

ಹುಬ್ಬಳ್ಳಿ: ಪತಿಯ ಸಾವಿಗೆ ನ್ಯಾಯ ಸಿಗದ ಹಿನ್ನೆಲೆಯಲ್ಲಿ ನೊಂದುಕೊಂಡು ಗ್ರಾಪಂ ಸದಸ್ಯ ದೀಪಕ್ ಪಟದಾರಿ ಪತ್ನಿ ಪುಷ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ!
ಆತ್ಮಹತ್ಯೆಗೂ ಮುನ್ನ ಅವರು ಬರೆದಿರುವ ಡೆತ್ನೋಟ್ ಪತ್ತೆಯಾಗಿದೆ. 'ನನ್ನ ಸಾವಿಗೆ ಕಾರಣ ಮೇಟಿ ಕುಟುಂಬದವರು' ಎಂದು ಬರೆದ ಪುಷ್ಪಾ ಅವರು ಡೆತ್ನೋಟ್ನಲ್ಲಿ ಬರೆದಿದ್ದಾರೆ. 'ಪ್ರಮುಖವಾಗಿ ಯಲ್ಲಪ್ಪ ಶಂಕ್ರಪ್ಪ ಮೇಟಿ, ರುದ್ರಪ್ಪ ಶಂಕ್ರಪ್ಪ ಮೇಟಿ , ಕುಮಾರ್ ಮಹದೇವಪ್ಪ ಮೇಟಿ, ನವೀನ್, ಬಸಪ್ಪ ಮದ್ಲಿಂಗಣ್ಣನವರ ಅವರೇ ನನ್ನ ಸಾವಿಗೆ ಕಾರಣ' ಎಂದು ಬರೆದಿದ್ದಾರೆ.
'ನನ್ನ ಗಂಡನನ್ನು ರಾಜಕೀಯ ವೈಷಮ್ಯದಿಂದ ಬಹಳ ಹೀನಾಯವಾಗಿ ಹತ್ಯೆಗೈದಿದ್ದಾರೆ. ಆರೋಪಿಗಳ ವಿವರ ನೀಡಿದರೂ ಪೊಲೀಸರು ಅವರನ್ನು ಬಂಧಿಸಲು ಸರಿಯಾಗಿ ಸ್ಪಂದಿಸುತ್ತಿಲ್ಲ. ನನ್ನ ಗಂಡನಿಗೆ ನ್ಯಾಯ ಕೊಡಿಸಲು ಆಗಲಿಲ್ಲ ಎಂದು ನೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂಬ ಆಘಾತಕಾರಿ ಅಂಶವನ್ನು ಪುಷ್ಪಾ ಡೆತ್ನೋಟ್ನಲ್ಲಿ ಬರೆದಿದ್ದಾರೆ.
ಇಂತಹ ದುಷ್ಟ ಸರ್ಕಾರದಲ್ಲಿ ಬದುಕಲು ಇಷ್ಟ ಇಲ್ಲ. ಈ ಎಲ್ಲರಿಗೂ ಜೀವಾವಧಿ ಶಿಕ್ಷೆ ಆಗುವಂಥ ತೀರ್ಪು ಕೊಡಬೇಕು. ಜೀವಾವಧಿ ಶಿಕ್ಷೆ ಆಗದಿದ್ದಲ್ಲಿ ನನ್ನ ಕೊನೆಯ ವಿಧಿ ವಿಧಾನ ಮಾಡುವಂತಿಲ್ಲ ಎಂದು ಅವರು ಬರೆದಿದ್ದಾರೆ.
ಅಂದಹಾಗೆ, ಪುಷ್ಪಾ ಅವರು ಕಳೆದ 28ರ ರಾತ್ರಿ ನವನಗರ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್ ನೋಟ್ ಪರಿಶೀಲನೆ ಮಾಡುವಂತೆ ಪೊಲೀಸರಿಗೆ ಕಮಿಷನರ್ ಲಾಭೂರಾಮ್ ಸೂಚಿಸಿದ್ದಾರೆ.
ಮೇಟಿ ಕುಟುಂಬದ ಪುಷ್ಪಾ ಅವರನ್ನು ದೀಪಕ ಪ್ರೀತಿಸಿ ಮದುವೆಯಾಗಿದ್ದರು. ಮದುವೆಗೆ ಪುಷ್ಪಾ ಅವರ ಕುಟುಂಬದ ಸಮ್ಮತಿ ಇರಲಿಲ್ಲ. ರಾಯನಾಳ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂದರ್ಭ ದೀಪಕ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಈ ವಿಷಯವಾಗಿ ದೀಪಕ ಅವರನ್ನು ಇದೇ ಜುಲೈ 4ರಂದು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ’ ಎಂದು ದೀಪಕ ಅವರ ಸಹೋದರ ಸಂಜಯ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ರಾಜಕೀಯ ಕಾರಣಕ್ಕಾಗಿ ದೀಪಕ ಅವರನ್ನು ಹತ್ಯೆ ಮಾಡಲಾಗಿದ್ದರೂ ಪ್ರಮುಖ ಆರೋಪಿಗಳನ್ನು ಪೊಲೀಸರು ಕೈ ಬಿಟ್ಟಿದ್ದಾರೆ ಎಂದು ಆರೋಪಿಸಿ ಇದಾಗಲೇ ದೀಪಕ ಅವರ ಸಹೋದರ ಸಂಜಯ್ ಅವರು ಪುಷ್ಪಾ ಮರಾಠಾ ಸಮುದಾಯದವರ ಜತೆ ಸೇರಿ ಪ್ರತಿಭಟನೆ ನಡೆಸಿದ್ದರು.
ಸದ್ಯ ಅಪ್ಪ-ಅಮ್ಮನನ್ನು ಕಳೆದುಕೊಂಡಿರುವ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. (ದಿಗ್ವಿಜಯ ನ್ಯೂಸ್)