

ಹಾವೇರಿ: ಜಿಲ್ಲೆಯ 22 ಪರೀಕ್ಷಾ ಕೇಂದ್ರಗಳಲ್ಲಿ ಶನಿವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಆರಂಭವಾಗಿದ್ದು, ಮೊದಲ ದಿನ ಕನ್ನಡ ಪರೀಕ್ಷೆ ಸುಗಮವಾಗಿ ನಡೆದಿದೆ. ಆದರೆ, 500 ವಿದ್ಯಾರ್ಥಿಗಳು ಗೈರು ಆಗಿರುವುದು ಆತಂಕ ಮೂಡಿಸಿದೆ.
ಕನ್ನಡ ಪರೀಕ್ಷೆಗೆ ಒಟ್ಟು 12,321 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದರು. ಈ ಪೈಕಿ 11,821 ವಿದ್ಯಾರ್ಥಿಗಳು ಹಾಜರಾಗಿದ್ದು, 500 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಇಷ್ಟೊಂದು ಪ್ರಮಾಣದ ವಿದ್ಯಾರ್ಥಿಗಳು ಗೈರಾಗಿದ್ದು ಯಾಕೆ ಎಂಬ ಪ್ರಶ್ನೆ ಮೂಡಿದೆ.
ಪರೀಕ್ಷೆ ಹಿನ್ನೆಲೆ ಪರೀಕ್ಷಾ ಕೊಠಡಿಗಳಲ್ಲಿ ಸ್ವಚ್ಛತೆ, ಗಡಿಯಾರ, ಫ್ಯಾನ್, ಬೆಳಕಿನ ವ್ಯವಸ್ಥೆ, ಕುಡಿಯುವ ನೀರು ಹಾಗೂ ಶೌಚಗೃಹ, ಇತರ ಮೂಲ ಸೌಕರ್ಯ ಕಲ್ಪಿಸಲಾಗಿತ್ತು. ಬೆಳಗ್ಗೆ ವಿದ್ಯಾರ್ಥಿಗಳನ್ನು ತಪಾಸಣೆ ಮಾಡಿ ಪರೀಕ್ಷಾ ಕೇಂದ್ರಕ್ಕೆ ಸ್ವಾಗತಿಸಲಾಯಿತು. ಮೊಬೈಲ್, ರಿಸ್ಟ್ ವಾಚ್, ಬ್ಲೂಟೂತ್, ಪೇಜರ್, ವೈರ್‌ಲೆಸ್ ಸೆಟ್‌ಗಳನ್ನು ನಿಷೇಧಿಸಲಾಗಿತ್ತು. ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್‌ವರೆಗೆ ನಿಷೇಧಾಜ್ಞೆ ಹೊರಡಿಸಲಾಗಿತ್ತು.
ಪರೀಕ್ಷಾ ಕೇಂದ್ರದೊಳಗೆ ಆರೋಗ್ಯ ಇಲಾಖೆಯ ಶೂಶ್ರೂಷಕಿ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸಿದರು. ಪೊಲೀಸ್ ಬಂದೋಬಸ್ತ್, ವೆಬ್ ಕ್ಯಾಮರಾ ಕಣ್ಗಾವಲಲ್ಲಿ ಮೊದಲ ದಿನದ ಪರೀಕ್ಷೆ ಶಾಂತಿಯುತವಾಗಿ ಮುಕ್ತಾಯಗೊಂಡಿತು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ (ಡಿಡಿಪಿಯು) ಪ್ರಭಾರ ಉಪನಿರ್ದೇಶಕ ಆನಂದ ಮುದಕಮ್ಮನವರ ತಿಳಿಸಿದ್ದಾರೆ.