

ಬಿಲಾಸ್‌ಪುರ: ಜಿಲ್ಲೆಯ ಸರ್ಕಾರಿ ಶಾಲೆಯೊಂದರ ತರಗತಿಯಲ್ಲಿ ಬಿಯರ್ ಸೇವನೆ ಮಾಡುತ್ತಿದ್ದ ವಿದ್ಯಾರ್ಥಿನಿಯರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ಧ ಇದೀಗ ಶಿಕ್ಷಣ ಇಲಾಖೆ ಗರಂ ಆಗಿದೆ. ಘಟನೆ ಬೆಳಕಿಗೆ ಬಂದ ಹಿನ್ನಲೆ ಶಿಕ್ಷಣ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ವಿದ್ಯಾರ್ಥಿಗಳ ಹೇಳಿಕೆ ಪಡೆಯಲು ಮುಂದಾಗಿದ್ದಾರೆ.
ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ಮಸ್ತೂರಿ ಪ್ರದೇಶದ ಭಟಚೌರಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಸಲಿಗೆ ವಿದ್ಯಾರ್ಥಿನಿಯರು ಜುಲೈ 29ರಂದು ಮದ್ಯ ಸೇವಿಸಿದ್ದು, ದೃಶ್ಯವನ್ನು ಮೊಬೈಲ್ ಕ್ಯಾಮರಾದಲ್ಲಿ ಚಿತ್ರೀಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಹುಡುಗಿಯರು ಬಿಯರ್ ಮತ್ತು ಕೂಲ್ ಡ್ರಿಂಕ್ಗಳನ್ನು ಕುಡಿಯುತ್ತಿರುವುದು ಕಂಡುಬಂದಿದೆ ಎಂದು ಬಿಲಾಸ್‌ಪುರದ ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ಟಿಆರ್ ಸಾಹು ತಿಳಿಸಿದ್ದಾರೆ.
ಆಪಾದಿತ ಘಟನೆಯ ತನಿಖೆಗೆ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಮತ್ತು ತಂಡವು ಸೋಮವಾರ (ಸೆ.09) ಸಂಬಂಧಪಟ್ಟ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹೇಳಿಕೆಗಳನ್ನು ದಾಖಲಿಸಿದೆ. ವಿದ್ಯಾರ್ಥಿನಿಯರು ನಾವು ವಿಡಿಯೋ ಮಾಡುವಾಗ ಮೋಜಿಗಾಗಿ ಬಿಯರ್ ಬಾಟಲಿಗಳನ್ನು ಹಿಡಿದುಕೊಂಡಿದ್ದೇ ವಿನಃ ಕುಡಿಯಲು ಅಲ್ಲ. ಅಸಲಿಗೆ ನಾವು ಮದ್ಯಪಾನ ಮಾಡಿಯೇ ಇಲ್ಲ ಎಂದು ತನಿಖಾ ತಂಡಕ್ಕೆ ತಿಳಿಸಿದ್ದಾರೆ ಎಂದು ಸಾಹು ಹೇಳಿದ್ದಾರೆ.
ಇದನ್ನೂ ಓದಿ: ಸಂತರನ್ನು ತಿಳಿದುಕೊಂಡರೆ ಬದುಕಿನಲ್ಲಿ ನೆಮ್ಮದಿ
ಶಾಲೆಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಪ್ರಾಂಶುಪಾಲರು ಮತ್ತು ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅದಲ್ಲದೆ, ಸಂಬಂಧಪಟ್ಟ ಬಾಲಕಿಯರ ಪೋಷಕರಿಗೆ ನೋಟಿಸ್ ಕಳುಹಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ,(ಏಜೆನ್ಸೀಸ್).