

ಕ್ಯಾಲಿಫೋರ್ನಿಯಾ: ಯಾರ್‍ಯಾರಿಗೆ ಯಾವ್ಯಾವಾಗ ಏನೇನು ಉಪಯೋಗಕ್ಕೆ ಬರುತ್ತದೆ ಎಂದು ಹೇಳುವುದು ಕಷ್ಟ.
ಅಂಥದ್ದೇ ಒಂದು ಪ್ರಸಂಗ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಕುಡುಕನೊಬ್ಬನಿಗೆ ಭಯಾನಕ ಕಾಳ್ಗಿಚ್ಚಿನಿಂದ ಬಿಯರ್ ಕ್ಯಾನ್ ಪ್ರಾಣ ಹಾಗೂ ಆಸ್ತಿ ಪಾಸ್ತಿಯನ್ನು ಉಳಿಸಿರುವ ಘಟನೆ ಇದಾಗಿದೆ.
ವಾಕಾವಿಲ್ಲೆ ಎಂಬಲ್ಲಿ ವಾಸಿಸುತ್ತಿರುವ ಚಾಡ್ ಲಿಟಲ್ ಎಂಬುವವರು ತಮ್ಮ ಮನೆಗೆ ಹಚ್ಚಿಕೊಂಡಿದ್ದ ಬೆಂಕಿಯನ್ನು ನಂದಿಸಲು ಬಿಯರ್ ಕ್ಯಾನ್‌ಗಳನ್ನು ಬಳಸಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ, ವಾಕಾವಿಲ್ಲೆಯಲ್ಲಿ ಭಯಾನಕ ಕಾಳ್ಗಿಚ್ಚು ಹೊತ್ತಿಕೊಂಡಿತು. ಬೆಂಕಿಯ ಉಂಡೆ ಚಾಡ್ ಮನೆಯತ್ತಲೂ ಬರಲು ಶುರು ಮಾಡಿತು.
ಚಾಡ್ ಕುಟುಂಬ ತನ್ನೆಲ್ಲಾ ವಸ್ತುಗಳನ್ನು ಗಂಟು ಮೂಟೆ ಕಟ್ಟಿಕೊಂಡು ಅಲ್ಲಿಂದ ಹೊರಡಲು ಸಿದ್ಧವಾಗಿತ್ತು. ಐದು ವರ್ಷಗಳ ಹಿಂದಿನ ಕಾಳ್ಗಿಚ್ಚಿನ ಕಾರಣದಿಂದ ತಮ್ಮ ಮನೆಯನ್ನು ಕಳೆದುಕೊಂಡಿದ್ದ ಚಾಡ್ ಈ ಬಾರಿ ಆ ರೀತಿ ಆಗದಂತೆ ಮಾಡಲು ನಿರ್ಧರಿಸಿಬಿಟ್ಟಿದ್ದರು.
ಆದ್ದರಿಂದ ನೀರು ಹಾಯಿಸಿ ಬೆಂಕಿಯನ್ನು ನಂದಿಸಲು ಮುಂದಾದರು. ಆದರೆ ಮನೆ ಸುತ್ತಲಿನ ನೀರು ಪೂರೈಕೆ ಕೊಳಾಯಿಗಳನ್ನು ಬಂದ್ ಮಾಡಿದ್ದ ಕಾರಣ ತಕ್ಷಣಕ್ಕೆ ನೀರು ಸಿಗಲಿಲ್ಲ. ಆಗ ಅವರಿಗೆ ಯೋಚನೆ ಬಂದದ್ದು ಬಿಯರ್ ಕ್ರೇಟ್.
ತಮ್ಮಲ್ಲಿದ್ದ ಒಂದು ಕ್ರೇಟ್‌ನಷ್ಟು ಲೈಟ್ ಬಿಯರ್‌ನ್ನು ಕೈಗೆತ್ತಿಕೊಂಡ ಚಾಡ್, ಬೆಂಕಿಯ ಮೇಲೆ ಬಿಯರ್ ಸ್ಪ್ರೇ ಮಾಡಲು ಆರಂಭಿಸಿದರು. ಕೊನೆಗೂ ಅವರ ಪ್ರಯತ್ನ ಯಶಸ್ಸು ಕಂಡಿತು. ಅಗ್ನಿಶಾಮಕ ಸಿಬ್ಬಂದಿ ಮನೆಗೆ ಆಗಮಿಸುವ ಮುನ್ನ ಬೆಂಕಿಯನ್ನು ನಂದಿಸುವಲ್ಲಿ ಚಾಡ್ ಸಫಲರಾಗಿದ್ದು, ತಮ್ಮ ಪ್ರಾಣದ ಜತೆಗೆ, ಆಸ್ತಿ ಪಾಸ್ತಿಯನ್ನೂ ಉಳಿಸಿಕೊಂಡಿದ್ದಾರೆ.