ಕಳೆದ ವರ್ಷ ತೋಳೇರಿಸಿಕೊಂಡು ಓಡಾಡುತ್ತಿದ್ದಾಕೆ ಈಗ ಫುಲ್​ ಸ್ಲೀವ್ಸ್​ ಹಾಕಿಕೊಂಡು ಓಡಾಡುತ್ತಿದ್ದಾಳೆ; ಕಾರಣ ಅದೊಂದು ಹಚ್ಚೆ!

TT F
Published on

ನವದೆಹಲಿ: ಇಲ್ಲೊಬ್ಬ ಯುವತಿ ಕಳೆದ ವರ್ಷ ತೋಳೇರಿಸಿಕೊಂಡು ಓಡಾಡುತ್ತಿದ್ದಳು. ಆದರೆ ಅದಾಗಿ ಒಂದು ವರ್ಷ ಕಳೆಯುತ್ತಿದ್ದಂತೆ ಇದೀಗ ಫುಲ್​ ಸ್ಲೀವ್ಸ್ ಹಾಕಿಕೊಂಡು ಓಡಾಡುತ್ತಿದ್ದಾಳೆ. ಮಾತ್ರವಲ್ಲ, ತನ್ನ ಆ ಒಂದು ನಿರ್ಧಾರಕ್ಕೆ ಈಗ ಈಕೆ ಪಶ್ಚಾತ್ತಾಪವನ್ನೂ ಪಡುತ್ತಿದ್ದಾಳೆ.

ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಒಂದು ಹೊಸ ಟ್ರೆಂಡ್ ಈಕೆಯ ಈ ವಿಷಯವನ್ನು ಮುನ್ನೆಲೆಗೆ ತಂದಿದ್ದು, ಇದು ವೈರಲ್ ಆಗಲಾರಂಭಿಸಿದೆ. ಕೋವಿಡಿಯಟ್​ ಎಂಬಂತಾಗಿದ್ದ ಈಕೆಗೆ ಈಗ ಅರಿವು ಮೂಡಿದ್ದು, ಮುಖವನ್ನಷ್ಟೇ ಅಲ್ಲ ತೋಳನ್ನೂ ಮರೆಮಾಚಿಕೊಂಡು ಓಡಾಡುತ್ತಿದ್ದಾಳೆ. ಇದಕ್ಕೆಲ್ಲ ಕಾರಣ ಏನು ಎಂದರೆ ಬರೀ ಒಂದು ಹಚ್ಚೆ. ಇದು ಬರೀ ಹಚ್ಚೆಯಾದರೂ ಅದರಲ್ಲಿನ ಸಾಲುಗಳು ಇದೀಗ ಈಕೆಯನ್ನು ಪಶ್ಚಾತ್ತಾಪ ಪಡುವಂತೆ ಮಾಡಿದೆಯಂತೆ.

ಕೋವಿಡ್​-19 ಸೋಂಕು ಕಳೆದ ವರ್ಷ ಅತಿಯಾಗಿದ್ದ ಸಂದರ್ಭದಲ್ಲಿ ಸೋಂಕನ್ನು ತಡೆಯಲು ಹಾಗೂ ನಿಯಂತ್ರಿಸಲು ಹೊರಡಿಸಲಾಗಿದ್ದ ಕೋವಿಡ್ ಮಾರ್ಗಸೂಚಿಗಳ ಪೈಕಿ ಅತಿ ಪ್ರಮುಖವಾಗಿದ್ದಿದ್ದು ಮಾಸ್ಕ್​ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಹಾಗೂ ದೈಹಿಕ ಅಂತರ ಕಾಪಾಡುವುದು. ಆದರೆ ಅದೆಷ್ಟೋ ಮಂದಿ ಕೋವಿಡ್ ಮಾರ್ಗಸೂಚಿ ಪಾಲಿಸಲು ವಿರೋಧಿಸಿ ಅಥವಾ ಅದನ್ನು ಪಾಲಿಸದೆ ಕೋವಿಡಿಯಟ್​ ಎಂಬ ಟೀಕೆಗೂ ಗುರಿಯಾಗಿದ್ದರು.

ಆ ಪೈಕಿ ಈ ಯುವತಿ ಕೂಡ ಒಬ್ಬಳು. 'ಮಾಸ್ಕ್​ ಹಾಕಬೇಡಿ, ಅದನ್ನು ಧೈರ್ಯವಾಗಿ ನಿರಾಕರಿಸಿ' ಎಂಬುದಾಗಿ ಕಳೆದ ಮಾರ್ಚ್​​ನಲ್ಲಿ ತೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ ಈ ಯುವತಿಗೆ, ಆ ನಂತರ ಕರೊನಾ ಸೋಂಕು ವ್ಯಾಪಿಸಿ, ಉಂಟಾದ ಸಾವು-ಸಂಕಟಗಳನ್ನೆಲ್ಲ ನೋಡಿ ತಪ್ಪಿನ ಅರಿವಾಗಿ ಈಗ ಪ್ರಾಯಶ್ಚಿತ್ತವಾಗಿದೆಯಂತೆ. ಅತಿ ಕೆಟ್ಟ ಟ್ಯಾಟೂವನ್ನು ಸ್ಟೋರಿಯಲ್ಲಿ ಹಂಚಿಕೊಳ್ಳುವ ಕುರಿತಂತೆ ಟಿಕ್​ಟಾಕ್​ನಲ್ಲಿ ನಡೆಯುತ್ತಿರುವ ಹೊಸ ಟ್ರೆಂಡ್​ನಿಂದಾಗಿ ಈ ವಿಷಯ ಬೆಳಕಿಗೆ ಬಂದಿದೆ.

'wakaflockafloccar' ಎಂಬ ಯೂಸರ್​ ನೇಮ್​ ಹೊಂದಿರುವ ಈ ಯುವತಿ ತನ್ನ ಈ ಟ್ಯಾಟೂ ಅತ್ಯಂತ ತಪ್ಪು ನಿರ್ಧಾರವಾಗಿತ್ತು, ಆ ಬಗ್ಗೆ ಈಗ ಪಶ್ಚಾತ್ತಾಪ ಎನಿಸುತ್ತಿದೆ ಎಂಬುದಾಗಿ ಹೇಳಿಕೊಂಡಿದ್ದಾಳೆ. 'ನಾನು ಕಳೆದ ಕೆಲವು ತಿಂಗಳುಗಳಿಂದ ಈ ಟ್ಯಾಟೂ ಕಾಣಿಸಬಾರದು ಎಂದುಕೊಂಡು ಫುಲ್​ ಸ್ಲೀವ್ಸ್​ ಹಾಕಿಕೊಳ್ಳುತ್ತಿದ್ದೇನೆ. ಆದರೆ ಬಹುಶಃ ನಾನು ಈ ಹಚ್ಚೆಯನ್ನು ತೆಗೆಯುವುದಿಲ್ಲ ಅನಿಸುತ್ತದೆ. ಏಕೆಂದರೆ ಇದರ ಹಿಂದೊಂದು ಕಥೆ ಇದೆ' ಎಂಬುದಾಗಿ ಈಕೆ ಹೇಳಿಕೊಂಡಿದ್ದಾಳೆ. (ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net