

ಬೆಂಗಳೂರು: ಉಸಿರಾಟದ ಸಮಸ್ಯೆಯಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕಳೆದ ಭಾನುವಾರ ದಾಖಲಾಗಿದ್ದ ಮಾಜಿ ಸಿಎಂ ಎಸ್ಎಂ ಕೃಷ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
90 ವರ್ಷದ ಕೃಷ್ಣ ಅವರನ್ನು ತೀವ್ರ ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಅವರು ಆರೋಗ್ಯವಾಗಿದ್ದಾರೆ ಮತ್ತು ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಈ ಮೊದಲು ವೈದೇಹಿ ( ಮಲ್ಯ) ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇಲ್ಲಿನ ವೈದ್ಯರ ಸಲಹೆ ಮೇರೆಗೆ ಕುಟುಂಬಸ್ಥರು ಎಸ್ಎಂಕೆ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.
ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಸಚಿವರು ಭೇಟಿ ನೀಡಿ, ಕೃಷ್ಣ ಅವರ ಆರೋಗ್ಯ ವಿಚಾರಿಸಿದ್ದರು. ಈ ವೇಳೆ ತಾವು ಆರೋಗ್ಯವಾಗಿದ್ದು ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ಅವರು ತಿಳಿಸಿದ್ದರು.
ಕೃಷ್ಣ ಕೃತಜ್ಞತೆ: ಕಳೆದ ಕೆಲ ದಿನಗಳಿಂದ ತಮ್ಮ ಆರೋಗ್ಯದ ಬಗ್ಗೆ ಆತಂಕಗೊಂಡು ಚೇತರಿಕೆಗೆ ಹಾರೈಸಿದ ಹಿತೈಷಿಗಳು, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಎಸ್.ಎಂ. ಕೃಷ್ಣ ಕೃತಜ್ಞತೆ ಸಲ್ಲಿಸಿದ್ದಾರೆ. (ಏಜೆನ್ಸೀಸ್)