

ಜೈಪುರ: ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಕೆಲವು ದಿನಗಳಿಂದ ನಡೆಯುತ್ತಿರುವ ಆಂತರಿಕ ಜಟಾಪಟಿ ಕೊನೆಗೂ ಒಂದು ಹಂತಕ್ಕೆ ಬಂದು ಮುಟ್ಟಿದೆ ಎನ್ನುವಾಗಲೇ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ರಾಜಸ್ಥಾನದ ಸಿಎಂ, ಅಶೋಕ್ ಗೆಹ್ಲೋಟ್ ಅವರು ಬರೆದಿರುವ ಪತ್ರವೊಂದು ಇದೀಗ ಪಕ್ಷದಲ್ಲಿ ಕೋಲಾಹಲ ಸೃಷ್ಟಿ ಮಾಡಿದೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮೊದಲು ಸ್ಪರ್ಧಿಸಹೊರಟವರು ಅಶೋಕ್ ಗೆಹ್ಲೋಟ್. ಒಂದು ವೇಳೆ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ ಸಿಎಂ ಸ್ಥಾನವನ್ನು ಬಿಟ್ಟುಕೊಡಬೇಕಿತ್ತು. ಅವರು ಸಿಎಂ ಸ್ಥಾನ ಬಿಟ್ಟುಕೊಟ್ಟರೆ ಆ ಜಾಗಕ್ಕೆ ಸಚಿನ್ ಪೈಲಟ್ ಸಿಎಂ ಆಗುತ್ತಾರೆ ಎಂದೇ ವಿಶ್ಲೇಷಿಸಲಾಗಿತ್ತು. ಆದರೆ ಪೈಲಟ್ ಅವರು ಮುಖ್ಯಮಂತ್ರಿಯಾಗಲು ತಾವು ಬಿಡುವುದಿಲ್ಲ ಎಂದು ಗೆಹ್ಲೋಟ್ ಬಣದ ಕಾರ್ಯಕರ್ತರು ಬಂಡಾಯ ಎದ್ದು, ರಾಜೀನಾಮೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ನಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಗೆಹ್ಲೋಟ್ ವಿರುದ್ಧ ಕೆಂಗಣ್ಣು ಬೀರಿದ್ದರು. ಇಷ್ಟೆಲ್ಲಾ ಬೆಳವಣಿಗೆಗಳ ನಂತರ ಸೋನಿಯಾ ಅವರಿಗೆ ಕ್ಷಮೆಯಾಚಿಸಿದ್ದ ಗೆಹ್ಲೋಟ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಹೇಳಿ ಹಿಂದಕ್ಕೆ ಸರಿದರು.
ಆದರೆ ಈ ನಡುವೆಯೇ ಒಂದು ಕುತೂಹಲದ ಘಟನೆ ನಡೆದಿದೆ. ಅದೇನೆಂದರೆ, ಕ್ಷಮೆಕೋರುವ ಸಂಬಂಧ ಸೋನಿಯಾ ಗಾಂಧಿಯವರ ಬಳಿ ಸೆಪ್ಟೆಂಬರ್ 29ರಂದು ದೆಹಲಿಗೆ ಗೆಹ್ಲೋಟ್ ಆಗಮಿಸಿದ್ದ ಸಂದರ್ಭದಲ್ಲಿ ಅವರ ಕೈಯಲ್ಲಿದ್ದ ಕೈಬರಹದ ಪತ್ರವೊಂದು ಮಾಧ್ಯಮವೊಂದರ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು, ಅದೀಗ ಭಾರಿ ವೈರಲ್ ಆಗಿದೆ. ಮಲಯಾಳಂ ಮನೋರಮಾ ಪತ್ರಿಕೆಯ ಕ್ಯಾಮೆರಾಮನ್ ಅವರು ಗೆಹ್ಲೋಟ್ ಹಿಡಿದುಕೊಂಡಿದ್ದ ಪತ್ರದ ಫೋಟೋ ಕ್ಲಿಕ್ಕಿಸಿದ್ದು, ಅದೀಗ ಸದ್ದು ಮಾಡುತ್ತಿದೆ.
ಅದರಲ್ಲಿ ಇರುವುದು ಏನೆಂದರೆ, 'ಸಚಿನ್ ಪೈಲಟ್ ಕಾಂಗ್ರೆಸ್ ತೊರೆಯುತ್ತಾರೆ. ಬಿಜೆಪಿಯೊಂದಿಗಿನ ಒಪ್ಪಂದದಿಂದ ಪಕ್ಷವನ್ನು ತೊರೆಯುವ ಸಾಧ್ಯತೆ ಇದೆ. ಅವರು ತಮ್ಮದೇ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿದ ರಾಜ್ಯದ ಮೊದಲ ನಾಯಕ. ಪೈಲಟ್ಗೆ ಕೇವಲ 18 ಶಾಸಕರ ಬೆಂಬಲವಿದೆ. ನನಗೆ 102 ಮಂದಿಯ ಬೆಂಬಲವಿದೆ. ಇದೇ ದ್ವೇಷದಿಂದ ಪಕ್ಷಕ್ಕೆ ಪೈಲಟ್ ಅವರಿಂದ ಅನಾಹುತವಾಗುವ ಸಾಧ್ಯತೆ ಇದೆ. ಅಧಿಕಾರದ ಲಾಲಸೆಗೆ ಅವರು ಹೀಗೆ ಮಾಡಬಹುದು. ರಾಜಸ್ಥಾನಕ್ಕೆ ಕಳುಹಿಸಿರುವ ಕೇಂದ್ರ ವೀಕ್ಷಕರು ತಮ್ಮ ವರದಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ, ಇಲ್ಲದಿದ್ದರೆ ಪಕ್ಷಕ್ಕೆ ನಷ್ಟ' ಎಂದು ಬರೆಯಲಾಗಿದೆ.
ಸಚಿನ್ ಪೈಲಟ್ ಅವರನ್ನು 'ಎಸ್ಪಿ' ಎಂದು ಪತ್ರದಲ್ಲಿ ಸಂಬೋಧಿಸಲಾಗಿದೆ. ಅದರಲ್ಲಿ ಅವರ ಬೆಂಬಲಿಗರಿಗೆ "ಗೂಂಡಾ, ಸೇಡು ಮತ್ತು ಅಹಂಕಾರಿ" ಪದಗಳನ್ನು ಬಳಸಲಾಗಿದೆ. ಪಕ್ಷದಲ್ಲಿಯೇ ಇಷ್ಟೊಂದು ವೈಮನಸ್ಸು ಹೇಗಿದೆ ಎಂಬ ಬಗ್ಗೆ ಥಹರೇವಾರಿ ಕಮೆಂಟ್ಗಳೊಂದಿಗೆ ಈ ಪತ್ರ ವೈರಲ್ ಆಗಿದೆ. ಅರ್ಧ ಪತ್ರ ಗೆಹ್ಲೋಟ್ ಅವರ ಕೈಯಿಂದ ಮುಚ್ಚಲ್ಪಟ್ಟಿದ್ದರಿಂದ ಈ ಅರ್ಧದಷ್ಟು ಅಂಶಗಳು ಮಾತ್ರ ಕ್ಯಾಮರಾ ಕಣ್ಣಿಗೆ ಬಿದ್ದಿವೆ. ಪತ್ರದಲ್ಲಿ 10 ಕೋಟಿ ಬಿಜೆಪಿ ಎಂದು ಬರೆದಿರುವುದನ್ನೂ ಕಾಣಬಹುದು. ಸದ್ಯ ಈ ಪತ್ರದ ಆಧಾರದ ಮೇಲೆ ಕಾಂಗ್ರೆಸ್ ನಾಯಕಿ ಸೋನಿಯಾ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ. (ಏಜೆನ್ಸೀಸ್)