

Actress Seetha: 'ಮೊಂಡಿಮೊಗುಡು ಪೆಂಕಿ ಪೆಲ್ಲಂ', 'ವಜ್ರಂ', 'ರಾವಣ ಬ್ರಹ್ಮ' ಮುಂತಾದ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳ ಸಿನಿಪ್ರೇಕ್ಷಕರ ಮೆಚ್ಚುಗೆ ಗಳಿಸಿದ ನಟಿ ಸೀತಾ, ಸುಮಾರು 60 ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಪ್ರಸ್ತುತ ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ, ತಾಯಿ ಮತ್ತು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಸೀತಾ, ತಮ್ಮ ವೈಯಕ್ತಿಕ ಜೀವನದಲ್ಲಿ ಎದುರಿಸಿದ ಸವಾಲುಗಳು, ಪಟ್ಟ ಕಷ್ಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
"ಮೂರು ವರ್ಷ ವಯಸ್ಸಿನ ಮಗುವಿದ್ದಾಗಿನಿಂದಲೂ ನಾನು ಕಲಾವಿದೆಯಾಗಿ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ನನ್ನ ಬಾಲ್ಯದಲ್ಲಿ ಹಲವಾರು ಒಳ್ಳೊಳ್ಳೆ ಕಥಾಹಂದರದ ಸಿನಿಮಾಗಳನ್ನು ಮಾಡಿದ್ದೇನೆ. ಬಾಲ್ಯ ಕಳೆದ ನಂತರ ತೆಲುಗಿಗಿಂತ ಮಲಯಾಳಂನ ಚಿತ್ರಗಳಲ್ಲಿ ಹೆಚ್ಚು ಅಭಿನಯಿಸಿದ್ದೇನೆ. ಈಗ ನಾನು ಧಾರಾವಾಹಿಗಳಲ್ಲಿ ಬಿಜಿಯಾಗಿರುವ ಕಾರಣ ಬೆಳ್ಳಿಪರದೆಯತ್ತ ಮುಖ ಮಾಡಲು ಸಾಧ್ಯವಾಗಿಲ್ಲ" ಎಂದಿದ್ದಾರೆ.
"ನನ್ನ ವೈಯಕ್ತಿಕ ಬದುಕಿನ ಬಗ್ಗೆ ಹೇಳುವುದಾದರೆ, ಬಾಲ್ಯದಿಂದಲೇ ಬಹಳ ಕಷ್ಟಗಳನ್ನು ಎದುರಿಸುವ ಪರಿಸ್ಥಿತಿಗಳು ನನ್ನ ಮುಂದೆ ಸವಾಲಾಗಿ ನಿಂತಿತ್ತು. ನಾನು ಚಿಕ್ಕವಳಿದ್ದಾಗಲೇ ತಂದೆ ನಿಧನರಾದರು. ಅದಾದ ಬಳಿಕ ಅಮ್ಮನೇ ನನ್ನೆಲ್ಲ ಚಿತ್ರಗಳ ಚಿತ್ರೀಕರಣಕ್ಕೆ ಬರುತ್ತಿದ್ದರು. ಅವರೇ ಆ ಕೆಲಸಗಳನ್ನು ನಿಭಾಯಿಸುತ್ತಿದ್ದರು. ಆದರೆ, ಅವರಲ್ಲಿ ವಿಪರೀತ ಕೆಮ್ಮು ಕಾಣಿಸಿಕೊಂಡ ನಂತರ 4ನೇ ಹಂತದ ಕ್ಯಾನ್ಸರ್ ಇರುವುದು ಗೊತ್ತಾಯಿತು. ಚಿಕಿತ್ಸೆ ಕೊಡಿಸಿ, ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನಗಳನ್ನು ಮಾಡಿದೆ. ಆದ್ರೆ, ದೇವರಿಗೆ ಕರುಣೆ ಬರಲಿಲ್ಲ. ಅಂದೇ ದೇವರ ಮೇಲೆ ನಂಬಿಕೆ ಹೋಯಿತು" ಎಂದರು.
"ಮೊದಲ ದಾಂಪತ್ಯ ಜೀವನಕ್ಕೆ ವಿಚ್ಛೇದನ ಮುಕ್ತಿ ನೀಡಿತು. ಅದಾದ ಕೆಲವು ವರ್ಷಗಳ ಬಳಿಕ ಬೇರೆ ಧರ್ಮದ ವ್ಯಕ್ತಿಯೊಂದಿಗೆ ಎರಡನೇ ಮದುವೆಯಾದೆ. ನಾನು ಯಾವುದೇ ತಪ್ಪು ಮಾಡದಿದ್ದರೂ ವಿಚ್ಛೇದನ ಪಡೆಯುವ ಪರಿಸ್ಥಿತಿ ನಿರ್ಮಾಣವಾಯಿತು. ಇದು ಮನಸ್ಸಿಗೆ ತೀರ ಘಾಸಿ ಉಂಟುಮಾಡಿತು. ಮೊದಲ ಪತಿಯಿಂದ 2013ರಲ್ಲಿ ವಿಚ್ಛೇದನ ಪಡೆದುಕೊಂಡೆ. ನಂತರ 2018ರಲ್ಲಿ ನನ್ನ ಶಾಲಾ ಸಹಪಾಠಿಯನ್ನು ಭೇಟಿಯಾದೆ. ಒಂದಷ್ಟು ಮಾತುಕತೆಯ ಬಳಿಕ ಅವರನ್ನೇ ವಿವಾಹವಾದೆ" ಎಂದಿದ್ದಾರೆ.
"ಮೊದಲ ಪತಿಯಿದ್ದಾಗಲೇ ನನಗೆ ಮಕ್ಕಳಾಗಲಿಲ್ಲ. ಕಾರಣ, ನನ್ನ ಗರ್ಭಕೋಶದಲ್ಲಿ ಪತ್ತೆಯಾದ ಗೆಡ್ಡೆಗಳು (ಫೈಬ್ರಾಯ್ಡ್‌ಗಳು). ನಾನು ಮಾತ್ರೆಗಳನ್ನು ತೆಗೆದುಕೊಂಡರೆ ಅದು ಕರಗುತ್ತದೆ ಎಂದು ಪತಿ ಹೇಳಿದರು. ಆದರೆ, ಆ ಸಮಯದಲ್ಲಿ ಅವರೊಂದಿಗಿದ್ದ ಜಗಳ, ಮನಸ್ತಾಪದಿಂದ ಅದರ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಇನ್ನು ಎರಡನೇ ಮದುವೆಯ ನಂತರ, ಗೆಡ್ಡೆಗಳ ಗಾತ್ರ ದೊಡ್ಡದಾಯಿತು. ಗೆಡ್ಡೆ ಇತರ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ವೈದ್ಯರು ಎಚ್ಚರಿಸಿದ ಹಿನ್ನೆಲೆ ನಾನು ಗರ್ಭಕೋಶ ತೆಗೆಸಿದೆ. ಅದಕ್ಕೂ ಮೊದಲೇ ಎರಡು ಬಾರಿ ಗರ್ಭಪಾತ ಆಗಿತ್ತು. ಆದ್ದರಿಂದ ನಾನು ನನ್ನ ಗರ್ಭಕೋಶವನ್ನು ತೆಗೆದುಹಾಕುವ ಪರಿಸ್ಥಿತಿಯೂ ಎದುರಾಯಿತು. ಇದೇ ಕಾರಣಕ್ಕಾಗಿಯೇ ನಮಗೆ ಮಕ್ಕಳಾಗಲಿಲ್ಲ" ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).