

ತುಮಕೂರು: ನೂತನ ಕೃಷಿ ಕಾನೂನು ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದ ವೇಳೆ ಟ್ವಿಟರ್ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ಆರೋಪ ಹೊತ್ತ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ನಗರದ ಕ್ಯಾತಸಂದ್ರ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ಹೈಕೋರ್ಟ್ ವಕೀಲ ರಮೇಶ್ ನಾಯ್ಕ್ ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಜೆಎಂಎಫ್ಸಿ ನ್ಯಾಯಾಲಯವು ಕಂಗನಾ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಲು ಕೋರ್ಟ್ ಆದೇಶಿಸಿತ್ತು.
ಸೆಪ್ಟೆಂಬರ್ 21ರಂದು ಕಂಗನಾ ತಮ್ಮ ಟ್ವಿಟರ್ ಖಾತೆಯಲ್ಲಿ ಕೃಷಿ ಮಸೂದೆ ಪ್ರತಿಭಟನೆ ವಿರೋಧವಾಗಿ ಟ್ವೀಟ್ ಮಾಡಿದ್ದರು.
ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನ ಭಯೋತ್ಪಾದಕರಿಗೆ ಹೋಲಿಕೆ ಮಾಡಿದ್ದರು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗೆ ಕರ್ನಾಟಕ, ಪಂಜಾಬ್, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಸಲಾಗುತ್ತಿದ್ದು, ಈ ವೇಳೆ ಕಂಗನಾ ಟ್ವೀಟ್ ಮಾಡಿದ್ದರು.
ಈ ಸಂಬಂಧ ವಕೀಲ ರಮೇಶ್ ನಾಯ್ಕ್ ಅವರು ಕಂಗನಾ ವಿರುದ್ಧ ದೂರು ದಾಖಲಿಸಿದ್ದರು. ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ ಎಂದು ಆರೋಪಿಸಿದ್ದ ರಮೇಶ್ ಅವರು ನೇರವಾಗಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇದೀಗ ಎಫ್ಐಆರ್ ದಾಖಲು ಮಾಡಲಾಗಿದೆ.