ಡ್ರಗ್ಸ್​ ಪ್ರಕರಣ: ಭಾರ್ತಿ, ಕರಿಷ್ಮಾಗೆ ಬೇಲ್​- ಇಬ್ಬರು ತನಿಖಾಧಿಕಾರಿಗಳು ಸಸ್ಪೆಂಡ್​!

bharthisingh
Published on

ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್​ನ ಇಬ್ಬರು ಆರೋಪಿಗಳಿಗೆ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ, ತನಿಖಾ ಸಂಸ್ಥೆಯ ಇಬ್ಬರು ತನಿಖಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಬಾಲಿವುಡ್ ನಟಿ, ಕಾಮಿಡಿಯನ್ ಭಾರ್ತಿ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಕರಿಷ್ಮಾ ಅವರಿಗೆ ಜಾಮೀನು ಸಿಕ್ಕಿದ್ದು ಈ ಇಬ್ಬರು ಅಧಿಕಾರಿಗಳಿಗೆ ಮುಳುವಾಗಿದೆ. ಇದಕ್ಕೆ ಕಾರಣ, ಈ ಇಬ್ಬರ ವಿರುದ್ಧ ಗಂಭೀರ ಆರೋಪಗಳು ಇದ್ದರೂ ಸೂಕ್ತವಾದ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ್ದಾರೆ ಎನ್ನುವುದು.

ಇವರ ವಿರುದ್ಧ ಪ್ರಬಲವಾದ ಸಾಕ್ಷ್ಯಾಧಾರ ಇದ್ದರೂ ಕೋರ್ಟ್​ಗೆ ಸೂಕ್ತ ಸಾಕ್ಷ್ಯಗಳನ್ನು ಒದಗಿಸದೇ, ತನಿಖೆಯನ್ನು ಸರಿಯಾಗಿ ಮಾಡದೇ ಕೋರ್ಟ್​ ಜಾಮೀನು ನೀಡಲು ಕಾರಣವಾಯಿತು ಎಂಬ ಕಾರಣಕ್ಕೆ ಈ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಮಾದಕ ದ್ರವ್ಯಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 21ರಂದು ಮುಂಬೈನ ಖಾರದಂಡಾ ಇಲಾಖೆಯ ಯುವಕನ ನಿವಾಸದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ. 21 ವರ್ಷದ ಯುವಕನನ್ನು ವಿಚಾರಣೆಗೆ ಒಳಪಡಿಸಿದಾಗ ಭಾರ್ತಿ ಸಿಂಗ್ ಹೆಸರು ಹೇಳಿದ್ದ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಭಾರ್ತಿ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದರು.

ಭಾರ್ತಿ ಸಿಂಗ್ ನಿವಾಸ ಮತ್ತು ಪ್ರೊಡೆಕ್ಷನ್ ಕಚೇರಿಯ ಮೇಲೆ ಎನ್‍ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದ ಸಂದರ್ಭದಲ್ಲಿ 86.5 ಗ್ರಾಂ ಗಾಂಜಾ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಭಾರ್ತಿ ಹಾಗೂ ಅವರ ಪತಿ ಹರ್ಷ್ ಲಿಂಬಾಚಿಯಾ ಅವರನ್ನು ಪೊಲೀಸರು ಬಂಧಿಸಿದ್ದರು.

ಅದೇ ರೀತಿ, ಡ್ರಗ್ಸ್​ ಪ್ರಕರಣದಲ್ಲಿ ಕರಿಷ್ಮಾ ಪ್ರಕಾಶ್‌ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ವೇಳೆ ಹಲವು ಸಾಕ್ಷಿಗಳು ಸಿಕ್ಕಿದ್ದವು. ಆ ಬಳಿಕ ವಿಚಾರಣೆಗೆ ಹಾಜರಾಗುವಂತೆ ಕರಿಷ್ಮಾಗೆ ಸಮನ್ಸ್‌ ನೀಡಲಾಗಿತ್ತು. ಆದರೆ ಬಂಧನದ ಭೀತಿಯಿಂದಾಗಿ ಅವರು ತಲೆಮರೆಸಿಕೊಂಡಿದ್ದರು. ಅವರು ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸಿದ್ದರು. ಅವರ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳ ನೀಡಲು ಅಧಿಕಾರಿಗಳು ವಿಫಲರಾದ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net