ಹಾಲು ಒಕ್ಕೂಟದ ಮೊದಲ ಚುನಾವಣೆ ಮಾ.2ರಂದು; 8 ನಿರ್ದೇಶಕ ಸ್ಥಾನ, 381 ಮತದಾರರು; ಗೆಲುವಿಗಾಗಿ ಬಿಜೆಪಿ- ಕಾಂಗ್ರೆಸ್ ಬೆಂಬಲಿತರ ಮೇಲಾಟ

Havemul Office
Published on

ಕೇಶವಮೂರ್ತಿ ವಿ.ಬಿ ಹಾವೇರಿ

ಧಾರವಾಡ ಹಾಲು ಒಕ್ಕೂಟದಿಂದ ಬೇರ್ಪಟ್ಟು ಪ್ರತ್ಯೇಕ ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಹಾವೆಮುಲ್) ಆರಂಭವಾದ ಬಳಿಕ ಜಿಲ್ಲೆಯಲ್ಲಿ ಮೊದಲ ಬಾರಿಗೆ ಒಕ್ಕೂಟದ ನಿರ್ದೇಶಕ ಸ್ಥಾನಗಳಿಗೆ ಮಾ.2ರಂದು ಚುನಾವಣೆ ನಡೆಯಲಿದೆ. 8 ನಿರ್ದೇಶಕ ಸ್ಥಾನಗಳಿಗಾಗಿ ಕಾಂಗ್ರೆಸ್, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಡುವೆ ಭಾರೀ ರಾಜಕೀಯ ಮೇಲಾಟ ಶುರುವಾಗಿದ್ದು, ಕೆಲವೆಡೆ ಪಕ್ಷೇತರರು ಹವಾ ಸೃಷ್ಟಿಸಿದ್ದಾರೆ.

ಈ ಮೊದಲು ಜಿಲ್ಲೆಗೆ ಕೇವಲ 3 ಸ್ಥಾನಗಳಿದ್ದವು. ಆದರೆ, ಈಗ ಪ್ರತ್ಯೇಕವಾದ ಹಿನ್ನೆಲೆ 8 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಪ್ರತ್ಯೇಕಗೊಂಡ ನಂತರ ಹಲವು ಬಾರಿ ವಿವಿಧ ಕಾರಣಗಳಿಗೆ ಚುನಾವಣೆ ದಿನಾಂಕ ನಿಗಧಿಪಡಿಸಿ ಮುಂದೂಡಲಾಗಿತ್ತು. ಮೊದಲ ಚುನಾವಣೆ ಆದ್ದರಿಂದ ಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ವಿವಿಧ ಪಕ್ಷಗಳ ಬೆಂಬಲ ಪಡೆದ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ.

ತಾಲೂಕಿಗೆ ಒಬ್ಬ ಡೈರೆಕ್ಟರ್ :

ಜಿಲ್ಲೆಯ ಎಂಟು ತಾಲೂಕಿಗೆ 8 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 381 ಮತದಾರರಿದ್ದಾರೆ. ರಾಣೆಬೆನ್ನೂರ ತಾಲೂಕಿನಲ್ಲಿ ಅತಿ ಹೆಚ್ಚು 59 ಮತದಾರರಿದ್ದರೆ. ಹಾನಗಲ್ಲ ತಾಲೂಕಿನಲ್ಲಿ 57 ಮತದಾರರಿದ್ದಾರೆ. ಸವಣೂರ 36, ಹಾವೇರಿ 51, ಶಿಗ್ಗಾಂವಿ 38, ರಟ್ಟೀಹಳ್ಳಿ 45, ಹಿರೇಕೆರೂರ 51 ಹಾಗೂ ಬ್ಯಾಡಗಿ ತಾಲೂಕಿನಲ್ಲಿ 38 ಮತದಾರರಿದ್ದಾರೆ. ಪ್ರತಿ ಹಾಲು ಉತ್ಪಾದಕರ ಸಂಘಕ್ಕೆ ಒಂದು ಮತಕ್ಕೆ ಅವಕಾಶವಿದ್ದು, ಈಗಾಗಲೇ ಸ್ಪರ್ಧಿಸಲು ಮತ್ತು ಮತದಾನಕ್ಕೆ ಆಯಾ ಸಂಘಗಳು ಡೆಲಿಗೇಟ್ ಸಲ್ಲಿಸಿವೆ. ಇದರ ಆಧಾರದ ಮೇಲೆ ಈಗಾಗಲೇ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ.

ಮತದಾನಕ್ಕೆ ವೇದಿಕೆ ಸಜ್ಜು

ಮಾ.2ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಹಾವೇರಿ ನಗರದ ಮೈಲಾರ ಮಹದೇವಪ್ಪ ವೃತ್ತದ ಬಳಿಯಿರುವ ನಂ.2 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾನ ನಡೆಯಲಿದೆ. ಫೆ.17ರಿಂದ 22ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆದಿದ್ದು, ನಾಮಪತ್ರ ಪರಿಶೀಲನೆಯೂ ಮುಗಿದಿದೆ. ಅಭ್ಯರ್ಥಿಗಳಿಗೆ ಚಿಹ್ನೆಯನ್ನು ಹಂಚಿಕೆ ಮಾಡಲಾಗಿದ್ದು, ಮಾ.2ರಂದು ಮತದಾನ ನಡೆಯಲಿದೆ. ಅದೇ ದಿನ ಮತ ಎಣಿಕೆ ಹಾಗೂ ಫಲಿತಾಂಶ ಘೋಷಣೆಯೂ ಆಗಲಿದೆ.

ಕಣದಲ್ಲಿ 20 ಅಭ್ಯರ್ಥಿಗಳು

ಹಾವೇರಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಮತಕ್ಷೇತ್ರದಿಂದ ಬಸವರಾಜ ಅರಬಗೊಂಡ ಮತ್ತು ಬಸವೇಶಗೌಡ ಪಾಟೀಲ ಸ್ಪರ್ಧಿಸಿದ್ದಾರೆ. ಹಿರೇಕೆರೂರ ಕ್ಷೇತ್ರದಿಂದ ಉಜ್ಜನಗೌಡ ಮಾವಿನತೋಪ ಹಾಗೂ ಶಿವಯೋಗೆಪ್ಪ ಕೆರೂಡಿ ಕಣಕ್ಕಿಳಿದಿದ್ದಾರೆ. ರಾಣೆಬೆನ್ನೂರ ಕ್ಷೇತ್ರದಿಂದ ಮಂಜನಗೌಡ ಪಾಟೀಲ ಹಾಗೂ ಸಿದ್ದಲಿಂಗಪ್ಪ ಮರಿನಾಗಮ್ಮನವರ ಸ್ಪರ್ಧಿಸಿದ್ದಾರೆ. ಬ್ಯಾಡಗಿ ಕ್ಷೇತ್ರದಿಂದ ಕುಮಾರ ವಿರೂಪಾಕ್ಷಪ್ಪ ಚೂರಿ, ಚನ್ನಬಸಪ್ಪ ಬ್ಯಾಡಗಿ ಮತ್ತು ಪ್ರಕಾಶ ಬನ್ನಿಹಟ್ಟಿ ಸ್ಪರ್ಧಿಸಿದ್ದಾರೆ.

ರಟ್ಟಿಹಳ್ಳಿ ಕ್ಷೇತ್ರದಿಂದ ಹನುಮಂತಗೌಡ ಭರಮಣ್ಣನವರ, ಅಶೋಕ ಪಾಟೀಲ, ಮೃತ್ಯುಂಜಯ ಮಾರವಳ್ಳಿ ಪೈಪೋಟಿ ನಡೆಸಿದ್ದಾರೆ. ಸವಣೂರ ಕ್ಷೇತ್ರದಿಂದ ಬಸವರಡ್ಡಿ ರಡ್ಡೇರ ಹಾಗೂ ಶಶಿಧರ ಯಲಿಗಾರ ಸ್ಪರ್ಧಿಸಿದ್ದಾರೆ. ಶಿಗ್ಗಾಂವಿ ಕ್ಷೇತ್ರಕ್ಕೆ ತಿಪ್ಪಣ್ಣ ಸಾತಣ್ಣನವರ, ದೇವೇಂದ್ರಪ್ಪ ಜಾಧವ, ಪಾಲಾಕ್ಷಪ್ಪ ಹಾವಣಗಿ ಕಣದಲ್ಲಿದ್ದಾರೆ. ಹಾನಗಲ್ಲ ಕ್ಷೇತ್ರದಿಂದ ಚಂದ್ರಪ್ಪ ಜಾಲಗಾರ, ವಡಕಪ್ಪ ದೊಡ್ಡಮನಿ ಹಾಗೂ ಶಿವಲಿಂಗಪ್ಪ ತಲ್ಲೂರ ಕಣದಲ್ಲಿದ್ದಾರೆ.

ಅಧಿಕಾರಕ್ಕಾಗಿ ಹಲ್‌ಚಲ್

ಹಾವೆಮುಲ್ ಅಧಿಕಾರದ ಚುಕ್ಕಾಣಿ ಹಿಡಿಯಲು 8ರಲ್ಲಿ 5 ಸ್ಥಾನಗಳ ಬಲಾಬಲ ಬೇಕಿದೆ. ಐದು ಸ್ಥಾನ ಗೆದ್ದ ಬೆಂಬಲಿಗರು ಅಧ್ಯಕ್ಷರಾಗಲಿದ್ದಾರೆ. ಹಾಗಾಗಿ, ಮೊದಲ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಶುರುವಾಗಿದೆ. ಕಡಿಮೆ ಸಂಖ್ಯೆಯ ಮತದಾರರು ಇರುವ ಹಿನ್ನೆಲೆಯಲ್ಲಿ ಒಂದೊಂದು ಮತದಾರರನ್ನೂ ಓಲೈಸಲು ನಾನಾ ರೀತಿಯ ಕಸರತ್ತು ನಡೆಸಿದ್ದಾರೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳೂ ಕೂಡ ಇದನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿ ಅಖಾಡದಲ್ಲಿ ಸದ್ದು ಮಾಡುತ್ತಿವೆ.

ಕೋಟ್  

ಧಾರವಾಡದ ಹಾಲು ಒಕ್ಕೂಟದ ನಿರ್ದೇಶಕನಾಗಿ ಎರಡು ಬಾರಿಗೆ ಆಯ್ಕೆಯಾಗಿದ್ದು, ಹಾವೇರಿ ಹಾಲು ಒಕ್ಕೂಟ ರಚನೆಯಲ್ಲಿ ನಿಭಾಯಿಸಿದ ಜವಾಬ್ದಾರಿ ಮನಗಂಡು ಮೂರನೇ ಬಾರಿಗೆ ಸ್ಪರ್ಧಿಸಲು ಜನರೇ ಒತ್ತಾಯಿಸಿದ್ದಾರೆ. ಕರ್ನಾಟಕ ಸಹಕಾರ ಹಾಲು ಮಹಾಮಂಡಳಿಯ ಪ್ರತಿನಿಧಿಯಾಗಿ ಹಾವೆಮುಲ್‌ನ ಮೊದಲ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದೆ. ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ನನ್ನ ಸೇವಾ ಕಾರ್ಯಗಳೇ ನನ್ನ ಗೆಲುವುಗೆ ಸಹಕಾರಿಯಾಗುವ ವಿಶ್ವಾಸವಿದೆ.

- ಹನುಮಂತಗೌಡ ಬಸವನಗೌಡ ಭರಮಣ್ಣನವರ, ರಟ್ಟಿಹಳ್ಳಿ ನಿರ್ದೇಶಕ ಸ್ಥಾನದ ಅಭ್ಯರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net