

ಗಿರೀಶ್ ಗರಗ
ಬೆಂಗಳೂರು: ರಾಜ್ಯದಲ್ಲಿನ 17 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ವಸೂಲಿಗೆ ಸಿದ್ಧತೆ ನಡೆಸಲಾಗಿದೆ. ಆ ಮೂಲಕ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲು ಸರ್ಕಾರ ಮುಂದಾಗಿದೆ. ಕರ್ನಾಟಕದಲ್ಲಿ ಒಟ್ಟಾರೆ 76 ಸಾವಿರ ಕಿ.ಮೀ.ಗೂ ಹೆಚ್ಚಿನ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಹೆದ್ದಾರಿಗಳಿವೆ. ತಾಲೂಕು ಮಟ್ಟದಲ್ಲಿ 50 ಸಾವಿರ ಕಿ.ಮೀ. ಪ್ರಮುಖ ರಸ್ತೆಗಳಿವೆ. ಈ ಪೈಕಿ ರಾಜ್ಯ ಹೆದ್ದಾರಿಗಳಲ್ಲಿ ಪ್ರತಿ 1 ಕಿ.ಮೀ. ರಸ್ತೆ ನಿರ್ಮಾಣ ಮತ್ತು ನಿರ್ವಹಣೆಗೆ ವಾರ್ಷಿಕ 3 ಕೋಟಿ ರೂ. ಖರ್ಚು ಅಂದಾಜಿಸಲಾಗಿದೆ. ಆ ಹಣಕ್ಕಾಗಿ ರಾಜ್ಯ ಸರ್ಕಾರ ವಿವಿಧ ಆರ್ಥಿಕ ಮೂಲಗಳಿಂದ ಸಾಲ ಪಡೆಯುತ್ತಿದೆ. ಈ ಸಾಲ ತಪ್ಪಿಸಲು ಜನರ ಮೇಲೆ ಹೊರೆ ಹಾಕಲು ನಿರ್ಧರಿಸಲಾಗಿದೆ.
ಟೋಲ್ ಪಾವತಿ ಹೆದ್ದಾರಿ
ರಾಜ್ಯದಲ್ಲಿ ಒಟ್ಟಾರೆ 29 ರಸ್ತೆಗಳಲ್ಲಿ ಟೋಲ್ ಸಂಗ್ರಹಕ್ಕೆ ತೀರ್ಮಾನಿಸಿ, ಅದರಲ್ಲಿ ಈಗಾಗಲೇ 12 ರಸ್ತೆಗಳಲ್ಲಿ ಟೋಲ್ ಸಂಗ್ರಹ ಆರಂಭಿಸಲಾಗಿದೆ. ಉಳಿದಂತೆ 4 ರಸ್ತೆಗಳಲ್ಲಿ ಖಾಸಗಿ ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ನಾಲ್ಕರಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ, ಮೂರರಲ್ಲಿ 3 ಬಾರಿ ಟೆಂಡರ್ ಕರೆದರೂ ಗುತ್ತಿಗೆದಾರರು ಸಿಗದ ಕಾರಣ, ವಾಹನಗಳ ಮರುಸರ್ವೆಗೆ ನಿರ್ಧರಿಸಲಾಗಿದೆ. ಅದಕ್ಕೆ ಸರ್ಕಾರದಿಂದ ಅನುಮತಿಯೂ ದೊರೆತಿದೆ.
ಸಾಲ ಪಡೆದ ರಸ್ತೆಗಳಲ್ಲೂ ಟೋಲ್: ವಿಶ್ವಬ್ಯಾಂಕ್ ನೆರವಿನ ಯೋಜನೆಯಲ್ಲಿ ಕೆಆರ್ಡಿಸಿಎಲ್ ಅಭಿವೃದ್ಧಿ ಪಡಿಸಿದ 6 ರಸ್ತೆಗಳಲ್ಲಿ ಟೋಲ್ ವಸೂಲಿ ಮಾಡಲು ಸರ್ಕಾರ ಈ ಹಿಂದೆಯೇ ಸೂಚಿಸಿದೆ. ಈಗಾಗಲೇ 5 ರಸ್ತೆಗಳಲ್ಲಿ ಟೋಲ್ ವಸೂಲಿ ಆರಂಭವಾಗಿದ್ದು, ಬೀದರ್-ಚಿಂಚೋಳಿ ರಸ್ತೆಯಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಹುಡ್ಕೋ ಸಂಸ್ಥೆಯಿಂದ ಸಾಲ ಪಡೆದು ಅಭಿವೃದ್ಧಿ ಮಾಡಲಾದ 2 ರಸ್ತೆಗಳ ಪೈಕಿ ಒಂದರಲ್ಲಿ ಟೋಲ್ ಶುಲ್ಕ ಆರಂಭಿಸಲು ಬೇಕಾದ ಕ್ರಮಕೈಗೊಳ್ಳಲಾಗುತ್ತಿದೆ. ಈ ಎಲ್ಲದರ ಬಗ್ಗೆ ಈಗಾಗಲೇ ಚರ್ಚೆಗಳು ನಡೆದಿವೆ. ರಾಜ್ಯದ 10,603 ಕಿ.ಮೀ. ಉದ್ದದ 225 ಜಿಲ್ಲಾ ಮುಖ್ಯರಸ್ತೆಗಳನ್ನು ರಾಜ್ಯ ಹೆದ್ದಾರಿಯನ್ನಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಇದೆ.
68 ಕೋಟಿ ರೂಪಾಯಿ ಆದಾಯ ನಿರೀಕ್ಷೆ: ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹದಿಂದಾಗಿ ಲೋಕೋಪಯೋಗಿ ಇಲಾಖೆಗೆ ವಾರ್ಷಿಕ 68 ಕೋಟಿ ರೂ. ಗೂ ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇದೆ. ಅದರಲ್ಲಿ ಟೋಲ್ ವಸೂಲಿ ಹೊಣೆ ಹೊತ್ತ ಸಂಸ್ಥೆಗಳಿಂದ ಬರುವ ಹಣ ಒಂದೆಡೆಯಾದರೆ, ಆಪ್ಟಿಕಲ್ ಫೈಬರ್ ಕೇಬಲ್, ಜಾಹೀರಾತು ಪ್ರದರ್ಶನದಿಂದ ಮತ್ತಷ್ಟು ಹಣ ವಸೂಲಿಯಾಗಲಿದೆ.