ಗಗನಯಾತ್ರಿಗಳಿಗೆ ಇನ್ನು ಆಕಾಶದಲ್ಲೇ ಸಿಗಲಿದೆ ಮೂಲಂಗಿ- ಕಟಾವಿಗೆ ಸಿದ್ಧವಾಯ್ತು ಬೆಳೆ!

NASA
Published on

ವಾಷಿಂಗ್ಟನ್: ಬಾಹ್ಯಾಕಾಶದತ್ತ ವಿಜ್ಞಾನಿಗಳು ದೃಷ್ಟಿ ಹರಿಸಿ ಅದೆಷ್ಟೋ ವರ್ಷಗಳಾಗಿ ಹೋಗಿವೆ. ಮಂಗಳ, ಚಂದ್ರ ಸೇರಿದಂತೆ ಕೆಲವು ಗ್ರಹಗಳನ್ನು ಜಾಲಾಡಿಯೂ ಆಗಿದೆ, ಕೆಲವು ಗ್ರಹಗಳಲ್ಲಿ ನೀರು ಗುರುತಿಸಿದ್ದಾರೆ, ಜೀವಿಗಳ ವಾಸ ಇರುವಿಕೆ ಪತ್ತೆ ಹಚ್ಚಿದ್ದಾರೆ. ಮನುಷ್ಯನ ವಾಸಯೋಗ್ಯವಾಗಲು ಏನೇನು ಬೇಕೋ ಎಲ್ಲವನ್ನೂ ಮಾಡುತ್ತಿದ್ದಾರೆ. ಆದರೂ ವಿಜ್ಞಾನಿಗಳಿಗೆ ತೃಪ್ತಿ ಇಲ್ಲ. ಕುತೂಹಲ ಎನ್ನುವಂಥ ಹೊಸ ಹೊಸ ಸಂಶೋಧನೆಗಳನ್ನು ಮಾಡುತ್ತಲೇ ಇದ್ದಾರೆ.

ಇದೀಗ ಇನ್ನೂ ಅಚ್ಚರಿ ಎನ್ನುವ ಸಂಶೋಧನೆಯನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಾಡಿದೆ. ಅದೇನೆಂದರೆ ಬಾಹ್ಯಾಕಾಶದಲ್ಲಿ ಅತೀ ಕಡಿಮೆ ಗುರುತ್ವಾಕಷಣೆ ಅಡಿಯಲ್ಲಿ ಮೂಲಂಗಿಯನ್ನು ಬೆಳೆಯಲಾಗಿದೆ.

ಮೂಲಂಗಿ ಅತೀ ಕಡಿಮೆ ಅವಧಿಯಲ್ಲಿ ಫಲ ಕೊಡುತ್ತದೆ. ಅಲ್ಲದೆ ಬಾಹ್ಯಾಕಾಶದಲ್ಲಿ ಅಧ್ಯಯನ ಮಾಡುವ ಸಸ್ಯ ಥಳಿಗೆ ಮೂಲಂಗಿ ಹೋಲುತ್ತದೆ. ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿದೆ. ಹೀಗಾಗಿ ಮೂಲಂಗಿ ಬೆಳೆ ಆಯ್ಕೆ ಮಾಡಿಕೊಳ್ಳಲಾಗಿದೆ. ಜತೆಗೆ ಮೂಲಂಗಿ ಹಸಿಯಾಗಿ ತಿನ್ನಲು ಯೋಗ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮೂಲಂಗಿಯನ್ನು ಬೆಳೆಯಲು ವಿಜ್ಞಾನಿಗಳು ಮುಂದಾಗಿದ್ದು, ಇದೀಗ ಯಶಸ್ವಿ ಪಡೆದಿದ್ದಾರೆ.

ಮೈಕ್ರೋಗ್ರಾವಿಟಿಯಡಿ ತರಕಾರಿಯನ್ನು ಬೆಳೆಯುವ ಪ್ರಯತ್ನಕ್ಕೆ ಇದು ಮುನ್ನುಡಿ ಬರೆದಂತಾಗಿದೆ. ಮೂಲಂಗಿ ಬೆಳೆಯು ಕಡಿಮೆ ಗುರುತ್ವಾಕರ್ಷಣೆಯ ವಾತಾವರಣದಲ್ಲಿಯೂ ಬೆಳೆಯಲು ಸಾಧ್ಯ ಎಂಬ ಸಂಪೂರ್ಣ ಅಧ್ಯಯನ ಕೈಗೊಂಡ ನಂತರ ಈ ನಿರ್ಧಾರಕ್ಕೆ ಬರಲಾಗಿತ್ತು. ಅದೀಗ ಫಲ ಕಂಡಿದೆ.

ಗುರುತ್ವಾಕರ್ಷಣೆ ಕಡಿಮೆ ಇರುವ ಹಿನ್ನೆಲೆ ಆ ಸ್ಥಳದಲ್ಲಿ ಗಿಡದ ಬುಡಗಳು ಮಣ್ಣನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ಹೀಗಾಗಿ ದಿಂಬುಗಳಲ್ಲಿ ಬೀಜಗಳನ್ನು ಹಾಕಿ ಬೆಳೆಯಲಾಗಿದೆ. ಗಿಡದ ಬುಡಕ್ಕೆ ನೀರು ಹಾಗೂ ಗೊಬ್ಬರ ಪೂರೈಕೆ ಮಾಡಲು ದಿಂಬನ್ನು ಬಳಸಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಭೂಮಿಯಿಂದ ಲಕ್ಷಾಂತರ ಮೈಲಿ ದೂರ ಅನ್ಯಗ್ರಹಗಳಿಗೆ ಹೊಗುವ ಗಗನಯಾನಿಗಳಿಗೆ ನಿಯಮಿತವಾಗಿ ತಾಜಾ ಆಹಾರ ಮೂಲ ಬೇಕಾಗಬಹುದು ಎಂಬ ಉದ್ದೇಶದಿಂದ ಈ ಪ್ರಯೋಗವನ್ನು ಮಾಡಿದೆ. ಬಾಹ್ಯಾಕಾಶದಲ್ಲಿ ಬೆಳೆದಿರುವ ಕಡುಗೆಂಪು ಬಣ್ಣದ ಮೂಲಂಗಿ ಕಟಾವಿಗೆ ಸಿದ್ಧವಾಗಿದೆ. ಇದರ ಸ್ಯಾಂಪಲ್‍ಗಳನ್ನು ಅಧ್ಯಯನಕ್ಕಾಗಿ ಭೂಮಿಗೆ ಕಳಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net