

ಲಖನೌ: ವೇದಿಕೆಯ ಮೇಲೆ ನರ್ತಿಸುತ್ತ, ಅಭಿನಯಿಸುತ್ತಾ ಮೃತಪಡುವವರ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಅಂಥದ್ದೇ ಒಂದು ಘಟನೆ ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ನಡೆದಿದೆ.
ರಾಮ್ಲೀಲಾ ನಾಟಕ ಪ್ರದರ್ಶನದ ವೇಳೆ ಮಹಾಬಲಿ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದ ಕಲಾವಿದನೊಬ್ಬ ವೇದಿಕೆಯಿಂದ ಕುಸಿದು ಮೃತಪಟ್ಟಿದ್ದಾರೆ. ದುರ್ಗಾ ಪೆಂಡಾಲ್ನಲ್ಲಿ ಜಾಗರಣೆಯ ವೇಳೆ ಲಂಕಾ ದಹನದ ದೃಶ್ಯಕ್ಕೆ ವೇದಿಕೆಯಲ್ಲಿ ನೃತ್ಯ ಮಾಡುತ್ತಿದ್ದಾಗ ಹೃದಯಘಾತವಾಗಿದ್ದು ಅಲ್ಲಿಯೇ ಕುಸಿದು ಬಿದ್ದಿದ್ದಾರೆ.
ರಾಮಸ್ವರೂಪ್ ಎಂಬ 50 ವರ್ಷದ ಕಲಾವಿದ ಹೀಗೆ ಮೃತಪಟ್ಟವರು. ಧಾತಾ ಪೊಲೀಸ್ ಠಾಣೆ ವ್ಯಾಪ್ತಿಯ ಸೇಲಂಪುರ ಗ್ರಾಮದಲ್ಲಿ ಘಟನೆ ನಡೆದಿದೆ. ನವರಾತ್ರಿಯ ಪ್ರಯುಕ್ತ ಸೇಲಂಪುರದಲ್ಲಿ ದೇವಿಯ ಜಾಗರಣ ಕಾರ್ಯಕ್ರಮ ನಡೆಯುತ್ತಿತ್ತು. ರಾಮಸ್ವರೂಪ ಮಹಾಬಲಿ ಹನುಮಂತನ ಪಾತ್ರ ಮಾಡುತ್ತಿದ್ದರು. ಲಂಕೆಗೆ ಬೆಂಕಿ ಹಚ್ಚಲು ಅವನ ಬಾಲಕ್ಕೆ ಬೆಂಕಿ ಹಚ್ಚಲಾಗಿತ್ತು. ವೇದಿಕೆ ಮೇಲೆ ಅವರು ನರ್ತಿಸುತ್ತಲೇ ಇದ್ದರು. ಆದರೆ ಏಕಾಏಕಿ ಅವರು ವೇದಿಕೆಯ ಮೇಲಿನಿಂದ (ಸಿಂಹಾಸನ) ತಲೆಕೆಳಗಾಗಿ ಕೆಳಗೆ ಕುಸಿದು ಬಿದ್ದಿದ್ದಾರೆ. ಕೂಡಲೇ ಜನರು ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಅವರು ಕೊನೆಯುಸಿರೆಳೆದಿದ್ದರು.
ವೇದಿಕೆ ಎದುರಿದ್ದ ಅವರ ಪತ್ನಿ ಅನುಸೂಯಾ, ಪುತ್ರಿ ಹಾಗೂ ನೂರಾರು ಜನರು ಅವರ ಸಾವನ್ನು ಕಣ್ಣಾರೆ ಕಂಡಿದ್ದಾರೆ. ರಾಮಸ್ವರೂಪ್ ದೋಣಿ ಚಲಾಯಿಸಿ ಕುಟುಂಬವನ್ನು ನೋಡಿಕೊಳ್ಳುತ್ತಿದ್ದರು ಎಂದು ಗ್ರಾಮದ ಮುಖಂಡ ಗುಲಾಬ್ ತಿಳಿಸಿದ್ದಾರೆ. ಸದ್ಯ ತನಿಖೆ ನಡೆಸಲಾಗುತ್ತಿದೆ. ಇದರ ವಿಡಿಯೋ ವೈರಲ್ ಆಗಿದೆ. (ಏಜೆನ್ಸೀಸ್)
ಇಲ್ಲಿದೆ ನೋಡಿ ವಿಡಿಯೋ