

ಬೆಂಗಳೂರು: ಕಳೆದ ಆಗಸ್ಟ್ 11ರ ರಾತ್ರಿ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ಡಿ.ಜೆ.ಹಳ್ಳಿ, ಕೆ.ಜಿಹಳ್ಳಿ ಗಲಭೆ ಪ್ರಕರಣದ ಆಳಕ್ಕೆ ಹೋದಷ್ಟೂ ಪೊಲೀಸರಿಗೆ ಭಯಾನಕ ಮಾಹಿತಿಗಳೇ ದೊರಕುತ್ತಿವೆ. ಫೇಸ್ಬುಕ್ನಲ್ಲಿ ಹಾಕಿರುವ ಕಮೆಂಟ್ ಒಂದನ್ನೇ ನೆಪಮಾಡಿಕೊಂಡು ಬೆಂಕಿ ಹಚ್ಚಿದ್ದ ಕಿಡಿಗೇಡಿಗಳ ಬಣ್ಣ ಒಂದೊಂದಾಗಿ ಈಗ ಹೊರಬರುತ್ತಿದೆ.
ಹಿಂದೂ ದೇವರಿಗೆ ಅವಹೇಳನ ಮಾಡಿ ಫೇಸ್ಬುಕ್ನಲ್ಲಿ ಪೋಸ್ಟ್ ಒಂದನ್ನು ಯಾರೋ ಹಾಕಿದ್ದರು. ಅದರಿಂದ ರೊಚ್ಚಿಗೆದ್ದಿದ್ದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರ ಸೋದರಳಿಯ ನವೀನ್, ಆ ಪೋಸ್ಟ್ಗೆ ಪ್ರವಾದಿ ಮುಹಮ್ಮದ್ ಅವರ ವಿರುದ್ಧದ ಹೇಳಿಕೆ ಪೋಸ್ಟ್ ಮಾಡಿದ್ದ. ಇದನ್ನೇ ನೆಪ ಮಾಡಿಕೊಂಡು ಗಲಭೆಯನ್ನು ಸೃಷ್ಟಿಸಲಾಗಿತ್ತು.
ಇದಾಗಲೇ ಈ ಪ್ರಕರಣದಲ್ಲಿ ಬೆಂಗಳೂರಿನ ಮಾಜಿ ಮೇಯರ್ ಕಾಂಗ್ರೆಸ್ ಮುಖಂಡ ಸಂಪತ್ರಾಜ್ ಅವರು ಆರೋಪಿ ಎಂದು ಪೊಲೀಸರು ತನಿಖೆ ಶುರುಮಾಡಿದ್ದಾರೆ. ಇದೀಗ ಗಲಭೆ ನಡೆದ ದಿನ ಇವರ ಮೊಬೈಲ್ಫೋನ್ನಿಂದ ಹೊರಹೋಗಿರುವ ಮತ್ತು ಒಳಬಂದಿರುವ ಕರೆಗಳ ದಾಖಲೆಗಳು ಪೊಲೀಸರಿಗೆ ಸಿಕ್ಕಿವೆ.
ಇದನ್ನೂ ಓದಿ: ಮಸೀದಿಯಿಂದ ವಾಪಸಾಗುವ ವೇಳೆ ಉಗ್ರರ ದಾಳಿ: ಎಸ್ಐ ಹತ್ಯೆ
ಈ ದಾಖಲೆಗಳನ್ನು ನೋಡಿದಾಗ ಸಂಪತ್ರಾಜ್ ಅವರ ಮೇಲಿನ ಗುಮಾನಿ ಪೊಲೀಸರಿಗೆ ಇನ್ನಷ್ಟು ಬಲವಾಗಿದೆ. ಸಂಪತ್ರಾಜ್ ಹಾಗೂ ಗಲಭೆ ನಡೆಸಿ, ದಾಂಧಲೆ ಸೃಷ್ಟಿಸಿ, ಸುತ್ತಮುತ್ತಲೂ ಬೆಂಕಿ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಆರೋಪ ಹೊತ್ತ ಕೆಲವರ ನಡುವೆ ನಡೆದಿರುವ ಅಂದು ನಡೆದಿರುವ ಮಾತುಕತೆಯ ಕಾಲ್ ರೆಕಾರ್ಡ್ಸ್ ಇದೀಗ ನೇರವಾಗಿ ಸಂಪತ್ರಾಜ್ರತ್ತ ಬೆರಳುಮಾಡಿ ತೋರಿಸುತ್ತಿವೆ.
ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ನಡೆಸುವ ಮುನ್ನ ಸಂಪತ್ ರಾಜ್, ಆರೋಪಿಗಳ ಜತೆ ಸಂಪರ್ಕದಲ್ಲಿದ್ದ ಬಗ್ಗೆ ಸಿಕ್ಕಿರುವ ಸುಳಿವು ಸಿಕ್ಕಿದೆ. ಘಟನೆ ನಡೆದ ಸಂಜೆ 6ರಿಂದ ತಡರಾತ್ರಿ 2ರವರೆಗೂ ಆರೋಪಿಗಳಾದ ಸಜ್ಜದ್ ಖಾನ್, ಮುಜಾಹಿದ್ ಪಾಷಾ, ಯಾಸೀನ್ ಜಾಕೀರ್, ವಾಜಿದ್ ಪಾಷಾ, ಅರುಣ್ ಜತೆ ‘ಕೈ’ ಮುಖಂಡ ಸಂಪತ್ರಾಜ್ ಮೊಬೈಲ್ಫೋನ್ನಲ್ಲಿ ಮಾಡಿರುವ ಕರೆಗಳ ವಿವರಗಳು ಇದೀಗ ಬಹಿರಂಗಗೊಂಡಿದೆ.
ಅಷ್ಟೇ ಅಲ್ಲದೇ ಈ ಗಲಭೆ ಪೂರ್ವ ನಿಯೋಜಿತ ಎನ್ನುವುದನ್ನು ಸಾಬೀತುಮಾಡುವಂತೆ ಇದೇ ಆರೋಪಿಗಳು ಘಟನಾ ಸ್ಥಳದ ಸುತ್ತಮುತ್ತಲು ಇದ್ದುಕೊಂಡೇ ಸಂಪತ್ರಾಜ್ ಜತೆ ನೇರವಾಗಿ ಮಾತುಕತೆ ನಡೆಸುತ್ತಿದ್ದರು ಎಂದು ಮೊಬೈಲ್ ಟವರ್ ಲೊಕೇಶನ್ ಮೂಲಕ ಸಾಬೀತಾಗಿದೆ.
ಪೊಲೀಸ್ ಮೂಲಗಳಿಂದ ತಿಳಿದುಬಂದಿರುವ ಕಾಲ್ ಡಿಟೇಲ್ಸ್ಗಳು ಹೀಗಿವೆ..
* ಗಲಭೆ ನಡೆದ ಆಗಸ್ಟ್ 11ರ ಸಂಜೆ 6.50ಕ್ಕೆ ಸಂಪತ್ ರಾಜ್ ಕಾರು ಚಾಲಕನ ಜತೆ 66 ಸೆಕೆಂಡ್ ಮಾತನಾಡಿದ್ದಾರೆ.
* ಸಂಜೆ 7 ಗಂಟೆ 8ನಿಮಿಷಕ್ಕೆ ಆ ಕಾರು ಚಾಲಕ ಇನ್ನೋರ್ವ ಆರೋಪಿ ಸಂತೋಷ್ ಜತೆ 148 ಸೆಕೆಂಡ್ ಮಾತನಾಡಿದ್ದಾನೆ.
* 7.17ಕ್ಕೆ ಗಲಭೆ ಆರೋಪಿ ಮುಜಾಹಿದ್ ಪಾಷಾಗೆ ಸಂತೋಷ್ ಕರೆ ಮಾಡಿದ್ದು 53 ಸೆಕೆಂಡ್ ಮಾತುಕತೆ ನಡೆದಿದೆ.
* 7.49ಕ್ಕೆ ಪುನಃ ಸಂತೋಷ್ಗೆ ಕರೆ ಮಾಡಿದ್ದ ಸಂಪತ್ ರಾಜ್. 59 ಸೆಕೆಂಡ್ ಮಾತನಾಡಿದ್ದಾರೆ.
* 7.53ಕ್ಕೆ ಯಾಸಿನ್ ಜಾಕೀರ್ಗೆ ಶಫಿ ಉಲ್ಲಾ ಕರೆ ಮಾಡಿ 47 ಸೆಕೆಂಡ್ ಮಾತುಕತಡೆ ನಡೆಸಲಾಗಿದೆ.
* ವಾಜಿದ್ ಪಾಷಾಗೆ ಕರೆ ಮಾಡಿದ್ದ ಶಫಿ ಉಲ್ಲಾ 25 ಸೆಕೆಂಡ್ ಮಾತನಾಡಿದ್ದಾರೆ.
* ಶಫಿ ಉಲ್ಲಾಗೆ ಮೊದಲು ಜಾಕೀರ್ ಕರೆ ಮಾಡಿದ್ದಾನೆ, ನಂತರ ವಾಜಿದ್ಗೆ ಶಫಿ ಉಲ್ಲಾ ಕರೆ ಮಾಡಿದ್ದಾನೆ. ಈ ಮೂವರ ನಡುವೆ ಪದೇ ಪದೇ ಫೋನ್ಕಾಲ್ಗಳು ಹೋಗಿವೆ.
* ರಾತ್ರಿ 8.10ಕ್ಕೆ ಶಫಿ ಉಲ್ಲಾನಿಂದ ವಾಜಿದ್ಗೆ ಕರೆ ಮಾಡಿ ಒಂದು ನಿಮಿಷ ಮಾತನಾಡಿದ್ದಾರೆ. ಕೂಡಲೇ ಸಂಪತ್ ರಾಜ್ಗೆ ಕಾಲ್ ಮಾಡಲಾಗಿದೆ. 59 ಸೆಕೆಂಡ್ ಮಾತುಕತೆ ನಡೆದಿದೆ. ನಂತರ ಶಫಿ ಉಲ್ಲಾ, ವಾಜಿದ್, ಜಾಕೀರ್ ಮಧ್ಯೆ ಮತ್ತೆ ಪುನಃ ಪುನಃ ಮಾತುಕತೆ ನಡೆದಿದೆ.
* ರಾತ್ರಿ 8.48 ರಿಂದ 9:09 ರ ಮಧ್ಯೆ ಜಾಕೀರ್ಗೆ ಮೂರು ಬಾರಿ ಕಾಲ್ ಮಾಡಿರುವ ಸಂಪತ್ರಾಜ್ 149 ಸೆಕೆಂಡ್ ಮಾತಾಡಿದ್ದಾರೆ. ಪುನಃ ರಾತ್ರಿ 9.9ಕ್ಕೆ 56 ಸೆಕೆಂಡ್ ಮಾತನಾಡಿದ್ದಾರೆ.