ಬೆಂಗಳೂರು: ಬಿಬಿಎಂಪಿ, ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಬಳಿಕ ಅನಧಿಕೃತ ಬಡಾವಣೆ, ನಿವೇಶನ, ಮನೆಗಳಲ್ಲಿ ಬದುಕು ಕಟ್ಟಿಕೊಂಡಿರುವ ಗ್ರಾಮವಾಸಿಗಳಿಗೂ ಬಿ ನಮೂನೆಯ ಇ-ಖಾತಾ ನೀಡುವ ಮಹತ್ವದ ತೀರ್ವನವನ್ನು ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಇದಕ್ಕಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ರಾಜ್ (ತಿದ್ದುಪಡಿ) ವಿಧೇಯಕ-2025ಕ್ಕೆ ಒಪ್ಪಿಗೆ ನೀಡಲಾಗಿದೆ.
ಸರ್ಕಾರದ ಈ ನಿರ್ಧಾರದನ್ವಯ ಗ್ರಾಮೀಣ ಪ್ರದೇಶದ ಅನಧಿಕೃತ ಆಸ್ತಿಗಳಿಗೆ ಶುಲ್ಕ ಪಡೆದು ‘ಬಿ’ ನಮೂನೆಯಲ್ಲಿ ಇ-ಖಾತಾ ವಿತರಿಸಲಾಗುವುದು, ಆ ಮೂಲಕ ತೆರಿಗೆ ವ್ಯಾಪ್ತಿಗೆ ತರಲಾಗುವುದು, ಈ ಕ್ರಮದಿಂದ ಆಸ್ತಿ ಮಾಲೀಕರ ಆತಂಕ ದೂರವಾಗಲಿದೆ. ಜತೆಗೆ ಆಯಾ ಗ್ರಾಮ ಪಂಚಾಯಿತಿಗಳಿಗೆ ಆದಾಯ ವೃದ್ಧಿಯಾಗಲಿದ್ದು, ಸವಲತ್ತು ಕಲ್ಪಿಸುವುದಕ್ಕೂ ಅನುಕೂಲವಾಗಲಿದೆ. ಗ್ರಾಮೀಣ ಪ್ರದೇಶದಲ್ಲಿ 96 ಲಕ್ಷ ಅನಧಿಕೃತ ಆಸ್ತಿಗಳಿವೆ ಎಂದು ಅಂದಾಜಿಸಲಾಗಿದೆ. ಗ್ರಾ.ಪಂ.ಗಳು ಅಗತ್ಯ ಸವಲತ್ತು ಒದಗಿಸಿದ್ದರೂ ಇ-ಸ್ವತ್ತು ಗುರುತಿನ ಸಂಖ್ಯೆ ಅಥವಾ ಇ-ಖಾತಾ ಇಲ್ಲದ ಕಾರಣಕ್ಕೆ ತೆರಿಗೆ ವಸೂಲಿ ಸಮಸ್ಯೆಯಾಗಿತ್ತು. ಅನಧಿಕೃತ ನಿವೇಶನ, ಮನೆ ಮತ್ತಿತರ ಆಸ್ತಿಗಳನ್ನು ಹೊಂದಿದ ಮಾಲೀಕರಿಗೆ ವಹಿವಾಟು, ಬ್ಯಾಂಕ್ ಸಾಲ ಪಡೆಯುವುದಕ್ಕೆ ಸಮಸ್ಯೆಯಾಗಿತ್ತು. ಇದೀಗ ಬಿ ನಮೂನೆಯ ಇ-ಖಾತಾ ನೀಡುವುದರಿಂದ ಸಮಸ್ಯೆ ಭಾಗಶಃ ಬಗೆಹರಿಯಲಿದೆ.
ಪಿ.ಸಿ. ಹೋಟಾ ಸಮಿತಿಯ ಶಿಫಾರಸು ಹಾಗೂ ವರದಿಯಂತೆ ವ್ಯಾಪಕ ಆಧಾರಿತ ಶೋಧ ಸಮಿತಿಗೆ ಅಧ್ಯಯನ ನಡೆಸಿ, ವರದಿ ಸಲ್ಲಿಸುವ ಜವಾಬ್ದಾರಿಯನ್ನು ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಮೂಲಗಳು ವಿವರಿಸಿವೆ. ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಸಿಎಂ ಉತ್ತರಿಸುವ ವೇಳೆ, ಯುಪಿಎಸ್ಸಿ ಮಾದರಿಯಲ್ಲಿ ಪರೀಕ್ಷೆ, ಆಯೋಗದ ಸದಸ್ಯತ್ವ ಬಲ ಈಗಿನ 16 ರಿಂದ 8ಕ್ಕೆ ಇಳಿಕೆ, ಅಧ್ಯಕ್ಷರು ಸೇರಿ ಸದಸ್ಯರ ನೇಮಕ, ಸಿಬ್ಬಂದಿ ನೇಮಕ ಮತ್ತು ವರ್ಗಾವಣೆ ನಿಯಮಗಳಿಗೆ ಹಲವು ತಿದ್ದುಪಡಿ ಮುಂತಾದ ಭರವಸೆ ನೀಡಿದ್ದನ್ನು ಸ್ಮರಿಸಬಹುದು.
ಕೆಪಿಎಸ್ಸಿ ಸದಸ್ಯರ ಸಂಖ್ಯೆಯನ್ನು ಇಳಿಸುವುದಕ್ಕೆ ಸಂಬಂಧಿಸಿದಂತೆ ನಿವೃತ್ತ ಐಎಎಸ್ ಅಧಿಕಾರಿ ಟಿ.ಎಂ. ವಿಜಯಭಾಸ್ಕರ್ ನೇತೃತ್ವದ ಆಡಳಿತ ಸುಧಾರಣಾ ಆಯೋಗ ನೀಡಿದ ವರದಿ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆಯಾಗಿದೆ. ಆಯೋಗದ ಅಧ್ಯಕ್ಷರು ಸೇರಿ ಸದಸ್ಯರ ಸಂಖ್ಯೆಯನ್ನು ಈಗಿನ 16 ರಿಂದ ಎಂಟಕ್ಕೆ ಇಳಿಸುವುದಕ್ಕಾಗಿ ಕೆಪಿಎಸ್ಸಿ (ಸೇವಾ ಷರತ್ತುಗಳು) ನಿಯಮಗಳಿಗೆ ತಿದ್ದುಪಡಿ ತರಲು, ಅರ್ಹ ಅಧ್ಯಕ್ಷ ಹಾಗೂ ಸದಸ್ಯರ ಆಯ್ಕೆಗೆ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಒಂದು ವ್ಯಾಪಕ ಆಧಾರಿತ ಹುಡುಕಾಟ ಸಮಿತಿ ರಚನೆಗೆ ಸಮ್ಮತಿಸಿದೆ.
ಹವಾಮಾನ ಕ್ರಿಯಾ ಯೋಜನೆಗೆ ಅಸ್ತು: ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಜಾರಿಗೆ ತರಲಿರುವ ಹವಾಮಾನ ಬದಲಾವಣೆ ಕ್ರಿಯಾ ಯೋಜನೆಗೆ ಸಂಪುಟ ಅನುಮೋದಿಸಿದೆ. ಸಮೂಹ ಸಾರಿಗೆ ವ್ಯವಸ್ಥೆ, ಹಸಿರು ಇಂಧನ ಆಧಾರಿತ ವಾಹನಗಳ ಬಳಕೆ, ಮಳೆ ನೀರು ಕೊಯ್ಲು, ಅಂತರ್ಜಲ ವೃದ್ಧಿ, ಮಿಶ್ರ ಬೆಳೆ ಬೆಳೆಯಲು ರೈತರಿಗೆ ಪ್ರೋತ್ಸಾಹ, ಸೌರ-ಪವನ, ಹೈಡ್ರೋಜನ್ ಆಧಾರಿತ ವಿದ್ಯುತ್ ಉತ್ಪಾದನೆ ಮತ್ತು ಬಳಕೆ ಮುಂತಾದ ಚಟುವಟಿಕೆಗಳನ್ನು ಕ್ರಿಯಾ ಯೋಜನೆ ಒಳಗೊಂಡಿದೆ.
ಮುಸ್ಲಿಮರಿಗೆ ಗುತ್ತಿಗೆ ಮೀಸಲು: ಸರ್ಕಾರಿ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಎರಡು ಕೋಟಿ ರೂ.ವರೆಗೆ ಮೀಸಲು ಸೌಲಭ್ಯವನ್ನು ಮುಸ್ಲಿಮರಿಗೆ ವಿಸ್ತರಿಸಲು ಸಂಪುಟ ಒಪ್ಪಿಗೆ ನೀಡಿದೆ. ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕ, 2025’ಕ್ಕೆ ಅನುಮೋದಿಸಿ, ಹಿಂದುಳಿದ 2ಬಿ ವರ್ಗಕ್ಕೆ ಸೇರಿದ ಮುಸ್ಲಿಮರಿಗೆ ಎರಡು ಕೋಟಿ ರೂ. ಮೊತ್ತದ ಕಾಮಗಾರಿ ಗುತ್ತಿಗೆ ಮೀಸಲು ಅವಕಾಶ ಕಲ್ಪಿಸಲು ನಿರ್ಧರಿಸಿದೆ. ಅಲ್ಲದೆ, ಪರಿಶಿಷ್ಟ ಜಾತಿ, ಪಂಗಡ, ಇತರ ಹಿಂದುಳಿದ ವರ್ಗದವರ ಜತೆಗೆ ಮುಸ್ಲಿಮರಿಗೂ ಒಂದು ಕೋಟಿ ರೂ. ಮೊತ್ತದ ಸರಕು, ಸೇವೆ ಮತ್ತು ಪೂರೈಕೆಯಲ್ಲಿ ಮೀಸಲು ಕಲ್ಪಿಸಲು ಸಂಪುಟ ಒಪ್ಪಿದೆ. ಸಿಎಂ ಸಿದ್ದರಾಮಯ್ಯ ಮಂಡಿಸಿದ್ದ 2025-26ನೇ ಸಾಲಿನ ಬಜೆಟ್ನಲ್ಲಿ ಎಸ್ಸಿ, ಎಸ್ಟಿ, ಒಬಿಸಿಗೆ ನೀಡುತ್ತಿರುವ ಸರ್ಕಾರಿ ಕಾಮಗಾರಿಗಳಲ್ಲಿ ಎರಡು ಕೋಟಿ ರೂ. ಮೀಸಲು ಸೌಲಭ್ಯವನ್ನು 2ಬಿ (ಮುಸ್ಲಿಮರು)ಗೆ ಒದಗಿಸಲಾಗುವುದು ಎಂದು ಪ್ರಕಟಿಸಿದ್ದರು. ಈ ಸೌಲಭ್ಯ ನೀಡಲು ಬೇಕಾದ ಬಿಲ್ಗೆ ಸಂಪುಟ ಹಸಿರು ನಿಶಾನೆ ತೋರಿಸಿದೆ.

ಸಂಪುಟ ಸಭೆ ನಿರ್ಣಯಗಳು
- ಪಿಎಂ ಜನ್ವುನ್ ಬ್ಯಾಚ್-2ರಡಿ 39.25 ಕೋಟಿ ರೂ. ವೆಚ್ಚದಲ್ಲಿ 39.99 ಕಿ.ಮೀ. ಉದ್ದದ 22 ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾಮಗಾರಿಯು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಏಜೆನ್ಸಿಯಿಂದ ಅನುಷ್ಠಾನ
- ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಪೋಷಣ್ ಅಭಿಯಾನದಡಿ ಅಂಗನವಾಡಿ ಕೇಂದ್ರಗಳಿಗೆ 21.53 ಕೋಟಿ ರೂ.ಗಳ ವೆಚ್ಚದಲ್ಲಿ ಒಟ್ಟು 26918 ಗ್ರೋತ್ ಮಾನಿಟರಿಂಗ್ ಡಿವೈಸ್ ಕಿಟ್ಗಳ ಖರೀದಿ
- ರಾಜ್ಯದಲ್ಲಿ ‘ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆ-ವಿ2’ ಅನುಷ್ಠಾನ
- ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿಯಿರುವ ಅಪರ ನಿಬಂಧಕರು (ಕಾನೂನು ಸಲಹೆ), ಉಪ ಲೋಕಾಯುಕ್ತ-2 ಅವರ ಆಪ್ತ ಕಾರ್ಯದರ್ಶಿ ಹುದ್ದೆಗಳಿಗೆ ಜಿಲ್ಲಾ ನಿವೃತ್ತ ನ್ಯಾಯಾಧೀಶರಾದ ಕೆ.ಅಮರನಾರಾಯಣ ಮತ್ತು ಸಿ.ರಾಜಶೇಖರ ಗುತ್ತಿಗೆ ಆಧಾರದಲ್ಲಿ ನೇಮಕ
- ಬೆಂಗಳೂರಿನ ಹೆಬ್ಬಾಳದಲ್ಲಿರುವ ಕೃಷಿ ಇಲಾಖೆಯ 4 ಎಕರೆ 25 ಗುಂಟೆ ಜಾಗವನ್ನು ಅಂತಾರಾಷ್ಟ್ರೀಯ ಪುಷ್ಪ ಹರಾಜು ಬೆಂಗಳೂರು ಸಂಸ್ಥೆಗೆ ಎರಡು ವರ್ಷಗಳ ಅವಧಿಗೆ ಬಾಡಿಗೆ ರಹಿತವಾಗಿ ನೀಡುವುದು
- ಅಗ್ನಿ ದುರಂತದಲ್ಲಿ ಹಾನಿಗೀಡಾದ ಬೆಂಗಳೂರು ಜೈವಿಕ ನಾವೀನ್ಯತಾ ಕೇಂದ್ರ ದುರಸ್ತಿ, ಪುನರ್ ಸ್ಥಾಪನೆ ಮತ್ತು ಉಪಕರಣಗಳ ಬದಲಾವಣೆಗೆ 96.77 ಕೋಟಿ ರೂ. ನೆರವು
- ಬೆಂಗಳೂರಿನಲ್ಲಿರುವ ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಕಟ್ಟಡ ನವೀಕರಣ, ಹೊಸದಾಗಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಹಾಗೂ ಉಪಕರಣ/ ಪೀಠೋಪಕರಣ ಖರೀದಿಗೆ 40.03 ಕೋಟಿ ರೂ. ವೆಚ್ಚ
- ಮಂಡ್ಯದಲ್ಲಿ ಸಮಗ್ರ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಸ್ಥಾಪನೆಯನ್ನು ಕೈಬಿಡಲು. ಚಾಲ್ತಿ ತೋಟಗಾರಿಕಾ ಕಾಲೇಜು ಮುಂದುವರಿಸಲು ಸಂಪುಟ ಸಭೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಅನುಮೋದಿತ ಮಸೂದೆಗಳು
- ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025
- ಕರ್ನಾಟಕ ಮುದ್ರಾಂಕ (ತಿದ್ದುಪಡಿ) ವಿಧೇಯಕ, 2025
- ಕರ್ನಾಟಕ ಭೂ ಕಬಳಿಕೆ ನಿಷೇಧ (ತಿದ್ದುಪಡಿ) ವಿಧೇಯಕ, 2025
- ಕರ್ನಾಟಕ ಗ್ರಾಮ ಕಚೇರಿಗಳ ನಿಮೂಲನೆ (ತಿದ್ದುಪಡಿ) ವಿಧೇಯಕ, 2025
- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ) ವಿಧೇಯಕ, 2025
- ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯ (ತಿದ್ದುಪಡಿ) ವಿಧೇಯಕ, 2025
WTC ಫೈನಲ್‌ನಲ್ಲಿ ಭಾರತದ ಅನುಪಸ್ಥಿತಿ; ದೊಡ್ಡ ಮೊತ್ತದ ನಷ್ಟದ ಸುಳಿಗೆ ಸಿಲುಕಿದ ಆಯೋಜಕರು
6 ತಿಂಗಳ ಮಗುವಿನೊಂದಿಗೆ ವಿಮಾನ ಪ್ರಯಾಣ; ಸಹಪ್ರಯಾಣಿಕರಿಗೆ ದಂಪತಿ ಕೊಟ್ಟ ಪತ್ರ ವೈರಲ್