

ಭೋಪಾಲ್: ಮದುವೆಯ ಸಂಭ್ರಮದಲ್ಲಿದ್ದವರು ಮಸಣ ಸೇರಿದ ಭಯಾನಕ ಘಟನೆ ಮಧ್ಯಪ್ರದೇಶದ ಖಂಡವಾ ಜಿಲ್ಲೆಯಲ್ಲಿ ನಡೆದಿದೆ. ಹಣೆಮಣೆ ಏರುವ ಕನಸುಕಾಣುತ್ತಿದ್ದ ಮದುಮಗ ಈ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದರೆ, ಮದುವೆಯ ಸಂಭ್ರಮದಲ್ಲಿದ್ದ ಆರು ಮಂದಿಯನ್ನು ಅಪಘಾತ ಬಲಿಪಡೆದಿದೆ!
ಮದುವೆ ದಿಬ್ಬಣ ಹೊತ್ತ ಟ್ರ್ಯಾಕ್ಟರ್ ಖಂಡವಾ ಜಿಲ್ಲೆಯ ಖಾಲ್ವಾ ಕ್ಷೇತ್ರದ ಮಹಲೂ ಗ್ರಾಮದ ಸೇತುವೆ ಮೇಲಿಂದ ಪಲ್ಟಿಯಾದ ಪರಿಣಾಮ ಈ ಸಾವು ಸಂಭವಿಸಿದ್ದು, ಉಳಿದವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ನಿನ್ನೆ ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ಮದುವೆ ದಿಬ್ಬಣ ಟ್ರ್ಯಾಕ್ಟರ್ನಲ್ಲಿ ಹೊರಟಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಸೇತುವೆ ಮೇಲೆ ಪಲ್ಟಿಯಾಗಿದೆ. ಟ್ರಾಲಿಯಲ್ಲಿ ಕುಳಿತಿದ್ದ ಜನರು ಸೇತುವೆ ಮೇಲಿಂದ 15 ಅಡಿ ಆಳದ ನದಿಗೆ ಬಿದ್ದಿದ್ದಾರೆ. ನದಿಯಲ್ಲಿ ಕಡಿಮೆ ಪ್ರಮಾಣದ ನೀರು ಇದ್ದು ಕಲ್ಲುಗಳ ರಾಶಿಯೇ ಇತ್ತು. ಕಲ್ಲುಗಳ ಮೇಲೆ ಬಿದ್ದ ಜನರ ರಕ್ತದಿಂದ ನೀರು ಕೆಂಪಾಗಿರುವ ಘಟನೆ ನಡೆದಿದೆ.
ಟ್ರ್ಯಾಕ್ಟರ್ ಟ್ರೋಲಿಯಲ್ಲಿ ಒಟ್ಟು 35 ಜನರು ಪ್ರಯಾಣಿಸುತ್ತಿದ್ದರು. ಮದುಮಗ, ಆತನ ತಾಯಿ, ತಂದೆ ಸೇರಿದಂತೆ ಒಟ್ಟು ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಖಂಡವಾ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಚಾಲಕನ ನಿಯಂತ್ರಣ ತಪ್ಪಿದ ಹಿನ್ನೆಲೆ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಖಾಲ್ವಾ ಠಾಣೆಯ ಪೊಲೀಸರು ಹೇಳಿದ್ದಾರೆ. ಇಡೀ ಊರಿನಲ್ಲಿ ಸೂತಕದ ಕರಾಳ ಛಾಯೆ ಆವರಿಸಿದೆ.