ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ಯಾಕೆಂದು ಬಿಜೆಪಿಗರು ನನ್ನನ್ನು ಟೀಕಿಸಿದ್ದರು… ಅವರದ್ದು ಭೂತದ ಬಾಯಲ್ಲಿ ಭಗವದ್ಗೀತೆ!

Siddaramaiah
Published on

ಬಾಗಲಕೋಟೆ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಬಾಡೂಟ ಸೇವಿಸಿ ದೇವಸ್ಥಾನ ಪ್ರವೇಶಿಸಿದ್ದಾರೆ ಎಂಬ ವಿಚಾರ ಸದ್ಯ ರಾಜಕೀಯ ವಲಯದಲ್ಲಿ ಹೆಚ್ಚಿನ ಚರ್ಚೆಗೆ ಒಳಪಟ್ಟಿದೆ. ಇದೀಗ ಈ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ದೇವಸ್ಥಾನಕ್ಕೆ ಹೋಗುವುದು, ಹೋಗದೇ ಇರುವುದು, ಮಾಂಸ ತಿನ್ನುವುದು, ತಿನ್ನದೇ ಇರುವುದೆಲ್ಲ ಚರ್ಚೆ ಮಾಡಬೇಕಾದ ವಿಚಾರಗಳೇ ಅಲ್ಲ. ಚರ್ಚೆ ಮಾಡಬೇಕಾಗಿರುವುದು ಜನರ ಸಮಸ್ಯೆ ಹಾಗೂ ನಾಡಿನ ಅಭಿವೃದ್ಧಿ ಬಗ್ಗೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಮೀನು ತಿಂದು ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಮಾಡಿದ್ದಾರೆ ಎಂದ ವಿಚಾರ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯವರು ಸುಳ್ಳು ಹೇಳುತ್ತಾರೆ ಎಂಬುವುದು ಜನರಿಗೆ ಗೊತ್ತಾಗಿದೆ. ಭೂತದ ಬಾಯಲ್ಲಿ ಭಗವದ್ಗೀತೆ ಎನ್ನುವುದು ಜನರಿಗೂ ಸ್ಪಷ್ಟವಾಗುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರನ್ನು ವ್ಯಂಗ್ಯವಾಡಿದ್ದಾರೆ.

ಫೆ.19ರಂದು ಉತ್ತರಕನ್ನಡ ಜಿಲ್ಲೆಗೆ ಆಗಮಿಸಿದ್ದಾಗ ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ ಮನೆಯಲ್ಲಿ ಸಿ.ಟಿ.ರವಿ ಬಾಡೂಟ ಸೇವಿಸಿದ್ದರು. ಬಳಿಕ ಶಾಸಕ ಸುನಿಲ್ ನಾಯ್ಕ ಹಾಗೂ ದೇವಸ್ಥಾನದ ಕಮಿಟಿ ಸದಸ್ಯರೊಂದಿಗೆ ಹಳೇ ಬಸ್ ನಿಲ್ದಾಣ ಸಮೀಪವಿರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವಸ್ಥಾನದ ಬಾಗಿಲಲ್ಲೇ ಸನ್ಮಾನವನ್ನೂ ಸ್ವೀಕರಿಸಿದ್ದರು. ಶಾಸಕರೊಂದಿಗೆ ಮನೆಯಲ್ಲಿ ಸಿ.ಟಿ,ರವಿ ಬಾಡೂಟ ಸೇವಿಸುತ್ತಿರುವ ಹಾಗೂ ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಿಂದ ವ್ಯಾಪಕ ಟೀಕೆ ಕೇಳಿ ಬಂದಿತ್ತು.

ತಮ್ಮ ಮೇಲೆ ಬಂದಿರುವ ಟೀಕೆಗೆ ಮಂಡ್ಯದಲ್ಲಿ ಸಿ.ಟಿ.ರವಿ ಪ್ರತಿಕ್ರಿಯಿಸಿ, ನಾನು ಹುಟ್ಟಿರೋದೇ ಮಾಂಸ ತಿನ್ನೋ‌ ಜಾತಿಯಲ್ಲಿ… ಆದರೆ ಮಾಂಸ ತಿಂದು ದೇವಾಲಯಕ್ಕೆ ಹೋಗಿಲ್ಲ. ಸುಮ್ಮನೆ ವಿವಾದ ಹುಟ್ಟಹಾಕಲು ಕೆಲವರು ಹೀಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net