

ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ, ದಾಖಲೆಗಳ ಸರದಾರ, ‘ರನ್ ಮಷಿನ್’ ವಿರಾಟ್ ಕೊಹ್ಲಿ ಅಂದರೆ ಕ್ರಿಕೆಟ್ ಅಭಿಮಾನಿಗಳಿಗೆ ಅದೇನೋ ವಿಶೇಷ ಪ್ರೀತಿ, ಹುಚ್ಚು ಅಭಿಮಾನ. ಬ್ಯಾಟ್ ಹಿಡಿಯುವ ಕೊಹ್ಲಿ ಮೈದಾನಕ್ಕಿಳಿಯುತ್ತಿದ್ದಾರೆ ಎಂಬುದು ಗೊತ್ತಾದ್ರೆ ಸಾಕು ಸ್ಟೇಡಿಯಂ ಪೂರ ವಿರಾಟ್ ಹೆಸರು ಮೊಳಗಲಿದೆ. ಅಭಿಮಾನದ ಹೊಳೆ ಹರಿಸುವ ಫ್ಯಾನ್ಸ್, ಭಾರತೀಯ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರ ಎಂದು ವಿರಾಟ್ರನ್ನು ಗುಣಗಾನ ಮಾಡುತ್ತಾರೆ. ವಿರಾಟ್ರ ಆಟದ ವೈಖರಿ, ಸ್ಟೈಲಿಶ್ ಲುಕ್ ಹೀಗೆ ಹಲವು ವಿಷಯಗಳನ್ನು ಅನುಸರಿಸುವ ಫ್ಯಾನ್ಸ್ಗಳು ತಮ್ಮ ನೆಚ್ಚಿನ ಸೆಲೆಬ್ರಿಟಿ ಕಾಣಲು ಸದಾ ಕಾತರ ವ್ಯಕ್ತಪಡಿಸುತ್ತಾರೆ. ಎಲ್ಲಿ ಹೋದರೂ ಫ್ಯಾನ್ಸ್ಗಳಿಂದಲೇ ಸುತ್ತುವರೆಯುವ ಕೊಹ್ಲಿ, ತಾವು ಕಂಡ ವಿಶೇಷ ಹಾಗೂ ವಿಚಿತ್ರ ಅಭಿಮಾನಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿರುವ ವಿರಾಟ್, ತಮ್ಮ ಕ್ರಿಕೆಟ್ ಜಗತ್ತಿನಲ್ಲಿ ಕಂಡ ವಿಶೇಷ ಅಭಿಮಾನಿ ಹಾಗೂ ಅವರಿಂದ ಸ್ವೀಕರಿಸಿದ ಪ್ರೀತಿ ನನ್ನಿಂದ ಈಗಲೂ ಮರೆಯಲು ಸಾಧ್ಯವೇ ಇಲ್ಲ ಎಂದು ಹೇಳಿದರು. ಅದು 2019ರ ಏಕದಿನ ವಿಶ್ವಕಪ್ ಸಮಯ. ಒಬ್ಬರು ವಯಸ್ಸಾದ ವೃದ್ಧೆ ನನ್ನನ್ನು ನೋಡಲು ತುಂಬ ಸಮಯದಿಂದ ಸ್ಟೇಡಿಯಂನಲ್ಲಿ ಕಾದು ಕುಳಿತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ನಾನು ಅವರಿದ್ದ ಜಾಗಕ್ಕೆ ಅವರನ್ನು ಭೇಟಿಯಾಗಲು ಹೋದೆ. ವೃದ್ಧೆಯನ್ನು ನೋಡುತ್ತಿದ್ದಂತೆ ಒಂದು ನಿಮಿಷ ಅತೀವ ಸಂತೋಷ ಉಂಟಾಯಿತು. ಏಕೆಂದರೆ, ಅವರನ್ನು ನೋಡಿದಾಗ ನನ್ನ ತಂದೆ-ತಾಯಿಯೇ ಕಣ್ಮುಂದೆ ಬಂದಂತಾಯಿತು ಎಂದು ವಿರಾಟ್ ಹೇಳಿದ್ದಾರೆ.
ನಿಜಕ್ಕೂ ಆ ಕ್ಷಣವನ್ನು ಇಂದಿಗೂ ನಾನು ಮರೆಯಲಾರೆ. ಆ ವೃದ್ಧೆ ತೋರಿದ ಅಗಾಧ ಪ್ರೀತಿ, ಕಾಯುವಿಕೆ ನನ್ನ ಹೃದಯಕ್ಕೆ ಹತ್ತಿರವಾದದ್ದು ಎಂದ ವಿರಾಟ್ ಮನಬಿಚ್ಚಿ ತಮ್ಮ ವಿಶೇಷ ಅಭಿಮಾನಿಯ ಬಗ್ಗೆ ಮಾತನಾಡಿದ್ದಾರೆ. ಪ್ರಸ್ತುತ ಕ್ರಿಕೆಟ್ನಿಂದ ದೂರ ಉಳಿದಿರುವ ಕೊಹ್ಲಿ, ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಲಂಡನ್ನಲ್ಲಿ ರಜೆ ಕಳೆಯುತ್ತಿದ್ದಾರೆ. ಲಂಡನ್ನಲ್ಲಿರುವ ವಿರಾಟ್ ದಂಪತಿಯ ಫೋಟೋಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಶೀಘ್ರವೇ ಭಾರತಕ್ಕೆ ಮರಳಲಿರುವ 'ರನ್ ಮಷಿನ್', ಸೆ.19ರಿಂದ ಪ್ರಾರಂಭವಾಗುವ ಬಾಂಗ್ಲಾ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಸೇರಲಿದ್ದಾರೆ,(ಏಜೆನ್ಸೀಸ್).