇ ಮೊದಲಾದ ನಾನಾ ರೀತಿಯ ವ್ಯಾಧಿಗಳಿದ್ದರೂ ಅವುಗಳನ್ನು ಲೆಕ್ಕಿಸದೆ ಪ್ರತಿಯೊಂದು ನಿಮಿಷವೂ ಸಮಾಜದ ಏಳಿಗೆಗಾಗಿ, ರಾಷ್ಟ್ರದ ಉನ್ನತಿಗಾಗಿ ಜೀವನ ಸವೆಸಿದ್ದಾರೆ.

ದೇಶದಲ್ಲಿ ತನ್ನ ನಂತರವೂ ಧರ್ಮಪ್ರಚಾರದ ಕೆಲಸ ನಿತ್ಯನಿರಂತರವಾಗಿ ನಡೆಯಬೇಕು ಎಂಬ ದೂರದೃಷ್ಟಿಯನ್ನಿಟ್ಟುಕೊಂಡು ದೇಶಾದ್ಯಂತ ಸಾಂದೀಪನಿ ಸಾಧನಾಲಯ ಎಂಬ ವೇದಾಂತ ಮಹಾವಿದ್ಯಾಲಯಗಳನ್ನು ಸ್ಥಾಪಿಸಿ ಯುವ ಬ್ರಹ್ಮಚಾರಿಗಳಿಗೆ ಶಾಸ್ತ್ರೀಯವಾಗಿ ಪ್ರಸ್ಥಾನತ್ರಯಗಳನ್ನು ಕಲಿಸುವ ಮಹತ್ತರ ಕೆಲಸವನ್ನು ಮಾಡಿದ್ದಾರೆ. ಈ ಸಾಧನಾಲಯಗಳಲ್ಲಿ ಮೂರು ವರ್ಷ ತರಬೇತಿ ಪಡೆದ ನೂರಾರು ಬ್ರಹ್ಮಚಾರಿಗಳು ದೇಶಾದ್ಯಂತ ಧರ್ಮಪ್ರಚಾರ ಕಾರ್ಯವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಹೀಗೆ ದೇಶದ ಪ್ರತಿಯೊಂದು ಪ್ರಜೆಯ ನರ ಮಾಂಸಗಳಲ್ಲಿ ಭಾರತೀಯ ಸಂಸ್ಕೃತಿ ತುಂಬಿ ಹರಿಯುವಂತೆ ಮಾಡಿದ್ದಾರೆ. ನಮ್ಮ ದೇಶದಲ್ಲಿ ಶ್ರುತಿಮಾತೆಯು ಮತ್ತೆ ಪುನರುಜ್ಜೀವನಗೊಂಡು ನಕ್ಕು ನಲಿಯುವಂತೆ ಮಾಡಿದ್ದಾರೆ. ಮನೆಯಲ್ಲೂ ಗೀತಾ ಮಾತೆಯು ಮತ್ತೆ ಪೂಜಿಸಲ್ಪಡುತ್ತಿದ್ದಾಳೆ. ಋಷಿಗಳ ಭವ್ಯ ಪರಂಪರೆಯು ಇಂದಿಗೆ ಪುನಶ್ಚೇತನಗೊಂಡಿದೆ. ಇಂತಹ ಯುಗಪುರುಷನನ್ನು ಪಡೆದ ಭಾರತಮಾತೆ ಕೃತಾರ್ಥತೆಯಿಂದ ಉಸಿರಾಡುತ್ತಿದ್ದಾಳೆ. ಇಂತಹ ಯುಗಪುರುಷರ ದರ್ಶನ ಪಡೆಯುವ ಸೌಭಾಗ್ಯ ಸಿಕ್ಕಿರುವ ನಾವೇ ಧನ್ಯರು. ಅವರ ಪುಣ್ಯಚರಣಗಳಿಗೆ ಭಕ್ತಿಯ ಅನಂತ ಪ್ರಣಾಮಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net