ಬಾಬರ್​ ಮುಂದೆ ವಿರಾಟ್​ ಕೊಹ್ಲಿ ಶೂನ್ಯ! 'ರನ್​ ಮಷಿನ್'​ ಕುರಿತು ನಾಲಿಗೆ ಹರಿಬಿಟ್ಟ ಪಾಕ್​ ಮಾಜಿ ಕೋಚ್​ | Champions Trophy 2025

ವಿಜಯವಾಣಿ - 2025-03-03T090033.040
Published on

Champions Trophy: ಪ್ರಸಕ್ತ ದುಬೈ ಮತ್ತು ಪಾಕಿಸ್ತಾನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2025ರ ಚಾಂಪಿಯನ್ಸ್ ಟ್ರೋಫಿ ಕಾಳಗ ಇದೀಗ ಸೆಮಿಫೈನಲ್​ ಹಂತ ತಲುಪಿದೆ. ನಿನ್ನೆ ( ಮಾ.02) ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 44 ರನ್​ಗಳ ಜಯ ಸಾಧಿಸಿತು. ಈ ಮೂಲಕ ಪಾಯಿಂಟ್​ ಟೇಬಲ್​ನಲ್ಲಿ ರೋಹಿತ್ ಶರ್ಮ ಪಡೆ ಅಗ್ರಸ್ಥಾನಕ್ಕೇರಿದೆ. ಈ ಮಧ್ಯೆ ನಾಳೆ (ಮಾ.04) ನಡೆಯಲಿರುವ ಸೆಮಿಫೈನಲ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಸದ್ಯ ಈ ಪಂದ್ಯಕ್ಕಾಗಿ ಎಲ್ಲರೂ ಎದುರುನೋಡುತ್ತಿರುವ ನಡುವೆ ಪಾಕಿಸ್ತಾನ ಮಾತ್ರ ಇನ್ನೂ ತನ್ನ ಟೀಕೆ, ಟಿಪ್ಪಣಿಗಳನ್ನು ಬಿಟ್ಟಿಲ್ಲ.

ಆತಿಥೇಯರಾಗಿ ಚಾಂಪಿಯನ್ಸ್ ಟ್ರೋಫಿಗೆ ಲಗ್ಗೆಯಿಟ್ಟ ಪಾಕಿಸ್ತಾನ, ಆಡಿದ ಎರಡೇ ಪಂದ್ಯಗಳಲ್ಲಿ ಅತಿಥಿಯಾಗಿ ಟೂರ್ನಿಯಿಂದ ಹೊರಬಿದ್ದಿತು. ಟೀಮ್ ಇಂಡಿಯಾ ವಿರುದ್ಧ 6 ವಿಕೆಟ್​ಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿದ ಪಾಕ್​, ತಮ್ಮ ಅಭಿಮಾನಿಗಳಿಂದಲೇ ವ್ಯಾಪಕ ಛೀಮಾರಿ, ವ್ಯಂಗ್ಯಗಳಿಗೆ ಗುರಿಯಾಯಿತು. ತವರಿನಲ್ಲೇ ಭಾರೀ ಮುಖಭಂಗ ಉಂಟಾದರೂ ಬುದ್ದಿ ಕಲಿಯದ ಪಾಕಿಸ್ತಾನ, ಇದೀಗ ಮತ್ತೊಮ್ಮೆ ತನ್ನ ನರಿಬುದ್ಧಿ, ನಾಲಿಗೆ ಹರಿಬಿಡುವ ಚಾಳಿಯನ್ನು ಮುಂದುವರಿಸಿದೆ.

ನಿನ್ನೆ ಪಾಕಿಸ್ತಾನದ ಮಾಜಿ ಆಟಗಾರರಾದ ಇಂಜಮಾಮ್​ ಉಲ್​-ಹಕ್​ ಮತ್ತು ಸಕ್ಲೈನ್ ಮುಸ್ತಾಕ್, ರೋಹಿತ್ ಶರ್ಮ ಪಡೆಯನ್ನು ಟೀಕಿಸಿ, ಸವಾಲು ಹಾಕಿದ್ದರು. ಇದಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂದ ಭಾರೀ ವಿರೋಧಗಳು ವ್ಯಕ್ತವಾಯಿತು. ತಮ್ಮ ತಂಡದ ಕಳಪೆ ಪ್ರದರ್ಶನದ ಹೊರತಾಗಿಯೂ, ಮಾಜಿ ಆಟಗಾರ ಮತ್ತು ಬ್ಯಾಟಿಂಗ್​ ಕೋಚ್​ ಮೊಹ್ಸಿನ್ ಖಾನ್, ಬಾಬರ್ ಆಜಮ್​ ಮತ್ತು ವಿರಾಟ್ ಕೊಹ್ಲಿಯನ್ನು ಹೋಲಿಕೆ ಮಾಡಿ ಮಾತನಾಡಿದ್ದಾರೆ.

"ಸ್ಪಷ್ಟವಾಗಿ ಹೇಳುವುದಾದರೆ, ಬಾಬರ್ ಅಜಮ್‌ಗೆ ಹೋಲಿಸಿದರೆ ವಿರಾಟ್ ಕೊಹ್ಲಿ ಏನೇನೂ ಅಲ್ಲ. ಕೊಹ್ಲಿ ಶೂನ್ಯ. ಆದರೆ, ಇಲ್ಲಿ ಇದು ಮುಖ್ಯ ಸಮಸ್ಯೆಯಲ್ಲ. ನಿಜವಾದ ಸಮಸ್ಯೆ ಪಾಕಿಸ್ತಾನ ಕ್ರಿಕೆಟ್ ಆಗಿದೆ. ತಂಡ ಸಂಪೂರ್ಣವಾಗಿ ಹಾಳಾಗಿದೆ. ಯಾವುದೇ ಯೋಜನೆ, ಸರಿಯಾದ ತಂತ್ರ, ಅರ್ಹತೆ ಅಥವಾ ಹೊಣೆಗಾರಿಕೆ ಇಲ್ಲ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net