

ಮುಂಬೈ: ಇನ್ನೇನು ಗೌರಿ-ಗಣೇಶನ ಹಬ್ಬ ಹತ್ತಿರ ಬರುತ್ತಿದೆ. ಗಣೇಶ ಚತುರ್ಥಿ ಎಂದಾಕ್ಷಣ ಎಲ್ಲರ ಗಮನ ಹೋಗುವುದು ಮಹಾರಾಷ್ಟ್ರದತ್ತ. ಅದರಲ್ಲಿಯೂ ಮುಂಬೈನಲ್ಲಿ ಗಣೇಶನ ಹಬ್ಬದ ವೈಶಿಷ್ಠ್ಯವೇ ಬೇರೆ. ಇಲ್ಲಿನ ಗಣಪನನ್ನು ನೋಡಲು ವಿದೇಶಗಳಿಂದಲೂ ಜನರು ಆಗಮಿಸುವುದು ಇದೆ. ಅಷ್ಟು ಭರ್ಜರಿಯಾಗಿ, ವೈವಿಧ್ಯಮಯವಾಗಿ ಇಲ್ಲಿ ಗಣಪನ ಹಬ್ಬವನ್ನು ಆಚರಿಸಲಾಗುತ್ತದೆ.
ಈಗ ಭಾರಿ ಸುದ್ದಿಯಲ್ಲಿರುವ ಮುಂಬೈನ ಗಣಪ ಎಂದರೆ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‍ಬಿ) ಸೇವಾ ಮಂಡಲದ ವತಿಯಿಂದ ಕುಳ್ಳರಿಸಲಾಗುವ ಗಣಪ. ಇದೀಗ ಅತ್ಯಂತ ಶ್ರೀಮಂತ ಗಣೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಕಾರಣ, ಈ ವರ್ಷ ಇದಕ್ಕೆ ದಾಖಲೆಯ 316.40 ಕೋಟಿ ರೂ. ವಿಮೆ ಮಾಡಿಸಲಾಗಿದೆ!
ಈತನಿಗೆ 66 ಕೆಜಿ ಚಿನ್ನಾಭರಣ, 295 ಕೆಜಿ ಬೆಳ್ಳಿ ಸೇರಿದಂತೆ ವಿವಿಧ ಆಭರಣಗಳಿಗೆ ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂಪೆನಿಯಿಂದ 31.97 ಕೋಟಿ ರೂ. ಮೊತ್ತದ ವಿಮೆ ಮಾಡಿಸಲಾಗಿದೆ. ಗಣೇಶೋತ್ಸವ ವೇಳೆ ಅನಾಹುತ ಸಂಭವಿಸಿದರೆ ಅದಕ್ಕೆ ಪರಿಹಾರವಾಗಿ 1 ಕೋಟಿ ರೂ. ವಿಮೆ ಮಾಡಿಸಲಾಗಿದೆ. ಇನ್ನು, ಭದ್ರತಾ ಸಿಬ್ಬಂದಿ, ಅರ್ಚಕರು, ಅಡುಗೆ ಮಾಡುವವರು, ಸ್ವಯಂ ಸೇವಕರಿಗಾಗಿ ಒಟ್ಟು 263 ಕೋಟಿ ರೂ. ವಿಮೆ ಮಾಡಿಸಲಾಗಿದೆ. ಸಾರ್ವಜನಿಕ ಹೊಣೆಗಾರಿಕೆ ಅಡಿಯಲ್ಲಿ ಭಕ್ತರು, ಗಣಪತಿ ಕೂರಿಸುವ ಪೆಂಡಾಲ್, ಕ್ರೀಡಾಂಗಣ ಸೇರಿ ಇನ್ನಿತರ ಎಂದು 20 ಕೋಟಿ ರೂ. ವಿಮೆ ಮಾಡಿಸಲಾಗಿದೆ. ಇದೂ ಸೇರಿದಂತೆ ಎಲ್ಲವನ್ನೂ ಲೆಕ್ಕಾಚಾರ ಹಾಕಿದರೆ 316.40 ಕೋಟಿ ರೂ. ಮೊತ್ತದ ವಿಮೆ ಇದಾಗಿದೆ.
ಪ್ರತಿವರ್ಷವೂ ಇಲ್ಲಿಯ ಗಣಪತಿಗೆ ಹೀಗೆ ವಿಮೆ ಮಾಡಿಸುವುದು ಸಾಮಾನ್ಯ. ಆದರೆ ಈ ಬಾರಿಯ ವಿಮೆಯ ಮೊತ್ತ ದಾಖಲೆಯ ಪ್ರಮಾಣದ್ದಾಗಿದೆ. ಕಳೆದೆರಡು ವರ್ಷ ಕರೊನಾ ಕಾರಣದಿಂದ ಉತ್ಸವ ನಡೆಯಲಿಲ್ಲ. ಅದಕ್ಕೂ ಮುನ್ನ 289 ಕೋಟಿ ರೂ. ವಿಮೆ ಮಾಡಲಾಗಿತ್ತು. ಅದಕ್ಕೂ ಮುನ್ನ 289 ಕೋಟಿ ರೂ. ವಿಮೆ ಮಾಡಲಾಗಿತ್ತು. 2016ರಲ್ಲಿ 300 ಕೋಟಿ ರೂಪಾಯಿ ವಿಮೆ ಮಾಡಿಸಿದ್ದೇ ಇಲ್ಲಿಯವರೆಗೆ ದೊಡ್ಡ ಮೊತ್ತವಾಗಿತ್ತು. ಇದೀಗ ವಿಮೆಯ ಮೊತ್ತವನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಇದರ ಜತೆ, ಈ ವರ್ಷ ಪೂಜೆ, ಪ್ರಸಾದ ಸೇರಿದಂತೆ ಇತರ ವ್ಯವಸ್ಥೆಗಳಿಗೆ ಕ್ಯೂ ಆರ್ ಕೋಡ್ ಸ್ಕ್ಯಾನ್ ಮೂಲಕ ಡಿಜಿಟಲ್ ವ್ಯವಸ್ಥೆಗೆ ಒತ್ತು ನೀಡಿದೆ. (ಏಜೆನ್ಸೀಸ್)