Training to be organized: ನಿಷೇಧಿತ ಪಿಎಫ್‌ಐ ಮುಖಂಡರ ಡೈರಿಯ ರಹಸ್ಯ ಬಯಲು- ಸ್ಫೋಟಕ ಮಾಹಿತಿ ಬಹಿರಂಗ

PFI
Published on

ಬೆಂಗಳೂರು: ಪಾಪುಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಎಫ್​ಐ) ನಿಷೇಧ ಮಾಡಿ ಕೆಲ ದಿನಗಳು ಕಳೆದಿರುವ ನಡುವೆಯೇ ಈ ಸಂಘಟನೆ ಕುರಿತು ಪೊಲೀಸರು ಆಳವಾದ ತನಿಖೆ ಕೈಗೊಂಡಿದ್ದಾರೆ. ಈ ಸಂಘಟನೆ ಕುರಿತು ಅಗೆದಷ್ಟೂ ಬಗೆದಷ್ಟೂ ಆತಂಕಕಾರಿ ವಿಷಯಗಳು ಹೊರಬರುತ್ತಿವೆ.

ಕಳೆದ ವರ್ಷ ಬೆಂಗಳೂರಿನ ಕೆ.ಜಿ.ಹಳ್ಳಿಯಲ್ಲಿ ನಡೆದ ಭಯಾನಕ ಕೃತ್ಯದ ಹಿಂದೆ ಇದೇ ಪಿಎಫ್​ಐ ಕಾರ್ಯಕರ್ತರ ಕೈವಾಡ ಇದೆ ಎಂದು ಇದಾಗಲೇ ಪೊಲೀಸರು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕೆಲವೊಬ್ಬರನ್ನು ಬಂಧಿಸಲಾಗಿದೆ. ಈ ಸಂಘಟನೆ ನಿಷೇಧದ ಬಳಿಕ, ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಬೆಚ್ಚಿ ಬೀಳಿಸೋ ಮಾಹಿತಿ ಬಹಿರಂಗಗೊಳಿಸಿದ್ದಾರೆ. ಸಾಕ್ಷಿಗಳ ಸಹಿತ ತನಿಖೆಯಲ್ಲಿ ಸ್ಫೋಟಕ ಅಂಶ ಬಹಿರಂಗಗೊಂಡಿದೆ.

ಈ ಹಿಂದೆ ವಶಕ್ಕೆ ಪಡೆಯಲಾಗಿದ್ದ ಪಿಎಫ್‌ಐ ಮುಖಂಡರ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿತ್ತು. ಕೆ.ಜಿ ಹಳ್ಳಿ ಹಾಗೂ ಸಿಸಿಬಿ ಪೊಲೀಸರಿಗೆ ತನಿಖೆ ವೇಳೆ ಡೈರಿಯೊಂದು ಸಿಕ್ಕಿತ್ತು. ಆ ಡೈರಿಯಲ್ಲಿ Training to be organized ಅಂತ ಮಾತ್ರ ಬರೆದಿದ್ದು ಸ್ಥಳ ಹಾಗೂ ದಿನಾಂಕ ಬರೆದಿರಲಿಲ್ಲ. ಹೀಗಾಗಿ ತನಿಖಾಧಿಕಾರಿಗಳಿಗೆ ಹಲವಾರು ಪ್ರಶ್ನೆಗಳು ಉದ್ಭವಿಸಿದ್ದವು. ಏನಿದು Training to be organized? ಇದು ಯಾವ ರೀತಿಯದ್ದು, ಯಾರಿಗೆ ಟ್ರೈನಿಂಗ್ ಎಂಬೆಲ್ಲಾ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದು, ಈಗ ಆತಂಕಕಾರಿ ಮಾಹಿತಿ ಸಿಕ್ಕಿದೆ.

ಅದೇನೆಂದರೆ, ಈ ಟ್ರೇನಿಂಗ್​ (ತರಬೇತಿ) ನಡೆಯುತ್ತಿದ್ದುದು ದಕ್ಷಿಣ ಕನ್ನಡ ಮತ್ತು ಕಲಬುರಗಿ ಎಂದು ತಿಳಿದುಬಂದಿದೆ. ಇದು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಮಾಡುತ್ತಿದ್ದ ತರಬೇತಿ ಎನ್ನಲಾಗಿದೆ. ಮೊದಲಿಗೆ ಪಿಎಫ್​ಐ ಸಂಘಟನೆಯಲ್ಲಿ ಇರುವ ಕೆಲವು ಯುವಕರನ್ನು ಗುರುತಿಸಲಾಗುತ್ತಿತ್ತು. ಹೀಗೆ ಗುರುತಿಸಲ್ಪಡುವ ಯುವಕರ ಪೂರ್ವಪರ ಪರಿಶೀಲನೆ ನಡೆಯುತ್ತದೆ. ಬಳಿಕ ಸೂಕ್ತ ಯುವಕರನ್ನು ಆಯ್ಕೆ ಮಾಡಿ ಮಿತ್ತೂರಿಗೆ ಹಾಗೂ ಕಲಬುರಗಿಗೆ ಕಳಿಸಲಾಗುತ್ತೆ.

ಹೋಗುವಾಗ, ಯುವಕರ ಯಾವುದೇ ಜಾಡು ಯಾರಿಗೂ ತಿಳಿಯಬಾರದು ಎನ್ನುವ ಕಾರಣಕ್ಕೆ ಅವರ ಐಡಿ ಕಾರ್ಡ್​ನಿಂದ ಹಿಡಿದು ಮೊಬೈಲ್​ವರೆಗೆ ಏನನ್ನೂ ತೆಗೆದುಕೊಂಡು ಹೋಗುವಂತೆ ಇಲ್ಲ. ಸರ್ಕಾರಿ ಬಸ್​ನಲ್ಲಿ ಆನ್​ಲೈನ್​ನಲ್ಲಿ ಸೀಟ್ ಬುಕ್ಕಿಂಗ್ ಮಾಡಿಕೊಳ್ಳಬಾರದು. ಇಲ್ಲದಿದ್ದರೆ ಅವರ ಗುರುತು ಪತ್ತೆಯಾಗುತ್ತದೆ. ಆದ್ದರಿಂದ ಕೌಂಟರ್​ಗೆ ಹೋಗಿ ಟಿಕೆಟ್ ಮಾತ್ರ ಖರೀದಿ ಮಾಡಿ ಬರಬೇಕು.

ನಂತರ ಟ್ರೈನಿಂಗ್ ಸೆಂಟರ್​ಗೆ ಕರೆದುಕೊಂಡು ಹೋಗಲಾಗುತ್ತೆ. ಅಲ್ಲಿ ಮೆಂಟಲ್ ಹೆಲ್ತ್. ಫಿಸಿಕಲ್ ಫಿಟ್ನೆಸ್ ಚೆಕ್ ಮಾಡಿ ಮುಂದೆ ಯಾವ ರೀತಿ ವಿಧ್ವಂಸಕ ಕೃತ್ಯ ನಡೆಸಬೇಕು ಎಂಬ ಬಗ್ಗೆ ಅವರಿಗೆ ವಿವರಣೆ ನೀಡಲಾಗುತ್ತಿತ್ತು ಎಂಬ ಅಂಶವನ್ನು ಪೊಲೀಸರು ಪತ್ತೆ ಹಚ್ಚಿದ್ದು, ಸದ್ಯ ಅದರ ಹಿಂದೆ ಬಿದ್ದಿದ್ದಾರೆ (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net