ಹಿಜಾಬ್​ಗೆ ಸುಪ್ರೀಂ ಭಿನ್ನ ನಿಲುವು; ತ್ರಿಸದಸ್ಯ ಪೀಠಕ್ಕೆ ಪ್ರಕರಣ, ಅಂತಿಮ ತೀರ್ಪಿನವರೆಗೂ ರಾಜ್ಯದ ನಿಷೇಧ ಯಥಾಸ್ಥಿತಿ

SupremeCourt
Published on

ರಾಘವ ಶರ್ಮ ನಿಡ್ಲೆ, ನವದೆಹಲಿ

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿರುವ ಕರ್ನಾಟಕ ಸರ್ಕಾರದ ಆದೇಶ ಹಾಗೂ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಗಳ ಕುರಿತು ಸುಪ್ರೀಂಕೋರ್ಟ್ ಭಿನ್ನ ನಿಲುವು ತಳೆದಿದೆ. ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳ ಮಧ್ಯೆಯೇ ಭಿನ್ನಾಭಿಪ್ರಾಯ ಮೂಡಿದ್ದು, ಕಳೆದೊಂದು ವರ್ಷದಿಂದ ಭಾರಿ ವಿವಾದಕ್ಕೆ ಗ್ರಾಸವಾಗಿರುವ ಹಿಜಾಬ್ ವಿವಾದ ಸದ್ಯದ ಮಟ್ಟಿಗೆ ರ್ತಾಕ ಅಂತ್ಯ ಕಾಣುವಲ್ಲಿ ವಿಫಲವಾಗಿದೆ.

ಹೀಗಾಗಿ ರಾಜ್ಯದ ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮುಂದುವರಿಯಲಿದ್ದು, ತ್ರಿಸದಸ್ಯ ಪೀಠದ ತೀರ್ಪಿನವರೆಗೆ ರಾಜ್ಯ ಹೈಕೋರ್ಟ್ ತೀರ್ಪು ಕೂಡ ಜಾರಿಯಲ್ಲಿರುತ್ತದೆ.

ಹಿರಿಯ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಹಿಜಾಬ್ ನಿಷೇಧಿಸುವ ರಾಜ್ಯ ಸರ್ಕಾರದ ತೀರ್ಮಾನ ಬೆಂಬಲಿಸಿ ತೀರ್ಪು ನೀಡಿದರೆ, ಮತ್ತೋರ್ವ ನ್ಯಾಯಮೂರ್ತಿ ಸುಧಾಂಶು ಧುಲಿಯಾ, ಹೈಕೋರ್ಟ್ ತೀರ್ಪನ್ನು ವಜಾಗೊಳಿಸಿ, ಮುಸ್ಲಿಂ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಗಮನದಲ್ಲಿಟ್ಟುಕೊಂಡು ಹಿಜಾಬ್ ಧಾರಣೆ ಅವರವರ ಆಯ್ಕೆಗೆ ಬಿಟ್ಟ ವಿಷಯ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರತ್ಯೇಕ ತೀರ್ಪಗಳ ಹಿನ್ನೆಲೆಯಲ್ಲಿ ಹಿಜಾಬ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ನ್ಯಾಯಪೀಠದ ಮುಂದಿರಿಸಲಾಗಿದ್ದು, ಸೂಕ್ತ ನ್ಯಾಯಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಬಹುದು ಎಂದು ಇಬ್ಬರೂ ಶಿಫಾರಸು ಮಾಡಿದ್ದಾರೆ.

ಸಿಜೆಐ ಪೀಠಕ್ಕೆ ವರ್ಗಾವಣೆ: ಹಿಜಾಬ್ ಪ್ರಕರಣವನ್ನು ಸೂಕ್ತ ನ್ಯಾಯಪೀಠಕ್ಕೆ ವರ್ಗಾಯಿಸಿ ಎಂದು ನ್ಯಾ.ಗುಪ್ತಾ ಮತ್ತು ನ್ಯಾ.ಧುಲಿಯಾ ಸಿಜೆಐಗೆ ಶಿಫಾರಸು ಮಾಡಿರುವುದರಿಂದ ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ತ್ರಿಸದಸ್ಯ ಪೀಠಕ್ಕೆ ಪ್ರಕರಣ ವರ್ಗಾವಣೆಯಾಗಲಿದೆ. ತ್ರಿಸದಸ್ಯ ಪೀಠವನ್ನು ಸಿಜೆಐ ರಚನೆ ಮಾಡಿದ ಬಳಿಕ ವಿಚಾರಣೆ ಮರು ಆರಂಭವಾಗಲಿದೆ. ಹಿಜಾಬ್ ವಿಚಾರದಲ್ಲಿ ಸಾಂವಿಧಾನಿಕ ಪ್ರಶ್ನೆಗಳನ್ನು ಮೊದಲು ನಿರ್ಧರಿಸಬೇಕಿದೆ ಎಂದು ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಲ್ಲಿ, ನಂತರ ಈ ಪ್ರಕರಣ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆಯಾಗಬಹುದಷ್ಟೇ. ಹಿಜಾಬ್ ಧಾರಣೆ ಇಸ್ಲಾಂ ಧರ್ಮದ ಅಗತ್ಯ ಆಚರಣೆ ಎಂಬ ಬಗ್ಗೆ ಸಾಂವಿಧಾನಿಕ ಖಚಿತತೆ ಇಲ್ಲ. ಏಕೆಂದರೆ, ದೇಶದಲ್ಲಿ ಎಷ್ಟೋ ಮಂದಿ ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದನ್ನು ವಿರೋಧಿಸುತ್ತಾರೆ ಮತ್ತು ಅದನ್ನು ಧರ್ವಚರಣೆಯ ಭಾಗ ಎಂದು ಪರಿಗಣಿಸಿಲ್ಲ. ಹಿಜಾಬ್ ಅತ್ಯಗತ್ಯ ಆಚರಣೆ ಎಂದಾದಲ್ಲಿ ಧರ್ಮದ ಪ್ರಕಾರ ಎಲ್ಲ ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯವಾದೀತು. ಹೀಗಾಗಿ, ಶಾಲೆಗಳಲ್ಲಿ ಹಿಜಾಬ್ ಬೇಕೇ ಬೇಡವೇ ಎಂಬ ಸೀಮಿತ ವಿಷಯದ ಬಗ್ಗೆ ತ್ರಿಸದಸ್ಯ ಪೀಠ ವಿಚಾರಣೆ ನಡೆಸುವುದೋ ಅಥವಾ ಅದರಾಚೆಗಿನ ಅಂಶಗಳನ್ನು ತೀರ್ವನಿಸಲು ಬಯಸುವುದೋ ಎಂಬುದನ್ನು ಕಾದು ನೋಡಬೇಕು.

ಸಾಂವಿಧಾನಿಕ ಪೀಠ ಅನಗತ್ಯ

ನ್ಯಾ.ಹೇಮಂತ್ ಗುಪ್ತಾ ಅವರು ಈ ಪ್ರಕರಣದಲ್ಲಿ ಸಾಂವಿಧಾನಿಕ ಅಂಶಗಳ ವಿಶ್ಲೇಷಣೆಯ ಅಗತ್ಯವಿಲ್ಲ. ಹೀಗಾಗಿ ಸಾಂವಿಧಾನಿಕ ಪೀಠಕ್ಕೆ ಕಳುಹಿಸುವ ಪ್ರಮೇಯವೇ ಬರುವುದಿಲ್ಲ ಎಂದು ಹೇಳಿದ್ದಾರೆ.

ಹಿಜಾಬ್ ಧರಿಸುವ ಹಕ್ಕು ಶಾಲೆಯ ಗೇಟ್​ನಲ್ಲಿ ಕೊನೆಗೊಳ್ಳುವುದಿಲ್ಲ. ವಿವಿಧ ಧರ್ಮಗಳು, ಭಾಷೆಗಳ ಬಗ್ಗೆ ಸಹಾನುಭೂತಿ ಬೆಳೆಸಿಕೊಳ್ಳುವ ಸಮಯ ಬಂದಿದೆ. ನಮ್ಮ ಮುಂದಿರುವ ಎಲ್ಲ ಅರ್ಜಿದಾರರು ಹಿಜಾಬ್ ಧರಿಸುವುದನ್ನೇ ಬಯಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇಷ್ಟನ್ನೂ ಕೇಳಬಾರದೇ?

| ನ್ಯಾ.ಸುಧಾಂಶು ಧುಲಿಯಾ ನ್ಯಾಯಪೀಠದ 2ನೇ ಸದಸ್ಯ

ಹಿಜಾಬ್ ವಿಚಾರದಲ್ಲಿ ಸುಪ್ರೀಂ ಕೋರ್ಟ್​ನಅಂತಿಮ ತೀರ್ಪು ಬರುವವರೆಗೂ ಕಾಯಬೇಕಿದೆ. ರಾಜ್ಯಕ್ಕೆ ಸೀಮಿತವಾಗದೆ, ಇಡೀ ದೇಶಕ್ಕೆ ಮುಖ್ಯವಾಗಿರುವ ಈ ವಿಚಾರದಲ್ಲಿ ಹತ್ತು ಹಲವು ಆಯಾಮಗಳಿವೆ. ವಿದ್ಯಾರ್ಥಿಗಳ ಬೇಡಿಕೆ, ಸರ್ಕಾರದ ಆಜ್ಞೆ ಬೇರೆ ಬೇರೆಯಾಗಿದೆ. ರಾಷ್ಟ್ರ, ಅಂತಾರಾಷ್ಟ್ರೀಯ ವಿಚಾರಗಳು ಇದರಲ್ಲಿ ಆಳವಡಿಕೆ ಆಗಿರುವುದರಿಂದ ಸ್ಪಷ್ಟವಾದ ತೀರ್ಪನ್ನು ನಾವು ನಿರೀಕ್ಷೆ ಮಾಡುತ್ತಿದ್ದೇವೆ.

| ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ನಿರ್ದಿಷ್ಟ ಧರ್ಮದ ವಿದ್ಯಾರ್ಥಿಗಳಿಗೆ ಅವರ ಧಾರ್ವಿುಕ ಗುರುತನ್ನು ಧರಿಸಲು ಅನುಮತಿ ನೀಡುವುದು ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ. ಯಾವ ವಿದ್ಯಾರ್ಥಿಗೂ ಶಾಲೆಗೆ ಬಂದು ತರಗತಿಯಲ್ಲಿ ಕೂರಬೇಡಿ ಎಂದು ಸರ್ಕಾರ ಸೂಚಿಸಿಲ್ಲ. ಸಮವಸ್ತ್ರ ನಿಯಮ ಪಾಲನೆ ಮಾಡಲಾಗದೆ ವಿದ್ಯಾರ್ಥಿ ಶಾಲೆಗೆ ಬಂದಿಲ್ಲ ಎನ್ನುವುದಾದರೆ ಅದು ವಿದ್ಯಾರ್ಥಿಯ ಸ್ವಯಂಪ್ರೇರಿತ ನಡೆಯಾಗುತ್ತದೆಯೇ ಹೊರತು, ಸರ್ಕಾರ ಶಿಕ್ಷಣದ ಹಕ್ಕನ್ನು ಉಲ್ಲಂಘಿಸಿದೆ ಎಂದಲ್ಲ.

| ನ್ಯಾ. ಹೇಮಂತ್ ಗುಪ್ತಾ ನ್ಯಾಯಪೀಠದ ಹಿರಿಯ ಸದಸ್ಯ

ಯಾರಿರುತ್ತಾರೆ?

ನ್ಯಾ. ಹೇಮಂತ್ ಗುಪ್ತಾ ಅ.16ಕ್ಕೆ ನಿವೃತ್ತಿಯಾಗುತ್ತಿದ್ದು, ಶುಕ್ರವಾರ ಅವರ ಕರ್ತವ್ಯದ ಕೊನೆ ದಿನವಾಗಿದೆ. ನ್ಯಾ. ಸುಧಾಂಶು ಧುಲಿಯಾ ಸುಪ್ರೀಂಕೋರ್ಟ್ ಕಾರ್ಯಾವಧಿ ಮುಂದುವರಿದಿದೆ. ತ್ರಿಸದಸ್ಯ ಪೀಠದಲ್ಲಿ ನ್ಯಾ. ಸುಧಾಂಶು ಧುಲಿಯಾ ಇರುತ್ತಾರೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ.

ಕಾನೂನಾತ್ಮಕ ಪರೀಕ್ಷೆ ಬೇಕಿಲ್ಲ

ಹಿಜಾಬ್ ಕುರಿತಂತೆ ಅಗತ್ಯ ಧಾರ್ವಿುಕ ಆಚರಣೆಯ ಕಾನೂನಾತ್ಮಕ ಪರೀಕ್ಷೆಯ ಅವಶ್ಯಕತೆಯನ್ನು ಇಬ್ಬರು ನ್ಯಾಯಮೂರ್ತಿಗಳೂ ಅಲ್ಲಗಳೆದಿದ್ದಾರೆ.

ಸರ್ಕಾರದ ವಾದವೇನು?

ಶಾಲೆಯಲ್ಲಷ್ಟೇ ಹಿಜಾಬ್ ಧರಿಸುವುದನ್ನು ನಾವು ವಿರೋಧಿಸುತ್ತೇವೆ ಎಂದಿದ್ದ ರಾಜ್ಯ ಸರ್ಕಾರ, ಶಾಲೆಯ ಹೊರಭಾಗದಲ್ಲಿ ವಿದ್ಯಾರ್ಥಿಗಳು ತಮ್ಮಿಚ್ಛೆಯ ಉಡುಗೆ ತೊಡಲು ಸ್ವತಂತ್ರರು. ಹಿಜಾಬ್ ನಿರ್ಬಂಧದ ಹೆಸರಲ್ಲಿ ನಾವು ಯಾವುದೇ ವಿದ್ಯಾರ್ಥಿನಿಯ ಶಿಕ್ಷಣದ ಹಕ್ಕನ್ನು ಕಿತ್ತುಕೊಂಡಿಲ್ಲ. ಬದಲಿಗೆ, ಸಮವಸ್ತ್ರ ನೀತಿಗೆ ಬದ್ಧರಾಗಿರಬೇಕೆಂದು ಹೇಳಿದ್ದೇವೆ ಎಂದು ವಾದಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net