

Suicide Case: ಅಪಾರ್ಟ್ಮೆಂಟ್ನ 29ನೇ ಮಹಡಿಯಿಂದ ತನ್ನ 8 ವರ್ಷದ ಪುತ್ರಿಯನ್ನು ಎಸೆದು, ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈನ ಪನ್ವೇಲ್‌ನ ಪಲಾಸ್ಪೆ ಫಾಟಾದಲ್ಲಿರುವ ಔರಾ ಬಿಲ್ಡಿಂಗ್‌ನಲ್ಲಿ ಸಂಭವಿಸಿದೆ.
ಬುಧವಾರ (ಮಾ.12) ಬೆಳಗ್ಗೆ 8 ಗಂಟೆಗೆ ಈ ಘಟನೆ ಸಂಭವಿಸಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಮೃತ ಮಹಿಳೆಯನ್ನು ಮೈಥಿಲಿ ಆಶಿಶ್ ದುವಾ (35) ಮತ್ತು ಆಕೆಯ ಮಗಳನ್ನು ಮೈರಾ (8) ಎಂದು ಗುರುತಿಸಲಾಗಿದೆ. ಸಿವಿಲ್ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ಪತಿ ಆಶಿಶ್ ದುವಾರನ್ನು ಫ್ಲಾಟ್ನ ರೂಮ್ನಲ್ಲಿ ಕೂಡಿಹಾಕಿದ ಮೈಥಿಲಿ, ಮೊದಲು ಮಗಳನ್ನು ಎತ್ತರದ ಕಟ್ಟಡದಿಂದ ಎಸೆದು, ನಂತರ ತಾನು ಜಿಗಿದು ಸಾವಿಗೆ ಶರಣಾಗಿದ್ದಾಳೆ.
ಪತ್ನಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಳು. ಇದಕ್ಕಾಗಿ ಚಿಕಿತ್ಸೆ ಕೂಡ ಪಡೆಯುತ್ತಿದ್ದಳು. ಆದರೆ, ಕಳೆದ ಕೆಲವು ದಿನಗಳಿಂದ ಆಕೆ ಔಷಧಿ ತೆಗೆದುಕೊಳ್ಳುವುದನ್ನು ಬಿಟ್ಟಿದ್ದಳು. ನನ್ನನ್ನು ರೂಮ್ನಲ್ಲಿ ಕೂಡಿಹಾಕಿ, ಮಗಳನ್ನು ಎಸೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಶಿಶ್ ದುವಾ ಅಳಲು ತೋಡಿಕೊಂಡಿದ್ದಾರೆ. ಇಲ್ಲಿ ಪತಿ-ಪತ್ನಿ ನಡುವೆ ಏನಾದರೂ ಜಗಳ ನಡೆದಿತ್ತೇ ಅಥವಾ ಮನಸ್ತಾಪಗಳು ಮೂಡಿತ್ತೇ? ಎಂಬ ಅನುಮಾನಗಳು ಪೊಲೀಸರಿಂದ ವ್ಯಕ್ತವಾಗಿವೆ.
ಪ್ರಕರಣ ದಾಖಲಿಸಿಕೊಂಡಿದ್ದು, ಶೀಘ್ರವೇ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ಬಗ್ಗೆ ಮೈಥಿಲಿಯ ಕುಟುಂಬದಿಂದ ಯಾರೊಬ್ಬರೂ ಆಶಿಶ್ ದುವಾ ವಿರುದ್ಧ ದೂರು ದಾಖಲಿಸಲು ಮುಂದೆ ಬಂದಿಲ್ಲ. ಪತಿ ಆಶಿಶ್ ಮೂಲತಃ ಪಂಜಾಬ್ನವರು ಮತ್ತು ಮೈಥಿಲಿ ಮಹಾರಾಷ್ಟ್ರದವರು. ಇಬ್ಬರು 2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಎಂಬುದು ಪೊಲೀಸರ ವರದಿಯಲ್ಲಿ ಉಲ್ಲೇಖವಾಗಿದೆ,(ಏಜೆನ್ಸೀಸ್).