ಹೈದರಾಬಾದ್: ಎಸ್. ಎಸ್. ರಾಜಮೌಳಿ ಅವರನ್ನು ಚಿತ್ರರಂಗದ ಸೋಲಿಲ್ಲದ ಸರದಾರ ಎನ್ನಬಹುದು. ಅವರು ನಿರ್ದೇಶಿಸಿದ 12 ಚಿತ್ರಗಳು ಕೂಡ ಸೂಪರ್ ಹಿಟ್ ಆಗಿವೆ. ಇದೀಗ ಮತ್ತೊಂದು ಸೂಪರ್ ಹಿಟ್ ಚಿತ್ರಕ್ಕೆ ರೆಡಿಯಾಗಿದ್ದಾರೆ. ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಈ ಸಿನಿಮಾ ರಿಲೀಸ್ ಆಗಲು ಸುಮಾರು ಮೂರ್ನಾಲ್ಕು ವರ್ಷಗಳೇ ಬೇಕು ಎಂಬುದು ಇಂಡಸ್ಟ್ರಿಯ ಒಳಗಿನ ಮಾತು. ಅಲ್ಲಿಯವರೆಗೂ ಆರ್ಆರ್ಆರ್ ಸಿನಿಮಾದ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ.
2022ರಲ್ಲಿ ತೆರೆಕಂಡ ಆರ್ಆರ್ಆರ್ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದಲ್ಲದೆ, ಆಸ್ಕರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಗೆದ್ದುಕೊಂಡಿತು. ಟಾಲಿವುಡ್ ಉದ್ಯಮವನ್ನು ಮತ್ತೊಮ್ಮೆ ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿತು. ಈ ಸಿನಿಮಾ ಮೂಲಕ ತೆಲುಗು ಇಂಡಸ್ಟ್ರಿಯು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತನ್ನ ಶಕ್ತಿಯನ್ನು ಪ್ರದರ್ಶನ ಮಾಡಿತು. ಇಡೀ ಭಾರತೀಯ ಚಲನಚಿತ್ರೋದ್ಯಮ ಬಗ್ಗೆ ಚರ್ಚಿಸುವಂತೆ ಮಾಡಿತು. ಈ ಚಿತ್ರದಲ್ಲಿ ನಟಿಸಿದ ಎಲ್ಲರಿಗೂ ಹೆಸರು ಮತ್ತು ಖ್ಯಾತಿಯೂ ಸಿಕ್ಕಿತು.
ಮಲ್ಲಿ ಪಾತ್ರದಲ್ಲಿ ಮಿಂಚಿದ ಪುಟ್ಟ ಹುಡುಗಿಯಿಂದ ಹಿಡಿದು ರಾಮ್ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ವರೆಗೂ ಜಾಗತಿಕ ಮಟ್ಟದಲ್ಲಿ ಒಳ್ಳೆಯ ಹೆಸರು ಬಂತು. ಇದೇ ಸಿನಿಮಾದಲ್ಲಿ ಎಲ್ಲರ ಗಮನ ಸೆಳೆದ ಮತ್ತೊಂದು ಪಾತ್ರವೆಂದರೆ ಅದು ಲೋಕಿ ಪಾತ್ರ. ಮಲ್ಲಿ ತಾಯಿಯಾಗಿ ಹಾಗೂ ಗೊಂಡ ಜನಾಂಗದ ಮಹಿಳೆಯಾಗಿ ಲೋಕಿ ಪಾತ್ರ ರಂಜಿಸಿತು. ತನ್ನ ಮಗಳು ಮಲ್ಲಿಯನ್ನು ಬ್ರಿಟಿಷ್ ರಾಣಿ ಕರೆದುಕೊಂಡು ಹೋಗುವುದನ್ನು ನೋಡಿ ತಾಯಿ ಲೋಕಿ ಕಂಗಾಲಾಗುತ್ತಾಳೆ. ಆಕೆ ಬ್ರಿಟಿಷರ ಕಾರಿಗೆ ಅಡ್ಡ ಬಂದಾಗ ಆಕೆಗೆ ಹೊಡೆದು ಮಗಳನ್ನು ಕರೆದುಕೊಂಡು ಹೋಗುತ್ತಾರೆ. ಆರಂಭದಲ್ಲಿ ಮತ್ತು ಕೊನೆಯಲ್ಲಿ ಲೋಕಿ ಪಾತ್ರವನ್ನು ಕಾಣಬಹುದು. ನಟಿಸಿದ್ದು ಕೆಲವೇ ನಿಮಿಷದ ಪಾತ್ರವಾದರೂ ಲೋಕಿ ಪಾತ್ರ ಎಲ್ಲರ ಮನದಲ್ಲಿ ಉಳಿದಿದೆ. ಅಂದಹಾಗೆ ಈ ಲೋಕಿ ಪಾತ್ರಕ್ಕೆ ಬಣ್ಣಹಚ್ಚಿದ ಕಲಾವಿದೆಯ ಹೆಸರು ಅಹ್ಮರಿನ್ ಅಂಜುಮ್. ಈಕೆ ಹಿಂದಿ ನಟಿ. ಕಿರುಚಿತ್ರಗಳು ಮತ್ತು ಕೆಲ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಅಹ್ಮರಿನ್ ಅಂಜುಮ್ ಜಾಹೀರಾತು ಹಾಗೂ ದೂರದರ್ಶನ ಕಾರ್ಯಕ್ರಮಗಳಲ್ಲಿ ನಟಿಸಿದ್ದಾರೆ. ಈಕೆ ಓರ್ವ ರಂಗ ಕಲಾವಿದೆ ಕೂಡ. ಹಿಂದಿ ಮತ್ತು ಇಂಗ್ಲಿಷ್ ಮಾತ್ರವಲ್ಲದೆ ಉರ್ದು, ಬಂಗಾಳಿ ಮತ್ತು ತೆಲುಗು ಭಾಷೆಗಳನ್ನು ಮಾತನಾಡಬಲ್ಲ ಬಹುಮುಖ ಪ್ರತಿಭೆ. ಕಿರುಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ಮಿಂಚಿದ ಈಕೆ ಈಗ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.
ಅಹ್ಮರಿನ್ ಅಂಜುಮ್ ಅವರು 2022ರಲ್ಲಿ ಬ್ರಿಟಿಷ್-ದಕ್ಷಿಣ ಏಷ್ಯಾದ ನಟ ಡ್ಯಾನಿ ಸುರಾ ಅವರನ್ನು ವಿವಾಹವಾದರು. ಅಹ್ಮರಿನ್ ಅವರು ದೇವಿ ಔರ್ ಹೀರೋ ಮತ್ತು ಕ್ಲಾಸ್ ಆಫ್ 83 ನಂತಹ ಚಿತ್ರಗಳಲ್ಲಿ ಸ್ಕೋಪ್ ಇರುವ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಅವರನ್ನು ಚೆನ್ನಾಗಿ ಗುರುತಿಸಿದ್ದು ಮಾತ್ರ ಲೋಕಿ ಪಾತ್ರದಿಂದ. ಅಹ್ಮರಿನ್ ಕೇವಲ ನಟಿ ಮಾತ್ರವಲ್ಲ, ನಟಿಯರಾಗಿ ಮಿಂಚಬೇಕು ಎನ್ನುವವರಿಗೆ ತರಬೇತಿ ಸಹ ನೀಡುತ್ತಾರೆ. ಈ ಸುಂದರಿ ತನ್ನ ಪತಿಯೊಂದಿಗೆ ನಟನೆಯನ್ನು ಕಲಿಸುತ್ತಿದ್ದಾರೆ. ಒಂದೆಡೆ ಸಿನಿಮಾ ಮಾಡುತ್ತಲೇ ಮತ್ತೊಂದೆಡೆ ನಟನಾ ತರಬೇತಿ ತರಗತಿಗಳನ್ನು ನಡೆಸುತ್ತಿದ್ದಾರೆ. (ಏಜೆನ್ಸೀಸ್)
ಅಣ್ಣಾವ್ರು ಸಿನಿಮಾದಲ್ಲಿ ದರ್ಶನ್ಗೆ ನಾಯಕಿಯಾಗಿದ್ದ ಕನಿಹಾಗೆ ಏನಾಯ್ತು? ಫೋಟೋ ನೋಡಿ ಫ್ಯಾನ್ಸ್ ಶಾಕ್!
ತನ್ನ ವಿಚಿತ್ರ ಸಂಭ್ರಮಾಚರಣೆಯಿಂದ ಅಂದು ಜಾಲತಾಣದಲ್ಲಿ ಧೂಳೆಬ್ಬಿಸಿದ್ದ ಬಾಲಕ ಇಂದು ಹೇಗಿದ್ದಾನೆ ನೋಡಿ!