ಅಭಿಮಾನಿ ಎಂದಿದ್ದ ಆಟೋ ಡ್ರೈವರ್​ ಮನೆಗೆ ಊಟಕ್ಕೆ ಹೋಗಿ ಬೀಗಿದ್ದ ಕೇಜ್ರಿವಾಲ್​ಗೆ ಹೀಗೆ ಆಗೋದಾ?

auto
Published on

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಭಾರಿ ಮುಖಭಂಗ ಆಗುವಂಥ ಘಟನೆಯೊಂದು ನಡೆದಿದೆ. ಅದೇನೆಂದರೆ, "ನಾನು ನಿಮ್ಮ ಅಭಿಮಾನಿ" ಎಂದು ಹೇಳಿಕೊಂಡ ಆಟೋ ಡ್ರೈವರ್​ ಒಬ್ಬರು ಕೇಜ್ರಿವಾಲ್​ ಅವರನ್ನು ಮನೆಗೆ ಊಟಕ್ಕೆ ಕರೆದಿದ್ದರು. ಈ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದ ಕೇಜ್ರಿವಾಲ್​ ಅವರು ಮನೆಗೆ ಹೋಗಿ ಊಟಕ್ಕೆ ಹೋಗಿ ಫೋಟೋಗೆ ಪೋಸ್​ ಕೊಟ್ಟು ಅದನ್ನು ಶೇರ್​ ಕೂಡ ಮಾಡಿಕೊಂಡಿದ್ದರು.

ಆದರೆ ಮಾರನೆಯ ದಿನವೇ ಈ ಆಟೋ ಡ್ರೈವರ್​ ಉಲ್ಟಾ ಹೊಡೆದಿದ್ದಾರೆ. 'ನಾನು ಚಿಕ್ಕಂದಿನಿಂದಲೂ ನರೇಂದ್ರ ಮೋದಿಯವರ ಭಕ್ತ. ಯಾವಾಗಲೂ ಬಿಜೆಪಿಗೇ ವೋಟ್​ ಹಾಕಿದ್ದೇನೆ. ನಾನು ಇರುವವರೆಗೂ ಮೋದಿಯವರಿಗೇ ವೋಟ್​ ಹಾಕುವುದು. ಕೇಜ್ರಿವಾಲ್​ ಅವರನ್ನು ಸುಮ್ಮನೇ ಊಟಕ್ಕೆ ಕರೆದಿದ್ದೆ' ಎಂದಿದ್ದಾರೆ. ಅವರು ಹೇಳಿರುವ ಈ ಮಾತು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದ್ದು, ಕೇಜ್ರಿವಾಲ್​ ಮುಖಭಂಗ ಅನುಭವಿಸುವಂತಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆಯ ಆಮ್ ಆದ್ಮಿ ಪಕ್ಷದ ಪ್ರಚಾರದ ಭಾಗವಾಗಿ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿದ್ದ ಅರವಿಂದ್ ಕೇಜ್ರಿವಾಲ್ ಅಹಮದಾಬಾದ್‌ನಲ್ಲಿ ಆಟೋ ರಿಕ್ಷಾ ಚಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಆ ಸಮಯದಲ್ಲಿ ಆಟೋ ಚಾಲಕ ವಿಕ್ರಮ್ ದಾತಾನಿ ತಾವು ಕೇಜ್ರಿವಾಲ್​ ಅವರ ಅಭಿಮಾನಿ ಎಂದು ಹೇಳಿಕೊಂಡು ಅವರನ್ನು ಮನೆಗೆ ಊಟಕ್ಕೆ ಕರೆದಿದ್ದರು. ಈ ಬಗ್ಗೆ ಹೆಮ್ಮೆಯಿಂದ ಬೀಗಿದ್ದ ಕೇಜ್ರಿವಾಲ್​ ಆಹ್ವಾನ ಸ್ವೀಕರಿಸಿ ಫೋಟೋ ಸೆಷನ್​ ಮಾಡಿಸಿಕೊಂಡಿದ್ದರು.

ಆದರೆ ಇದೀಗ ಅವತ್ತಿನ ಗುಟ್ಟು ಬಿಚ್ಚಿಟ್ಟಿದ್ದಾರೆ ಆಟೋ ಚಾಲಕ ವಿಕ್ರಮ್ ದಾತಾನಿ. ಬಿಜೆಪಿ ಟೋಪಿ ಧರಿಸಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಗೆ ಆಗಮಿಸಿದ್ದ ಅವರು, ತಾವು ಕೇಜ್ರಿವಾಲ್​ ಅವರನ್ನು ಏಕೆ ಮನೆಗೆ ಕರೆದೆ ಎಂಬ ಬಗೆಗಿನ ರಹಸ್ಯ ಬಿಚ್ಚಿಟ್ಟಿದ್ದಾರೆ. “ನಾನು ಬಾಲ್ಯದಿಂದಲೂ ಮೋದಿ ಅವರ ಅಭಿಮಾನಿಯೇ. ಆದರೆ ನಮ್ಮ ಆಟೊ ಒಕ್ಕೂಟದವರು ಹೇಳಿದ್ದ ಕಾರಣ, ಸುಮ್ಮನೇ ಅರವಿಂದ್ ಕೇಜ್ರಿವಾಲ್ ಅವರನ್ನು ನನ್ನ ಮನೆಗೆ ಆಹ್ವಾನಿಸಿದ್ದೇ ಅಷ್ಟೇ. ಹಾಗೆಂದು ನಾನು ಯಾವತ್ತೂ ಆಮ್​ ಆದ್ಮಿ ಪಕ್ಷಕ್ಕೆ ವೋಟ್​ ಹಾಕುವವನಲ್ಲ' ಎಂದಿದ್ದಾರೆ! ಆಟೋ ಸಂಘದವರು ಚಾಲೆಂಜ್​ ಮಾಡಿದ್ದರಿಂದ ಕೇಜ್ರಿವಾಲ್​ ಅವರನ್ನು ಮನೆಗೆ ದಾತಾನಿ ಊಟಕ್ಕೆ ಕರೆದಿದ್ದರು ಎನ್ನಲಾಗಿದೆ. ಇದನ್ನು ಬಿಜೆಪಿ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ಥಹರೇವಾರಿ ಕಮೆಂಟ್​ ಬರುತ್ತಿವೆ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net